ಕಾರೈಕಲ್: ಪುದುಚೆರಿಯಲ್ಲಿ ಶೇ 75ರಷ್ಟು ಯುವಜನರು ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ಮತ ನೀಡಿದರೆ ಪುದುಚೇರಿಯ ನಿರುದ್ಯೋಗ ಪ್ರಮಾಣವನ್ನು ಶೇ 40ಕ್ಕಿಂತ ಕಡಿಮೆ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರೈಕಲ್‌ನಲ್ಲಿ ಪುದುಚೇರಿಯ ಮತದಾರರಿಗೆ ಭರ್ಜರಿ ಆಶ್ವಾಸನೆ ನೀಡಿದರು.
ತಮಿಳುನಾಡು ಮತ್ತು ಪುದುಚೇರಿ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ, ಮುಂಬರುವ ಚುನಾವಣೆಯಲ್ಲಿ ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು. ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇತ್ತೀಚಿಗಷ್ಟೇ ಬೇರೆಲ್ಲ ವಲಯಗಳಿಗೂ ಪ್ರತ್ಯೇಕ ಇಲಾಖೆಗಳಿವೆ. ಆದರೆ, ಮೀನುಗಾರಿಕೆಗೆ ಮಾತ್ರ ಏಕೆ ಸಚಿವಾಲಯ ಇಲ್ಲ ಎಂದು ಪ್ರಶ್ನಿಸಿದ್ದರು. ಆದರೆ 2019ರಿಂದಲೇ ಮೀನುಗಾರಿಕೆ ಸಂಬಂಧಿಸಿದ ಇಲಾಖೆ ಇದೆ. ಈ ವಿಷಯವನ್ನೂ ತಿಳಿದಿರದ ವ್ಯಕ್ತಿಯನ್ನು ನೀವು ನಾಯಕನನ್ನಾಗಿ ಹೊಂದಲು ಇಚ್ಛಿಸುವಿರಾ’ ಎಂದು ಅಮಿತ್ ಶಾ ವ್ಯಂಗ್ಯವಾಡಿದರು.
ಕಾಂಗ್ರೆಸ್ನಲ್ಲಿ ಸ್ಥಾನಮಾನ ದೊರೆಯದು
ಪುದುಚೇರಿಯಲ್ಲೊಂದೇ ಅಲ್ಲದೇ, ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಸ್ಥಾನಮಾನ ದೊರೆಯುವುದಿಲ್ಲ ಎಂಬುದನ್ನು ಈ ಪ್ರಕ್ರಿಯೆ ಸೂಚಿಸುತ್ತದೆ. ಮುಂದಿನ ಚುನಾವಣೆಯಲ್ಲಿ ಪುದುಚೇರಿಯಲ್ಲೂ ಬಿಜೆಪಿ ಸರಳ ಬಹುಮತವನ್ನು ಪಡೆಯಲಿದೆ ಎಂದು ಅವರು ನೆರೆದಿದ್ದ ಅಪಾರ ಕಾರ್ಯಕರ್ತರ ಎದುರು ಘೋಷಿಸಿದರು.
ಇದೇ ವೇಳೆ ತಮಿಳುನಾಡಿನಲ್ಲಿ ಸೀಟು ಹಂಚಿಕೆ ಕುರಿತು ಸಲಹೆ ನೀಡಿದ ಅಮಿತ್ ಶಾ, ತಮಿಳುನಾಡಲ್ಲಿ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳ ಕುರಿತು ಎಐಎಡಿಎಂಕೆ ನಾಯಕರ ಜತೆ ಚರ್ಚಿಸಿ. ನಂತರ ಸೀಟು ಹಂಚಿಕೆ ಮಾಡಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ತಿಳಿಸಿದರು.
ತಮಿಳುನಾಡು ವಿಧಾನಸಭೆಯ ಬಲಾಬಲ ಎಷ್ಟು?
ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 124 ಸ್ಥಾನ ಗೆದ್ದಿರುವ ಎಐಎಡಿಎಂಕೆ ಆಡಳಿತ ಪಕ್ಷವಾಗಿ ರಚಿಸಿದ ಸರ್ಕಾರ ಸದ್ಯ ಅಸ್ತಿತ್ವದಲ್ಲಿದೆ. ಡಿಎಂಕೆ 97, ಕಾಂಗ್ರೆಸ್ 7, ಐಯುಎಂಎಲ್ 1, ಎಎಂಎಂಕೆ 1 ಕ್ಷೇತ್ರಗಳನ್ನು ಹೊಂದಿದ್ದು, 4 ಸ್ಥಾನಗಳು ಖಾಲಿಯಾಗಿವೆ.
ಆಡಳಿತಾರೂಢ ಎಐಎಡಿಎಂಕೆ ಸರ್ಕಾರದಿಂದಲೂ ಭರದ ಸಿದ್ಧತೆ
ಮುಂಬರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಸರ್ಕಾರ ಸಿದ್ಧತೆ ಜೋರಾಗಿಯೇ ಮಾಡಿಕೊಳ್ಳುತ್ತಿದೆ. ಯಾವುದೇ ಕ್ಷಣದಲ್ಲಾದರೂ ಮುಂದಿನ ಚುನಾವಣೆಯ ಡೇಟ್ ಅನೌನ್ಸ್ ಆಗಲಿದೆ. ಚುನಾವಣೆ ದಿನಾಂಕ ಪ್ರಕಟವಾದ್ರೆ ನೀತಿ ಸಂಹಿತೆ ಜಾರಿಯಾಗುತ್ತೆ. ಹೀಗಾಗಿ ತಮಿಳುನಾಡು ಸರ್ಕಾರ ದಿಢೀರನೆ ಪ್ರಮುಖ ನಿರ್ಧಾರವೊಂದು ತೆಗೆದುಕೊಂಡಿದ್ದು, ಸರ್ಕಾರಿ ಉದ್ಯೋಗಿಗಳನ್ನು ತನ್ನತ್ತ ಸೆಳೆಯುವ ಪ್ರಯತ್ನವಾಗಿ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದೆ.
ತಮಿಳುನಾಡಿನಲ್ಲಿ ನಿವೃತ್ತಿ ವಯಸ್ಸು 59 ವರ್ಷದಿಂದ 60 ವರ್ಷಕ್ಕೆ ಏರಿಕೆ ಮಾಡಿ ತಮಿಳುನಾಡು ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಘೋಷಣೆ ಮಾಡಿದ್ದಾರೆ. ಈ ರೀತಿ ಒಂದು ವರ್ಷದ ವಿಸ್ತರಣೆ ಮಾಡುವ ಮೂಲಕ ಸರ್ಕಾರಿ ಉದ್ಯೋಗಿಗಳ ಮನ ಗೆಲ್ಲುವ ಪ್ರಯತ್ನ ಮಾಡಿದೆ.
ಕರ್ನಾಟಕದ ಹೋರಾಟಗಾರರಿಂದ ಪ್ರಧಾನಿ ವಿರುದ್ಧ ಆರೋಪ
ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ ನಗರದಲ್ಲಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಾಟಾಳ್ ಧರಣಿ ಮಾಡಿದ್ದಾರೆ. ಈ ನಡುವೆ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ ನದಿ ಜೋಡಣೆಗೆ ತಮಿಳುನಾಡು ಸರ್ಕಾರ ರೂಪಿಸಿರುವ ಯೋಜನೆಗೆ ಕರ್ನಾಟಕ ಸರ್ಕಾರ ಅವಕಾಶ ನೀಡದಂತೆ ಆಗ್ರಹಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅಸಮರ್ಥ ಎಂದು ಕಿಡಿಕಾರಿದ ವಾಟಾಳ್ ರಾಜ್ಯದ ಗುಪ್ತದಳ ಸಂಪೂರ್ಣ ವಿಫಲವಾಗಿದೆ ಎಂದು ಗುಡುಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಓರ್ವ ಬಕಾಸುರ. ಅವರಿಗೆ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ದುರುದ್ದೇಶವಿದೆ. ಹಾಗಾಗಿ, ತಮಿಳುನಾಡಿಗೆ ಸಾವಿರಾರು ಕೋಟಿ ರೂ. ಬಿಡುಗಡೆ ಮಾಡುತ್ತಾರೆ. ತಮಿಳುನಾಡು ಸರ್ಕಾರ RSS, ಬಿಜೆಪಿ ಸರ್ಕಾರದ ಏಜೆಂಟ್ ಎಂದು ಸಹ ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಳವನ್ನು ತುಳಿದು ಹಾಕಲು ಮೋದಿ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ. ಗುಜರಾತ್ನ ಕ್ರಿಕೆಟ್ ಸ್ಟೇಡಿಯಂಗೆ ಮೋದಿಯವರ ಹೆಸರಿಟ್ಟ ಹಿನ್ನೆಲೆಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಮಹಾತ್ಮ ಗಾಂಧಿ ಎಂದು ಹೆಸರು ಇಡಬೇಕಿತ್ತು ಎಂದು ನಗರದಲ್ಲಿ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
Published On - 2:19 pm, Sun, 28 February 21