ಕೇರಳಲ್ಲಿ ಇಂದು ಬರೋಬ್ಬರಿ 76 ಒಮಿಕ್ರಾನ್ ಸೋಂಕಿನ (Omicron Cases In Kerala) ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 421ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಒಂದು ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಒಮಿಕ್ರಾನ್ ಸೋಂಕಿನ ಸಂಖ್ಯೆ ದಾಖಲಾಗಿರಲಿಲ್ಲ. ಅದರಲ್ಲೂ ಪಥನಂತಿಟ್ಟ ಜಿಲ್ಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಕೇರಳದಲ್ಲಿ ಸೋಮವಾರ 17ಜನರಲ್ಲಿ ಒಮಿಕ್ರಾನ್ ಕಾಣಿಸಿಕೊಂಡಿತ್ತು. ಭಾನುವಾರ 23 ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು 76 ಕೇಸ್ ದಾಖಲಾಗಿದೆ. ಇನ್ನು ಒಟ್ಟಾರೆ 421 ಕೇಸ್ಗಳಲ್ಲಿ 140 ಮಂದಿ ಗುಣಮುಖರಾಗಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.
ಒಮಿಕ್ರಾನ್ ಸೋಂಕಿನ ಸಂಖ್ಯೆ ಅತ್ಯಂತ ಹೆಚ್ಚಿರುವುದು ಮಹಾರಾಷ್ಟ್ರದಲ್ಲಿ. ನಂತರ ರಾಜಸ್ಥಾನ ಎರಡು, ದೆಹಲಿ ಮೂರು ಮತ್ತು ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದರೆ, ಕೇರಳ 5ನೇ ಸ್ಥಾನದಲ್ಲಿದೆ. ಕೇರಳದಲ್ಲಿ ದೈನಂದಿನವಾಗಿ ಪತ್ತೆಯಾಗುತ್ತಿರುವ ಕೊವಿಡ್ 19 ಮತ್ತು ಒಮಿಕ್ರಾನ್ ಕೇಸ್ಗಳು ಅಧಿಕವಾಗುತ್ತಿದ್ದರೂ, ಅಲ್ಲಿ ಲಾಕ್ಡೌನ್ ಅಗತ್ಯವಿಲ್ಲ ಎಂದೇ ಸರ್ಕಾರ ಹೇಳಿದೆ. ಕಳೆದ ಶನಿವಾರ ಈ ಬಗ್ಗೆ ಮಾತನಾಡಿದ್ದ ವೀಣಾ ಜಾರ್ಜ್, ಜನರ ಆರ್ಥಿಕ ಚಟುವಟಿಕೆಗೆ ಹೊಡೆತ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಕೇರಳದಲ್ಲಿ ಸದ್ಯ ಕೊರೊನಾ ನಿಯಂತ್ರಣಕ್ಕೆ ಕೆಲವು ನಿರ್ಬಂಧ ಹೇರಲಾಗಿದೆ. ಅದರ ಅನ್ವಯ ಮದುವೆಯಾಗಲೀ, ಅಂತ್ಯಕ್ರಿಯೆಯೇ ಆಗಲಿ 50ಕ್ಕಿಂತಲೂ ಹೆಚ್ಚು ಜನ ಸೇರುವಂತಿಲ್ಲ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಾರಂಭಗಳನ್ನು ಆನ್ಲೈನ್ ಮೂಲಕವೇ ನಡೆಸಬೇಕು.
ಹೊಸವರ್ಷದ ಹಿನ್ನೆಲೆಯಲ್ಲಿ ಡಿಸೆಂಬರ್ 30ರಿಂದ ಜನವರಿ 2ರವರೆಗೆ ಕೇರಳದಲ್ಲಿ ನೈಟ್ ಕರ್ಫ್ಯೂ ಹೇರಲಾಗಿತ್ತು. ಅಂದರೆ ರಾತ್ರಿ 10ರಿಂದ ಮುಂಜಾನೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿ ಇರುತ್ತಿತ್ತು. ಕೇರಳ ಒಂದು ಪ್ರವಾಸಿ ತಾಣವಾಗಿದ್ದರಿಂದ ಹೊಸವರ್ಷಾಚರಣೆಗೆ ಅಲ್ಲಿ ಹೆಚ್ಚಿನ ಜನರು ಸೇರುವುದು ವಾಡಿಕೆ. ಈ ಬಾರಿ ಕೊರೊನಾದೊಟ್ಟಿಗೆ ಒಮಿಕ್ರಾನ್ ಕೂಡ ಶುರುವಾಗಿದ್ದರಿಂದ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿತ್ತು. ಜನವರಿ 2ರಂದೇ ನೈಟ್ ಕರ್ಫ್ಯೂ ಅವಧಿ ಮಕ್ತಾಯವಾಗಿದೆ. ಅದನ್ನು ಮುಂದುವರಿಸುವ ಯೋಚನೆ ಇಲ್ಲ ಎಂದು ಕೇರಳ ಸರ್ಕಾರ ಕಳೆದವಾರವೇ ಸ್ಪಷ್ಟಪಡಿಸಿದೆ.
ಕೇರಳದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 53 ಲಕ್ಷ ದಾಟಿದೆ. ಇದುವರೆಗೆ ಕೊರೊನಾದಿಂದ ಮೃತಪಟ್ಟವರು 50,053 ಮಂದಿ ಮತ್ತು ಚೇತರಿಸಿಕೊಂಡು ಡಿಸ್ಚಾರ್ಜ್ ಆದವರು 5,205,210. ಸದ್ಯ ಕೇರಳ ರಾಜ್ಯದಲ್ಲಿ 44,441 ಸಕ್ರಿಯ ಪ್ರಕರಣಗಳು ಇವೆ. ಕೇರಳದಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಈ ಬಾರಿ 20-40ವರ್ಷದವರಲ್ಲೇ ಅತಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಲ್ಲ ಪ್ರಿಯರಿಗೊಂದು ಸಂತಸದ ಸುದ್ದಿ; ಯಾವುದೇ ರಾಸಾಯನಿಕವಿಲ್ಲದೆ ಬೀದರ್ನಲ್ಲಿ ತಯಾರಾಗುತ್ತಿದೆ ಸಿಹಿ ಬೆಲ್ಲ