ಬೆಲ್ಲ ಪ್ರಿಯರಿಗೊಂದು ಸಂತಸದ ಸುದ್ದಿ; ಯಾವುದೇ ರಾಸಾಯನಿಕವಿಲ್ಲದೆ ಬೀದರ್ನಲ್ಲಿ ತಯಾರಾಗುತ್ತಿದೆ ಸಿಹಿ ಬೆಲ್ಲ
ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ ರೈತ ಮಹದೇವ ನಾಗೂರೇ ಸಾವಯವ ಬೆಲ್ಲ ತಯಾರಿಸುವ ಮೂಲಕ ಸೈ ಎನಿಸಕೊಂಡಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಕ್ರಿಮಿನಾಶಕಗಳನ್ನ ಬಳಸಿ ಬೆಳೆದ ಕಬ್ಬು ಇಲ್ಲಿ ತೆಗೆದುಕೊಳ್ಳುವುದಿಲ್ಲ.
ಬೀದರ್: ಇತ್ತೀಚೆಗೆ ಎಲ್ಲಾ ಆಹಾರ ಪದಾರ್ಥಗಳಲ್ಲೂ ಕೂಡ ಕಲಬೆರಕೆ ನಡೆಯುತ್ತಿದೆ. ಹೀಗಾಗಿ ಸಾವಯಾವ ಆಹಾರ ಅಥವಾ ವಿಷಮುಕ್ತ ಆಹಾರಕ್ಕಾಗಿ ಹುಡುಕಾಡುವ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಬೀದರ್ ಜಿಲ್ಲೆಯಲ್ಲಿ ಸಾವಯಾವ ಶುದ್ಧ ಬೆಲ್ಲ ತಯಾರಿಸಲಾಗುತ್ತಿದೆ. ಇತ್ತೀಚೆಗೆ ಬೆಲ್ಲ ತಯಾರಿಸುವಾಗ ಹತ್ತಾರು ವಿಷಕಾರಿ ರಾಸಾಯನಿಕಗಳು ಸೇರಿಸುತ್ತಿದ್ದರು. ಆದರೀಗ ಬೆಲ್ಲ(jaggery) ಪ್ರಿಯರಿಗೊಂದು ಸಂತಸದ ಸುದ್ದಿ ಸಿಕ್ಕಿದೆ. ಸಂಪೂರ್ಣ ನೈಸರ್ಗಿಕವಾಗಿ, ಯಾವುದೇ ರಾಸಾಯನಿಕವಿಲ್ಲದೆ ಶುದ್ಧವಾದ ವಿಷಮುಕ್ತ ಸಾವಯವ ಸಿಹಿ ಬೆಲ್ಲವನ್ನು ಗಡೀ ಜಿಲ್ಲೆ ಬೀದರ್ನಲ್ಲಿ ತಯಾರಿಸಲಾಗುತ್ತಿದೆ.
ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ ರೈತ ಮಹದೇವ ನಾಗೂರೇ ಸಾವಯವ ಬೆಲ್ಲ ತಯಾರಿಸುವ ಮೂಲಕ ಸೈ ಎನಿಸಕೊಂಡಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ, ಕ್ರಿಮಿನಾಶಕಗಳನ್ನ ಬಳಸಿ ಬೆಳೆದ ಕಬ್ಬು ಇಲ್ಲಿ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಸಾವಯವ ಗೊಬ್ಬರವನ್ನು ಹಾಕಿ, ನೈಸರ್ಗಿಕ ವಿಧಾನ ಬಳಸಿಕೊಂಡು ಬೆಳೆದ ಕಬ್ಬನ್ನು ಮಾತ್ರ ತೆಗೆದುಕೊಂಡು, ಶುದ್ಧವಾದ ಬೆಲ್ಲವನ್ನು ತಯಾರಿಸುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಸಾವಯವ ಪದ್ಧತಿಯನ್ನು ಮತ್ತೆ ಜಾರಿಗೆ ತಂದು, ಭೂಮಿಯ ಫಲವತ್ತತೆಯನ್ನು ಕಾಪಾಡುವುದು ಈ ರೈತನ ಉದ್ದೇಶವಾಗಿದೆ.
ಗದ್ದೆಯಿಂದ ಬರುವ ಕಬ್ಬನ್ನು ನುರಿಸಿ, ಅದನ್ನು ಹದವಾಗಿ ಕುದಿಸಿ ಕಲ್ಮಶವನ್ನು ತೆಗೆಯಲು ಕಾಡು ಬೆಂಡೆ ಗಿಡದ ಲೋಳೆಯನ್ನು ಬಳಸಲಾಗುತ್ತಿದೆ. ಇದರಿಂದ ಹೊರ ತೆಗೆಯಲು ಅಡುಗೆ ಎಣ್ಣೆಯನ್ನು ಬಳಸಿ ಅಚ್ಚುಗಳನ್ನು ತಯಾರಿಸಲಾಗುತ್ತದೆ. ದಿನಕ್ಕೆ ಒಟ್ಟು 5 ಟನ್ ಕಬ್ಬನ್ನು ನುರಿಯುವ ಸಾಮರ್ಥ್ಯ ಈ ಘಟಕದ್ದಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಅಗತ್ಯಕ್ಕನುಗುಣವಾಗಿ ಸಾಮರ್ಥ್ಯವನ್ನು ಹೆಚ್ಚಿಸಲು ಕೂಡ ಚಿಂತಿಸಲಾಗುತ್ತಿದ್ದು ಸಾವಯವ ಪದ್ಧತುಯಲ್ಲಿ ತಯಾರಿಸಿದ ಬೆಲ್ಲಕ್ಕೆ ಬಾರಿ ಬೇಡಿಕೆ ಇದೆ ಎಂದು ಸಾವಯವ ಬೆಲ್ಲ ತಯಾರಿಸುವ ರೈತ ಮಹದೇವ್ ನಾಗೂರೆ ಹೇಳಿದ್ದಾರೆ.
ಸಾಮಾನ್ಯವಾಗಿ ಈಗ ತಯಾರಿಸುತ್ತಿರುವ ಬೆಲ್ಲದಲ್ಲಿ ಸಾಕಷ್ಟು ರಾಸಾಯನಿಕಗಳನ್ನು ಬೆರೆಸಿ ಬೆಲ್ಲವನ್ನು ತಯಾರಿಸಲಾಗುತ್ತಿದೆ. ರಸಗೊಬ್ಬರವನ್ನು ಬಳಸಿ, ಕ್ರಿಮಿನಾಶಕ-ಔಷಧಿಗಳನ್ನು ಬಳಸಿ ಬೆಳೆಯುವ ಕಬ್ಬನ್ನು ನುರಿಸಿ ತೆಗೆದ ಹಾಲನ್ನು ಕುದಿಸಲಾಗುತ್ತಿತ್ತು. ಹೀಗೆ ಕುದಿಯುತ್ತಿರುವ ಹಾಲಿನಲ್ಲಿ ಕಲ್ಮಶಗಳನ್ನು ತೆಗೆಯಲು ಸೋಡಿಯಂ ಸಾಕ್ಸಲೈಟ್, ಸೋಡಿಯಂ ಕಾರ್ಬೋನೇಟ್, ಸೋಡಿಯಂ ಬೈಕಾರ್ಬೋನೇಟ್, ನೈಟ್ರೋಸಲ್ಫೈಡ್, ಗಂಧಕ ಹಾಗೂ ಕೋ ಪಾಲಿಮರ್ಗಳನ್ನು ಬಳಸಲಾಗುತ್ತದೆ. ಇಂತಹ ವಿಷಕಾರಿ ರಾಸಾಯನಿಕಗಳನ್ನು ಬಳಸುವುದರಿಂದ ಬೆಲ್ಲಕ್ಕೆ ಕೃತಕ ಬಣ್ಣವನ್ನು ನೀಡಲಾಗುತ್ತಿತ್ತು. ಇದರಿಂದ ಬೆಲ್ಲ ತಿನ್ನುವ ವ್ಯಕ್ತಿಗಳಿಗೆ ಸಿಹಿ ರುಚಿ ಪಡೆಯುವ ಜೊತೆಜೊತೆಗೆ ಖಾಯಿಲೆಗಳನ್ನೂ ಉಚಿತವಾಗಿ ಪಡೆಯಬೇಕಾಗಿತ್ತು.
ಯತೇಚ್ಛವಾಗಿ ಸೋಡಿಯಂ ಅನ್ನು ಬಳಸುವ ಕಾರಣ, ಕರುಳಿನಲ್ಲಿ ಅಲ್ಸರ್ ನಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ನಗರ ಪ್ರದೇಶಗಳಲ್ಲೂ ಸಾವಯವ ಪದಾರ್ಥಗಳನ್ನು ಬಳಸುವ ಬಗ್ಗೆ ಈಗಾಗಲೇ ಸಾಕಷ್ಟು ಅರಿವು ಮೂಡಿರುವಾಗಲೇ, ಸಂಪೂರ್ಣವಾಗಿ ಸಾವಯವ ಬೆಲ್ಲ ತಯಾರಿಸುತ್ತಿರುವುದು ಖುಷಿ ತಂದಿದೆ. ಈಗಾಗಲೇ ಸಾವಯವ ಬೆಲ್ಲಕ್ಕೆ ಸಾಕಷ್ಟು ಬೇಡಿಕೆ ಬಂದಿದ್ದು. ಬೆಂಗಳೂರಿನ ಮಾಲ್ಗಳು ಸೇರಿದಂತೆ ವಿದೇಶದಿಂದಲೂ ನೂರಕ್ಕೂ ಹೆಚ್ಚು ಟನ್ ಬೆಲ್ಲಕ್ಕೆ ಆರ್ಡರ್ ಬಂದಿರುವುದು ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ ಎಂದು ರೈತ ಮಹದೇವ್ ಹೇಳಿದ್ದಾರೆ.
ವರದಿ: ಸುರೇಶ್ ನಾಯಕ್
ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಪತ್ತೆ ಪ್ರಕರಣ; ಬೆಂಗಳೂರಿನ ಏಜೆನ್ಸಿ ವಿರುದ್ಧ ಎಫ್ಐಆರ್ ದಾಖಲು
ಬಾಗಲಕೋಟೆ: ಎಂಬಿಎ ಕಾಲೇಜಿನಲ್ಲಿ ಬೆಲ್ಲದ ಹಬ್ಬ; ಎಳ್ಳಿನ ಉಂಡೆ, ಶೇಂಗಾ ಹೋಳಿಗೆ ತಿನ್ನಲು ಮುಗಿಬಿದ್ದ ಜನ
Published On - 3:19 pm, Wed, 12 January 22