Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾಲು ಒಕ್ಕೂಟ: ಲೀಟರ್​ ಹಾಲಿನ ದರ ಏರಿಕೆ

ಹಾವೇರಿ ಜಿಲ್ಲಾ ಹಾಲು ಒಕ್ಕೂಟ (ಹಾವೆಮುಲ್) ಮಾರ್ಚ್‌ನಲ್ಲಿ ಹಾಲು ದರ ಕಡಿಮೆ ಮಾಡಿದ್ದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಒಕ್ಕೂಟ ಲೀಟರ್​ಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿತ್ತು.ಈಗ ಲೀಟರ್‌ಗೆ 2.50 ರೂ. ಹೆಚ್ಚಳ ಮಾಡಿದೆ. ಹಸುವಿನ ಹಾಲಿಗೆ 33 ರೂ. ಮತ್ತು ಎಮ್ಮೆ ಹಾಲಿಗೆ 45.50 ರೂ. ನಿಗದಿಪಡಿಸಿದೆ.

ಹಾಲು ಉತ್ಪಾದಕರ ಆಕ್ರೋಶಕ್ಕೆ ಮಣಿದ ಹಾಲು ಒಕ್ಕೂಟ: ಲೀಟರ್​ ಹಾಲಿನ ದರ ಏರಿಕೆ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Apr 06, 2025 | 8:45 PM

ಹಾವೇರಿ, ಏಪ್ರಿಲ್​ 06: ಹಾಲು (Milk) ಉತ್ಪಾದಕರ ಆಕ್ರೋಶಕ್ಕೆ ಹಾವೇರಿ (Haveri) ಜಿಲ್ಲಾ ಹಾಲು ಒಕ್ಕೂಟ (ಹಾವೆಮುಲ್) ಮಣಿದಿದೆ. ಹಾಲು ಉತ್ಪಾದಕರಿಗೆ ನೀಡುವ ಲೀಟರ್​ ಹಾಲಿನ ದರವನ್ನು ಹೆಚ್ಚಿಗೆ ಮಾಡಿದೆ. ಲೀಟರ್​ ಹಾಲಿಗೆ 2.50 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದೆ. ಹಸುವಿನ ಹಾಲನ್ನು ಲೀಟರ್​ಗೆ 33 ರೂ., ಎಮ್ಮೆ ಹಾಲನ್ನು ಲೀಟರ್​ಗೆ 45.50 ರೂಪಾಯಿ ನೀಡಿ ಹಾಲು ಉತ್ಪಾದಕರಿಂದ ಖರೀದಿಸಲು ಮುಂದಾಗಿದೆ. ಒಕ್ಕೂಟ ಈ ಹಿಂದೆ ಎಮ್ಮೆ ಹಾಲಿಗೆ 43 ರೂಪಾಯಿ ನೀಡುತ್ತಿತ್ತು. ಹಸುವಿನ ಹಾಲಿಗೆ 30.50 ರೂಪಾಯಿ ನೀಡುತ್ತಿತ್ತು. ಇದೀಗ, 2.50 ರೂಪಾಯಿ ಹೆಚ್ಚಿಗೆ ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದೆ.

3.50 ರೂಪಾಯಿ ಕಡಿತಗೊಳಿಸಿದ್ದ ಹಾವೆಮುಲ್

ಹಾವೆಮುಲ್​ ಮಾರ್ಚ್​ 27ರಂದು ಲೀಟರ್​ಗೆ 3.50 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿದ್ದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾವೆಮುಲ್​ 18.50 ಕೋಟಿ ರೂಪಾಯಿ ನಷ್ಟದಲ್ಲಿದೆ. ನಷ್ಟದಿಂದ ಮೇಲೆತ್ತಲು ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಬೆಲೆಯಲ್ಲಿ 3.50 ರೂಪಾಯಿ ಕಡಿಮೆ ಮಾಡುವ ಅನಿವಾರ್ಯತೆ ಇದೆ ಎಂದು ಹಾಲು ಒಕ್ಕೂಟದ ಅದ್ಯಕ್ಷರು ಹೇಳಿದ್ದರು.

ಇದಕ್ಕೆ ಹಾಲು ಉತ್ಪಾದಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರವಿವಾರ (.06) ಹಾವೆಮುಲ್ ಅಧ್ಯಕ್ಷರು, ನಿರ್ದೇಶಕರ ಜೊತೆ ಸಚಿವ ಶಿವಾನಂದ ಪಾಟೀಲ್​ ಸಭೆ ನಡೆಸಿದರು. ಸಚಿವರ ಸಲಹೆ ನೀಡಿದ ಹಿನ್ನೆಲೆಯಲ್ಲಿ 2.50 ರೂ. ಹೆಚ್ಚಳಕ್ಕೆ ಹಾವೆಮುಲ್​ ನಿರ್ಧರಿಸಿದೆ.

ಇದನ್ನೂ ಓದಿ
Image
ಸಾಕಾ, ಬೇಕಾ... ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ, ಚಹಾ ದರ ಹೆಚ್ಚಳ
Image
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
Image
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
Image
ನಂದಿನಿ ಹಾಲಿಗೆ ನೀರು ಕಲಬೆರಕೆ: ಅಧಿಕಾರಿಗಳು ಅಮಾನತು

ಹಾವೇರಿ ಹಾಲು ಒಕ್ಕೂಟ 2022 ರಲ್ಲಿ ಪ್ರಾರಂಭವಾಗಿದೆ. ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೇಕಗೊಂಡು ಹಾವೇರಿ ಹಾಲು ಒಕ್ಕೂಟ ರಚನೆಯಾಗಿದೆ. ಪ್ರಸ್ತುತ ಹಾವೇರಿ ಜಿಲ್ಲೆಯಲ್ಲಿ ಪ್ರತಿ ನಿತ್ಯ 1 ಲಕ್ಷ 35 ಸಾವಿರ ಲೀಟರ್ ಹಾಲು ಉತ್ಪಾದನೆ ಆಗುತ್ತೆ. ಅದರಲ್ಲಿ ಮಾರುಕಟ್ಟೆಯಲ್ಲಿ ಕೇವಲ 20,000 ಲೀಟರ್ ಹಾಲು ಮಾತ್ರ ಮಾರಾಟವಾಗುತ್ತೆ. ಇದರಿಂದ ಹಾಲು ಒಕ್ಕೂಟಕ್ಕೆ ನಷ್ಟವಾಗುತ್ತಿದೆ ಎಂದು ಹಾವೆಮುಲ್ ಹೇಳಿದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹೈನುಗಾರರಿಗೆ ಯುಗಾದಿ ಬೋನಸ್​

ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡ ಸರ್ಕಾರ

ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಬರೋಬ್ಬರಿ 656.07 ಕೋಟಿ ರೂ. ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿರುವುದಾಗಿ ಬಜೆಟ್​ ಅಧಿವೇಶನದಲ್ಲಿ ಸರ್ಕಾರ ಉತ್ತರ ನೀಡಿತ್ತು. ಒಟ್ಟು 9,04,547 ಫಲಾನುಭವಿ ರೈತರಿಗೆ ಹಾಲು ಉತ್ಪಾದನಾ ಪ್ರೋತ್ಸಾಹಧನ ಬಾಕಿ ಇದೆ ಎಂದು ಹೇಳಿತ್ತು.

ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಬೇಕಿದೆ. ಹಾಲು ಉತ್ಪಾದನೆ ಜಾಸ್ತಿ ಆಗುತ್ತಿದೆ, ಉತ್ಪಾದನೆಗೆ ತಕ್ಕಂತೆ ಬಜೆಟ್ ಅಲೋಕೇಷನ್ ಇಲ್ಲ. 1300-1500 ಕೋಟಿ ರೂ ಮಾತ್ರ ಬಜೆಟ್ ಹಂಚಿಕೆ ಇದೆ ಎಂದು ಪಶುಸಂಗೋಪನಾ ಸಚಿವ ಉತ್ತರ ನೀಡಿದ್ದರು.

ವರದಿ: ಅಣ್ಣಪ್ಪ ಬಾರ್ಕಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ