ಇತ್ತೀಚೆಗೆ ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳು ವಿವಾದ ಸೃಷ್ಟಿಸಿವೆ. ಅದರ ಬೆನ್ನಲ್ಲೇ ಸುಪ್ರೀಂಕೋರ್ಟ್(Supreme Court)ನ 76 ಮಂದಿ ವಕೀಲರು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (CJI N V Ramana) ಅವರಿಗೆ ಪತ್ರ ಬರೆದಿದ್ದು, ಈ ಎರಡೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಮುಖಂಡರು ಜನಾಂಗೀಯ ಶುದ್ಧೀಕರಣಕ್ಕೆ ಕರೆ ನೀಡಿದ್ದಾರೆ ಹಾಗೂ ದ್ವೇಷ ಭಾಷಣ ಮಾಡಿದ್ದಾರೆ. ಈ ಪ್ರಕರಣವನ್ನು ಸುಮೊಟೊ ಆಗಿ ತೆಗೆದುಕೊಳ್ಳಬೇಕು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ತುರ್ತಾಗಿ ನ್ಯಾಯಾಂಗದ ಹಸ್ತಕ್ಷೇಪವಾಗಲೇಬೇಕು. ಈ ಮೂಲಕ ಇಂಥ ಭಾಷಣಗಳು ಮತ್ತೆ ಮರುಕಳಿಸದಂತೆ ತಡೆಯಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ದ್ವೇಷ ಭಾಷಣ ಮಾಡಿದವರ ಹೆಸರನ್ನು ವಕೀಲರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೇ, ಸಹಿ ಮಾಡಿದ 72 ಮಂದಿ ವಕೀಲರ ಹೆಸರನ್ನೂ ಇಲ್ಲಿ ನಮೂದಿಸಲಾಗಿದೆ.
ಈ ಪತ್ರಕ್ಕೆ ದೇಶದ ಪ್ರಮುಖ ವಕೀಲರಾದ ದುಶ್ಯಂತ ದಾವೆ, ಪ್ರಶಾಂತ್ ಭೂಷಣ್, ವೃಂದಾ ಗ್ರೋವರ್, ಸಲ್ಮಾನ್ ಖುರ್ಷಿದ್, ಪಾಟ್ನಾ ಹೈಕೋರ್ಟ್ನ ಮಾಜಿ ಜಡ್ಜ್ ಅಂಜನಾ ಪ್ರಕಾಶ್ ಕೂಡ ಸಹಿ ಮಾಡಿದ್ದಾರೆ. ಹರಿದ್ವಾರ ಮತ್ತು ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಮುಸ್ಲಿಂ ಜನಾಂಗದವರ ಸಾಮೂಹಿಕ ಹತ್ಯೆಗೆ ಕರೆ ನೀಡಲಾಗಿದೆ. ಇದು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಅತಿದೊಡ್ಡ ಅಪಾಯವನ್ನುಂಟು ಮಾಡುವ ನಡೆ. ಅಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಲಕ್ಷಾಂತರ ಜನರ ಜೀವಕ್ಕೆ ಅಪಾಯ ತರುವ ಕರೆ ಎಂದು ವಕೀಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
Urging Supreme Court to pay heed to this letter by lawyers urging suo moto cognizance to be taken of recent hate speech.
No room for inaction. Wake up. Please pic.twitter.com/R8LPxCufEN— Mahua Moitra (@MahuaMoitra) December 26, 2021
ಹರಿದ್ವಾರದಲ್ಲಿ ಏನಾಯಿತು?
ಹರಿದ್ವಾರದಲ್ಲಿ ಡಿ.17ರಿಂದ 20ರವರೆಗೆ ಧರ್ಮ ಸಂಸದ್ ಸಮಾರಂಭ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಹಲವು ಧಾರ್ಮಿಕ ಮುಖಂಡರು ಮುಸ್ಲಿಂ ಸಮುದಾಯದ ವಿರುದ್ಧ ಮಾತನಾಡಿದ್ದರು. ಮುಸ್ಲಿಂರಿಂದ ಎದುರಾಗುತ್ತಿರುವ ಅಪಾಯವನ್ನು ಎದುರಿಸಲು ಹಿಂದು ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನು ಹೊಂದುವುದೇ ಪರಿಹಾರ ಎಂಬ ಮಾತುಗಳನ್ನು ಯತಿ ನರಸಿಂಗಾನಂದ್ ಅವರು ಆಡಿದ್ದರು. ಬರೀ ಅವರಷ್ಟೇ ಅಲ್ಲ, ಅಲ್ಲಿ ಪಾಲ್ಗೊಂಡಿದ್ದವರೆಲ್ಲ ದ್ವೇಷ ಭಾಷಣವನ್ನೇ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಹಾಗೇ ಈ ಕಾರ್ಯಕ್ರಮದಲ್ಲಿ, ಇತ್ತೀಚೆಗಷ್ಟೇ ಇಸ್ಲಾಂನಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡ ಜಿತೇಂದ್ರ ನಾರಾಯಣ ತ್ಯಾಗಿ (ವಾಸಿಂ ರಿಜ್ವಿ) ಕೂಡ ಪಾಲ್ಗೊಂಡಿದ್ದರು. ಹರಿದ್ವಾರದಲ್ಲಿ ದ್ವೇಷಭಾಷಣದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಉತ್ತರಾಖಂಡ ಪೊಲೀಸರು ಜಿತೇಂದ್ರ ನಾರಾಯಣ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ನಾಯಕರ ವಿರುದ್ಧ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಕೂಡ ದೂರು ನೀಡಿದ್ದಾರೆ.
ಇದನ್ನೂ ಓದಿ: Salman Khan: ‘ಪವನ ಪುತ್ರ ಭಾಯಿಜಾನ್’; ಸಲ್ಮಾನ್ ಖಾನ್ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗ