ಪಶ್ಚಿಮ ಬಂಗಾಳ (West Bengal)ದ ಬಿರ್ಬುಮ್ ಜಿಲ್ಲೆಯ ರಾಂಪುರಹತ್ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ. ಇಲ್ಲಿನ ಬರೋಸಾಲ್ ಗ್ರಾಮ ಪಂಚಾಯತ್ ಉಪ ಪ್ರಧಾನ್ ಭಡು ಶೇಖ್ ಎಂಬುವರ ಹತ್ಯೆಯ ಬೆನ್ನಲ್ಲೇ ಈ ಹಿಂಸಾಚಾರ ಭುಗಿಲೆದ್ದಿದೆ. ಆಕ್ರೋಶಿತರ ಗುಂಪೊಂದು ಗಲಭೆ ನಡೆಸುತ್ತಿದೆ. ಮನೆಮನೆಗೆ ನುಗ್ಗಿ ದಾಂಧಲೆ ಎಬ್ಬಿಸುವುದಲ್ಲದೆ, ಸಿಕ್ಕಸಿಕ್ಕ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ಹಿಂಸಾಚಾರದಲ್ಲಿ ಈಗಾಗಲೇ 8 ಜನರು ಸಜೀವ ದಹನಗೊಂಡಿದ್ದಾರೆ ಎಂದು ಬಿರ್ಬುಮ್ ಎಸ್ಪಿ ನಾಗೇಂದ್ರ ತ್ರಿಪಾಠಿ ತಿಳಿಸಿದ್ದಾರೆ.
ಭಡು ಶೇಖ್ ತೃಣಮೂಲ ಕಾಂಗ್ರೆಸ್ನವರಾಗಿದ್ದು, ಭಗುಟಿ ಗ್ರಾಮ ನಿವಾಸಿ. ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಅಂಗಡಿಯೊಂದರಲ್ಲಿ ನಿಂತಿದ್ದ ವೇಳೆ, ಬೈಕ್ನಲ್ಲಿ ನಾಲ್ವರು ಮುಖವನ್ನು ಮುಚ್ಚಿಕೊಂಡು ಬಂದು ಬಾಂಬ್ ಹಾಕಿ ಭಡು ಅವರನ್ನು ಕೊಂದಿದ್ದರು. ಹತ್ಯೆಯ ಬೆನ್ನಲ್ಲೇ ಭಡು ಶೇಖ್ ಬೆಂಬಲಿಗರು ಭಗುಟಿ ಗ್ರಾಮದಲ್ಲಿ ದಾಂಧಲೆ ಎಬ್ಬಿಸಿದ್ದಾರೆ. ಪ್ರತಿಪಕ್ಷಗಳ ಕೆಲವು ಮುಖಂಡರು, ಕಾರ್ಯಕರ್ತರ ಮನೆಗೆ ಬೆಂಕಿ ಇಡುತ್ತಿದ್ದಾರೆ. ಸೋಮವಾರ ರಾತ್ರಿ 12ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಡಲಾಗಿದೆ. ಬೆಂಕಿ ನಿಯಂತ್ರಿಸಲು ನಾವು ಮಧ್ಯರಾತ್ರಿ ಬಂದರೂ, ನಮಗೆ ಗ್ರಾಮದ ಒಳಗೆ ಹೊಕ್ಕಲು ತುಂಬ ಹೊತ್ತು ಸಾಧ್ಯವಾಗಲಿಲ್ಲ ಎಂದು ಅಗ್ನಿಶಾಮಕ ದಳದವರು ತಿಳಿಸಿದ್ದಾರೆ. ಭಡು ಶೇಖ್ ಹತ್ಯೆ ಸಂಬಂಧ ಇದುವರೆಗೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವುದೇ ಕಷ್ಟವಾಗುತ್ತಿದೆ. ಸಜೀವ ದಹನಗೊಂಡವರ ಗುರುತು ಸಿಗುತ್ತಿಲ್ಲ. ಎಂಟು ಜನ ಬೆಂಕಿಗೆ ಆಹುತಿಯಾಗಿದ್ದು, ಇದುವರೆಗೆ ಏಳು ಶವಗಳನ್ನು ಹೊರತೆಗೆಯಲಾಗಿದೆ ಎಂದೂ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ರಾಜಕೀಯ ಕಾರಣಕ್ಕಲ್ಲ
ಭಡು ಶೇಖ್ ಹತ್ಯೆಯಾಗಿದ್ದು ಯಾವುದೇ ರಾಜಕೀಯ ಬಣಗಳ ನಡುವಿನ ದ್ವೇಷಕ್ಕಲ್ಲ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಶ್ ಟ್ವೀಟ್ ಮಾಡಿದ್ದಾರೆ. ಈಗ ಉಂಟಾಗುತ್ತಿರುವ ಹಿಂಸಾಚಾರ ವಿಷಾದನೀಯ. ಆದರೆ ಈ ಘಟನೆಗಳಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಪಂಚಾಯತ್ನ ಉಪ ಮುಖ್ಯಸ್ಥನಾಗಿದ್ದ ಭಡು ಶೇಖ್ ಸ್ಥಳೀಯವಾಗಿ ಪ್ರಬಲ ನಾಯಕನಾಗಿದ್ದರು. ಅವರಿಗೆ ಹಲವು ಬೆಂಬಲಿಗರು ಇದ್ದಾರೆ. ಹೀಗಾಗಿ ಅವರ ಸಾವಿನ ನಂತರ ಅನುಯಾಯಿಗಳು ಸಿಟ್ಟಿಗೆದ್ದು ಗಲಭೆ, ಹಿಂಸಾಚಾರದಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯನ್ನು ಯಾರು ಅಧಿಕಾರಕ್ಕೆ ತಂದರೋ ಗೊತ್ತಿಲ್ಲ: ಬೆಲೆ ಏರಿಕೆ ವಿರುದ್ಧ ಜಯಾ ಬಚ್ಚನ್ ವಾಗ್ದಾಳಿ