ಬಿಹಾರದ ಪಾಟ್ನಾದಲ್ಲಿರುವ ರಾಷ್ಟ್ರೀಯ ಜನತಾ ದಳದ ಮುಖಂಡ, ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಮನೆಗೆ ಭಾನುವಾರ ಸಂಜೆ ಒಂದಷ್ಟು ಜನರ ಗುಂಪೊಂದು ನುಗ್ಗಿ ದಾಂಧಲೆ ನಡೆಸಿದ್ದಲ್ಲದೆ, ತೇಜ್ ಪ್ರತಾಪ್ ಯಾದವ್ರ ಸಹಾಯಕ ಶ್ರೀಜನ್ ಸ್ವರಾಜ್ ಮೇಲೆ ಹಲ್ಲೆ ನಡೆಸಿದೆ. ಅಷ್ಟೇ ಅಲ್ಲ, ಅವರಿಗೆ ಕೊಲೆ ಬೆದರಿಕೆಯನ್ನೂ ಹಾಕಿದೆ. ಈ ಬಗ್ಗೆ ಆರ್ಜೆಡಿ ಯುವ ಘಟಕದ ಅಧ್ಯಕ್ಷರೂ ಆಗಿರುವ ಶ್ರೀಜನ್ ಸ್ವರಾಜ್ ಅವರೇ ಸ್ವತಃ ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀಜನ್ ಸ್ವರಾಜ್ ಅವರು ತಮ್ಮ ದೂರಿನಲ್ಲಿ ಗೌರವ್ ಯಾದವ್ ಎಂಬಾತನ ಹೆಸರನ್ನು ಉಲ್ಲೇಖಿಸಿದ್ದಾರೆ. ಗೌರವ್ ಯಾದವ್ ತನ್ನ 10 ಮಂದಿ ಸಹಾಯಕರೊಂದಿಗೆ ಬಂದಿದ್ದ. ತೇಜ್ ಪ್ರತಾಪ್ ಯಾದವ್ ಅವರ ಮನೆಗೆ ನುಗ್ಗಿದ್ದಾನೆ. ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ. ಭಾನುವಾರ ಸಂಜೆ 6.30ರ ಹೊತ್ತಿಗೆ ಘಟನೆ ನಡೆದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ಗೌರವ್ ಯಾದವ್ ಮತ್ತು ಆತನೊಂದಿಗೆ ಇದ್ದವರು ಮದ್ಯಪಾನ ಮಾಡಿದ್ದರು. ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ರಕ್ಷಣೆ ಬೇಕು ಎಂದು ಪೊಲೀಸರ ಬಳಿ ಶ್ರೀರಾಜ್ ಸ್ವರಾಜ್ ಮನವಿ ಮಾಡಿದ್ದಾರೆ.
ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಜೈಲು ಸೇರಿದ್ದ ಲಾಲೂಪ್ರಸಾದ್ ಯಾದವ್ ಬಿಡುಗಡೆಯಾಗಿದ್ದರೂ ಅವರು ಆಗಾಗ ಕೋರ್ಟಿನ ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಅಂತೆಯೇ ಭಾನುವಾರವೂ ಕೂಡ ಸಿಬಿಐ ಕೋರ್ಟ್ಗೆ ವಿಚಾರಣೆಗಾಗಿ ರಾಂಚಿಗೆ ತೆರಳಿದ್ದರು. ಈ ಕೇಸ್ನ ಅಂತಿಮ ತೀರ್ಪನ್ನು ಕೋರ್ಟ್ ಫೆ.15ರಂದು ನೀಡಲಿದೆ. ಲಾಲೂ ಪ್ರಸಾದ್ ಯಾದವ್ ಜತೆ ತೇಜ್ ಪ್ರತಾಪ್ ಯಾದವ್ ಕೂಡ ರಾಂಚಿಗೆ ತೆರಳುವವರು ಇದ್ದರು. ಆದರೆ ಕೊನೇ ಕ್ಷಣದಲ್ಲಿ ಅವರು ಹೋಗುವ ಯೋಜನೆ ರದ್ದಾಗಿ ಮನೆಯಲ್ಲೇ ಇದ್ದರು.
ಇದನ್ನೂ ಓದಿ: Uttar Pradesh Elections 2022: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಕಾರಿನ ಮೇಲೆ ದಾಳಿ