Shocking News: ನಾಯಿಮರಿಗೆ ಸೋನು ಎಂದು ಹೆಸರಿಟ್ಟ ಮಹಿಳೆಗೆ ಬೆಂಕಿ ಹಚ್ಚಿದ ಪಕ್ಕದಮನೆಯ ವ್ಯಕ್ತಿ; ಸಿಟ್ಟಿಗೆ ಕಾರಣವೇನು ಗೊತ್ತಾ?

| Updated By: Lakshmi Hegde

Updated on: Dec 22, 2021 | 9:39 AM

ನೀತಾಬೆನ್​ ಪೊಲೀಸರಿಗೆ ದೂರು ನೀಡಿದ್ದಾರೆ. ಭಾರ್ವಾದ್​ ಮತ್ತು ಆತನ ಸಹಚರರು ಬಂದು ನನ್ನನ್ನು ಒಂದೇ ಸಮ ನಿಂದಿಸಿದರು. ಆದರೆ ನಾನು ಅವರಿಂದ ತಪ್ಪಿಸಿಕೊಳ್ಳಲು ಅಡುಗೆ ಮನೆಗೆ ಹೋದೆ. ಆದರೆ ಅವರು ನನ್ನನ್ನು ಬಿಡಲಿಲ್ಲ ಎಂದು ಹೇಳಿದ್ದಾರೆ.

Shocking News: ನಾಯಿಮರಿಗೆ ಸೋನು ಎಂದು ಹೆಸರಿಟ್ಟ ಮಹಿಳೆಗೆ ಬೆಂಕಿ ಹಚ್ಚಿದ ಪಕ್ಕದಮನೆಯ ವ್ಯಕ್ತಿ; ಸಿಟ್ಟಿಗೆ ಕಾರಣವೇನು ಗೊತ್ತಾ?
ಸಾಂಕೇತಿಕ ಚಿತ್ರ
Follow us on

ಒಂದು ಕ್ಷಣದ ಸಿಟ್ಟು ಎಂತೆಂತಾ ಅವಘಡಗಳಿಗೆ ಕಾರಣವಾಗುತ್ತದೆ ನೋಡಿ. ಇಲ್ಲೊಬ್ಬಾತ ವಿಚಿತ್ರ ಕಾರಣಕ್ಕೆ ತನ್ನ ಪಕ್ಕದ ಮನೆ ಯುವತಿಗೆ ಬೆಂಕಿಯಿಟ್ಟಿದ್ದಾನೆ. ಆಕೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದ ಹಾಗೆ ಘಟನೆ ನಡೆದದ್ದು ಗುಜರಾತ್​​ನ ಹಳ್ಳಿಯೊಂದರಲ್ಲಿ. ಇದೀಗ ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಹಿಳೆ ಹೆಸರು ನೀತಾಬೆನ್​ ಸರ್ವಿಯಾ (35). ಆಕೆ ತನ್ನ ಮನೆಯ ಪುಟ್ಟ ನಾಯಿಮರಿಗೆ ಸೋನು ಎಂದು ಹೆಸರಿಟ್ಟಿದ್ದಕ್ಕೆ ಕೋಪಗೊಂಡ ನೆರೆಮನೆಯಾತ ಬೆಂಕಿ ಹಚ್ಚಿದ್ದಾನೆ. ಕಾರಣ, ಈ ಸೋನು ಎಂಬುದು ಆತ ಪತ್ನಿಯ ನಿಕ್​ ನೇಮ್​(ಪ್ರೀತಿಯಿಂದ ಕರೆಯುವ ಹೆಸರು) ಆಗಿತ್ತು. ಸದ್ಯ ಮಹಿಳೆ ಭಾವನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನೀತಾಬೆನ್​​ಗೆ ಪತಿ ಮತ್ತು ಮೂವರು ಮಕ್ಕಳಿದ್ದಾರೆ. ಸೋಮವಾರ ಆಕೆಯ ಪತಿ ಇಬ್ಬರು ಮಕ್ಕಳೊಂದಿಗೆ ಹೊರಗೆ ಹೋಗಿದ್ದರು. ಆಕೆ ಸಣ್ಣ ಮಗುವಿನೊಟ್ಟಿಗೆ ಮನೆಯಲ್ಲೇ ಇದ್ದರು. ಮಧ್ಯಾಹ್ನದ ಹೊತ್ತಿಗೆ ನೆರೆಮನೆಯ ಸುರಾಭಾಯ್​ ಭಾರ್ವಾದ್​ ಮತ್ತು ಇತರ 5ಮಂದಿ ಆಕೆಯ ಮನೆಗೆ ನುಗ್ಗಿದ್ದಾರೆ. ನಿಮ್ಮ ಮನೆಯ ನಾಯಿ ಮರಿಗೆ ಯಾಕೆ ಸೋನು ಎಂದು ಹೆಸರಿಟ್ಟಿದ್ದೀರಿ ಎಂದು ಜಗಳ ತೆಗೆದಿದ್ದಾರೆ. ತುಂಬ ಹೊತ್ತು ನೀತಾಬೆನ್​ ಮತ್ತು ಬಂದಿದ್ದ ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಕೊನೆಯಲ್ಲಿ ಸುರಾಭಾಯ್​ ಭಾರ್ವಾದ್ ಮತ್ತು ಆತನ ಸಹಚರರು ಆಕೆಗೆ ಬೆಂಕಿ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ನೀತಾಬೆನ್​ ಪೊಲೀಸರಿಗೆ ದೂರು ನೀಡಿದ್ದಾರೆ. ಭಾರ್ವಾದ್​ ಮತ್ತು ಆತನ ಸಹಚರರು ಬಂದು ನನ್ನನ್ನು ಒಂದೇ ಸಮ ನಿಂದಿಸಿದರು. ಆದರೆ ನಾನು ಅವರಿಂದ ತಪ್ಪಿಸಿಕೊಳ್ಳಲು ಅಡುಗೆ ಮನೆಗೆ ಹೋದೆ. ಆದರೆ ಮೂವರು ನನ್ನನ್ನು ಹಿಂಬಾಲಿಸಿದರು. ಅದರಲ್ಲಿ ಒಬ್ಬ ನನ್ನ ಮೇಲೆ ಸೀಮೆ ಎಣ್ಣೆ ಸುರಿದ. ಮತ್ತೊಬ್ಬಾತ ಬೆಂಕಿ ಕಡ್ಡಿ ಗೀರಿ ಎಸೆದ ಎಂದು ಹೇಳಿದ್ದಾಳೆ. ಅದಾದ ಬಳಿಕ ಉರಿ ತಾಳಲಾಗದೆ ಕೂಗಲು ಶುರು ಮಾಡಿದೆ. ಅಷ್ಟರಲ್ಲಿ ಅಕ್ಕಪಕ್ಕದ ಮನೆಯ ಕೆಲವರೂ ಅಲ್ಲಿಗೆ ಬಂದರು. ಅದೇ ಹೊತ್ತಿಗೆ ನನ್ನ ಪತಿಯೂ ಆಗಮಿಸಿದರು. ಪತಿ ತಾನು ಧರಿಸಿದ್ದ ಕೋಟ್​ ಬಿಚ್ಚಿ, ನನ್ನ ದೇಹಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸಿದರು ಎಂದು ಮಹಿಳೆ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂದಹಾಗೆ ಈ ಎರಡೂ ಕುಟುಂಬಗಳ ನಡುವೆ ಹಿಂದೊಮ್ಮೆ ನೀರು ಪೂರೈಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳವಾಗಿತ್ತು. ಆದರೆ ನಂತರ ಸಮಸ್ಯೆ ಪರಿಹಾರವಾಗಿತ್ತು.

ಇದನ್ನೂ ಓದಿ: ಮೊದಲ ಬಾರಿಗೆ ಕೋಕಾ ಕೋಲಾ ಕುಡಿದು ಗಾಬರಿಯಾದ ಮಗು; ವೀಡಿಯೋ ವೈರಲ್​