ಮುಂಬೈ: ಭಾರತದಲ್ಲಿ ಒಮಿಕ್ರಾನ್ ಪಾಸಿಟಿವ್ ಆಗಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಮಿಕ್ರಾನ್ ಸೋಂಕಿತರೊಬ್ಬರು ನಿಧನ ಹೊಂದಿದ ಮೊದಲ ಪ್ರಕರಣ ಇದಾಗಿದೆ. ಸಾರ್ವಜನಿಕ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಕೋವಿಡ್-19 ಒಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾಗಿದ್ದ 52 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ಪುಣೆಯ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಶನ್‌ನ ಯಶವಂತರಾವ್ ಚವಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯು ಆ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಅಲ್ಲದೇ ರೋಗಿಯು ಇತ್ತೀಚೆಗೆ ನೈಜೀರಿಯಾಕ್ಕೆ ಪ್ರವಾಸ ಮಾಡಿದ್ದರು. ಕಳೆದ 13 ವರ್ಷಗಳಿಂದ ಮಧುಮೇಹವನ್ನು ಹೊಂದಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಕಾರಣದಿಂದ ಇದು ‘ಒಮಿಕ್ರಾನ್ನಿಂದ ಆಗಿರುವ ಸಾವಲ್ಲ. ಆದರೆ ಅವರಿಗೆ ಒಮಿಕ್ರಾನ್ ಪಾಸಿಟಿವ್ ಆಗಿತ್ತು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
‘‘ರೋಗಿಯ ಸಾವು ಕೋವಿಡ್-19ನಿಂದ ಆಗಿಲ್ಲ. ಇತರ ಕಾರಣಗಳಿಂದಾಗಿದೆ. ಕಾಕತಾಳೀಯವೆಂಬಂತೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ವರದಿಯು ಅವರು ಒಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾಗಿದ್ದಾರೆ ಎಂದು ಬಹಿರಂಗಪಡಿಸಿದೆ’’ ಎಂದು ಇಲಾಖೆಯ ಮಾಹಿತಿಯಲ್ಲಿ ತಿಳಿಸಲಾಗಿದೆ.
ಮುಂಬೈನಲ್ಲೇ ಹೆಚ್ಚು ಒಮಿಕ್ರಾನ್ ಪ್ರಕರಣ; ಕಠಿಣ ಕ್ರಮ ಜಾರಿ:
ಮಹಾರಾಷ್ಟ್ರದಲ್ಲಿ ಒಟ್ಟು 410 ಒಮಿಕ್ರಾನ್ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಅತ್ಯಂತ ಹೆಚ್ಚು ಒಮಿಕ್ರಾನ್ ಪ್ರಕರಣ ಹೊಂದಿರುವ ರಾಜ್ಯವಾಗಿದೆ. ಕೊವಿಡ್ 19 ಹಾಗೂ ಒಮಿಕ್ರಾನ್ ಪ್ರಕರಣಗಳು (Covid 19 Cases) ಮತ್ತೆ ಹೆಚ್ಚುತ್ತಿರುವ ಕಾರಣ ಮುಂಬೈ ಪೊಲೀಸರು ಡಿಸೆಂಬರ್ 30ರಂದು ಮುಂಬೈ ನಗರದಲ್ಲಿ ಸೆಕ್ಷನ್ 144 (Section 144 in Mumbai)ಜಾರಿಗೊಳಿಸಿದ್ದರು. ಜನವರಿ 7ರವರೆಗೆ ಸೆಕ್ಷನ್ 144 ಜಾರಿಯಲ್ಲಿ ಇರಲಿದ್ದು, ಕಠಿಣ ಕ್ರಮಗಳನ್ನು ಹೇರಲಾಗಿದೆ. ಈ ಹೊಸ ಕೊವಿಡ್ 19 ನಿಯಂತ್ರಣ ಕ್ರಮದ ಅನ್ವಯ, ಹೊಸವರ್ಷದ ಆಚರಣೆಯನ್ನು ನಿರ್ಬಂಧಿಸಲಾಗಿದೆ. ಡಿ.30ರಿಂದ ಜನವರಿ 7ರವರೆಗೆ ಮುಂಬೈನ ಯಾವುದೇ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್, ರೆಸಾರ್ಟ್ ಮತ್ತು ಕ್ಲಬ್ಗಳಲ್ಲಿ ಪಾರ್ಟಿ ಮಾಡುವಂತಿಲ್ಲ. ತೆರೆದ ಅಥವಾ ಮುಚ್ಚಿದ ಪ್ರದೇಶಗಳಲ್ಲಿ ನ್ಯೂ ಇಯರ್ ಪಾರ್ಟಿ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ನಗರ ಪೊಲೀಸ್ ಆಯುಕ್ತರು ಸೆಕ್ಷನ್ 144 ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಜನವರಿ 7ರವರೆಗೂ ಇದು ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಇದನ್ನೂ ಓದಿ:
ಕೊವಿಡ್ ಲಸಿಕೆಯ ಮುಂಜಾಗರೂಕತೆ ಡೋಸ್ ಪಡೆಯಲು ಅರ್ಹ ಹಿರಿಯ ನಾಗರಿಕರಿಗೆ ಸಂದೇಶ ಕಳಿಸಲಿದೆ ಕೇಂದ್ರ