ಹೈದರಾಬಾದ್: ಪತಿ ಮತ್ತು ಮೂವರು ಮಕ್ಕಳೊಂದಿಗೆ ರಾತ್ರಿ ರೈಲಿಗಾಗಿ ಕಾಯುತ್ತಿದ್ದ ಗರ್ಭಿಣಿಯನ್ನು ಮೂವರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ (Gang Rape) ಘಟನೆ ಆಂಧ್ರಪ್ರದೇಶದ (Andhra Pradesh) ಬಾಪಟ್ಲಾ ಜಿಲ್ಲೆಯ ರೈಲ್ವೆ ನಿಲ್ದಾಣದ (Train Station) ಬಳಿ ನಡೆದಿದೆ. ತೀವ್ರವಾಗಿ ಥಳಿತಕ್ಕೊಳಗಾದ ಮಹಿಳೆಯ ಪತಿ ರೈಲ್ವೇ ಪೊಲೀಸರ ಸಹಾಯ ಪಡೆಯಲು ಪ್ರಯತ್ನಿಸಿದರೂ ಅಲ್ಲಿ ಯಾರೊಬ್ಬರೂ ಸಹಾಯಕ್ಕೆ ಸಿಗಲಿಲ್ಲ. ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪ್ರಾಪ್ತ ಸೇರಿದಂತೆ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಕುಟುಂಬವು ಕೆಲಸ ಅರಸಿ ಗುಂಟೂರಿನಿಂದ ಕೃಷ್ಣಾ ಜಿಲ್ಲೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಇವರ ಕುಟುಂಬ ಪ್ರಕಾಶಂ ಜಿಲ್ಲೆಯವರು. ಶನಿವಾರ ರಾತ್ರಿ ಐದು ಜನರ ಕುಟುಂಬವು ನಿಲ್ದಾಣದ ಬೆಂಚ್ ಮೇಲೆ ಮಲಗಿದ್ದಾಗ ಅಲ್ಲಿಗೆ ಬಂದ ಮೂವರು ಪುರುಷರು ಎಬ್ಬಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆ ಗಂಡಸರು ಗರ್ಭಿಣಿಯ ಪತಿ ಮೇಲೆ ಹಲ್ಲೆ ನಡೆಸಿದರು. ಆಗ ಗರ್ಭಿಣಿ ಮಧ್ಯಪ್ರವೇಶಿಸಿದ್ದು, ಆಕೆಯನ್ನು ಅಮರಾವತಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ರೆಪಲ್ಲೆಯಲ್ಲಿನ ಸ್ಟೇಷನ್ನಿಂದ ದೂರಕ್ಕೆ ಎಳೆದೊಯ್ದರು. ಪತಿ ಅವರ ಕೈಯಿಂದ ತಪ್ಪಿಸಿಕೊಂಡು ರೈಲ್ವೇ ಪೊಲೀಸರ ಸಹಾಯ ಪಡೆಯಲು ಪ್ರಯತ್ನಿಸಿದರೂ ನಿಲ್ದಾಣದಲ್ಲಿ ಯಾವುದೇ ಅಧಿಕಾರಿ ಸಿಗಲಿಲ್ಲ. ಮಹಿಳೆ ಸಮೀಪದ ಪೊದೆಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಪಟ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರಕಾರ, ಮೂವರು ಆರೋಪಿಗಳು ಕುಡಿದ ಅಮಲಿನಲ್ಲಿ ಪತಿ ಮೇಲೆ ಹಲ್ಲೆ ನಡೆಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಘಟನೆ ಬಗ್ಗೆ ಭಾನುವಾರ ವಿಚಾರಿಸಿದ ಮುಖ್ಯಮಂತ್ರಿ ವೈಎಸ್ ಜಗನ್ ಮತ್ತು ಆಂಧ್ರಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿರೆಡ್ಡಿ ಪದ್ಮಾ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಏತನ್ಮಧ್ಯೆ, ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್, ಒಂಗೋಲ್) ಗೆ ಸ್ಥಳಾಂತರಿಸಲಾಯಿತು.
ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಮಹಿಳಾ ಭದ್ರತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರತಿಭಟನೆ ನಡೆಸಿದೆ
ಆಂಧ್ರಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ದಿಶಾ ಯೋಜನೆಯಡಿ ಸರ್ಕಾರವು ತ್ವರಿತ ತನಿಖೆ, ವಿಚಾರಣೆ ಮತ್ತು ಶಿಕ್ಷೆಯನ್ನು ಪ್ರದರ್ಶಿಸುತ್ತಿರುವ ಸಮಯದಲ್ಲಿ ಆಘಾತಕಾರಿ ಘಟನೆ ವರದಿ ಆಗಿದೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Mon, 2 May 22