ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿದುರಂತ; 6 ಮಂದಿ ಸಾವು, 12ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ
ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ ಘೋಷಿಸಿದ್ದಾರೆ.
ಆಂಧ್ರಪ್ರದೇಶದ ಎಲುರು ಜಿಲ್ಲೆಯಲ್ಲಿ ನಿನ್ನೆ ಮಧ್ಯರಾತ್ರಿ ಭೀಕರ ಅಗ್ನಿದುರಂತ ನಡೆದಿದ್ದು ಅದರಲ್ಲಿ ಆರು ಮಂದಿ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಸುನೂರು ಮಂಡಲ್ನ ಅಕ್ಕಿರೆಡ್ಡಿ ಗುಡೆಮ್ನಲ್ಲಿರುವ ಪೋರಸ್ ರಾಸಾಯಾನಿಕ ಕಾರ್ಖಾನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ದುರಂತ ಉಂಟಾಗಿದ್ದಾಗಿ ವರದಿಯಾಗಿದೆ. ಇದರಲ್ಲಿ ಐದು ಮಂದಿ ಸ್ಥಳದಲ್ಲೇ ಸಜೀವ ದಹನವಾಗಿದ್ದು, ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.
ಇದೊಂದು ಔಷಧಿ ಉತ್ಪಾದನಾ ಘಟಕವಾಗಿದೆ. ಗ್ಯಾಸ್ ಲೀಕ್ ಆಗುತ್ತಿದ್ದಂತೆ ರಿಯಾಕ್ಟರ್ ಸ್ಫೋಟಗೊಂಡಿದ್ದೇ ದೊಡ್ಡ ಪ್ರಮಾಣದ ಅಗ್ನಿ ದುರಂತಕ್ಕೆ ಕಾರಣವಾಗಿದೆ. ಮೃತಪಟ್ಟ 6 ಮಂದಿಯಲ್ಲಿ ನಾಲ್ಕು ಮಂದಿ ಬಿಹಾರದವರು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೀಗೆ ಗಾಯಗೊಂಡವರಲ್ಲಿ ಬಹುತೇಕರ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಮೃತರ ಸಂಖ್ಯೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ರೆಡ್ಡಿ ಘೋಷಿಸಿದ್ದಾರೆ. ಆದರೆ ಘಟನೆ ನಡೆದ ಬೆನ್ನಲ್ಲೇ ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ. ಇಲ್ಲಿ ಫ್ಯಾಕ್ಟರಿ ಇರೋದು ಬೇಡವೇ ಬೇಡ. 10 ಜನರ ಉದ್ಯೋಗಕ್ಕಾಗಿ ನಮ್ಮ ಇಡೀ ಊರು ಸರ್ವನಾಶ ಆಗುತ್ತದೆ. ಇಲ್ಲಿನ ನೀರು ಈಗಾಗಲೇ ಕಲುಶಿತಗೊಂಡಿದೆ. ಪ್ರಾಣಿಗಳು, ಜನರು ಸಾಯುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: KGF Chapter 2 Twitter Review: ಮಧ್ಯರಾತ್ರಿ ನೋಡಿದವರಿಗೆ ‘ಕೆಜಿಎಫ್ 2’ ಇಷ್ಟ ಆಯ್ತಾ? ಇಲ್ಲಿದೆ ಟ್ವಿಟರ್ ವಿಮರ್ಶೆ
Published On - 8:41 am, Thu, 14 April 22