ಜಮ್ಮು-ಕಾಶ್ಮೀರದಲ್ಲಿ ಉಗ್ರರ ಕ್ರೌರ್ಯ; ಸರಪಂಚರೊಬ್ಬರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು

| Updated By: Lakshmi Hegde

Updated on: Mar 10, 2022 | 10:01 AM

ಭಟ್​ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಜಮ್ಮು-ಕಾಶ್ಮೀರ ವಕ್ತಾರ ಆಲ್ತಫ್ ಠಾಕೂರ್​, ಮಾನವೀಯತೆ ಮತ್ತು ಶಾಂತಿಗೆ ಈ ಉಗ್ರರು ಬಹುದೊಡ್ಡ ಶತ್ರುಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಕ್ರೌರ್ಯ; ಸರಪಂಚರೊಬ್ಬರನ್ನು ಗುಂಡಿಕ್ಕಿ ಕೊಂದ ಭಯೋತ್ಪಾದಕರು
ಸಾಂದರ್ಭಿಕ ಚಿತ್ರ
Follow us on

ಶ್ರೀನಗರದ ಹೊರವಲಯದಲ್ಲಿ ಸರಪಂಚ​​ರೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಮೃತರನ್ನು ಸಮೀರ್ ಭಟ್​ ಎಂದು ಗುರುತಿಸಲಾಗಿದ್ದು, ಇವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸರಪಂಚರಾಗಿದ್ದರು. ಇವರ ಹತ್ಯೆಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಖಂಡಿಸಿದ್ದಾರೆ. ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಇ ತೈಬಾದ ಅಂಗಸಂಸ್ಥೆಯಾಗಿರುವ ದಿ ರೆಸಿಸ್ಟನ್ಸ್​ ಫ್ರಂಟ್​ (TRF) ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಸಮೀರ್ ಭಟ್​​ರಿಗೆ ಉಗ್ರರಿಂದ ಬೆದರಿಕೆಯಿದ್ದ ಕಾರಣ ಅವರನ್ನ ಹೊಟೆಲ್​ವೊಂದರಲ್ಲಿ ಇಟ್ಟು, ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ಅನಿವಾರ್ಯ ಕೆಲಸಕ್ಕಾಗಿ ಬುಧವಾರ ಅವರು ಅಲ್ಲಿಂದ ಹೊರಬೀಳಬೇಕಾಯಿತು. ಅದೂ ಕೂಡ ತುಂಬ ಮುನ್ನೆಚ್ಚರಿಕೆಯಿಂದ, ಗೌಪ್ಯವಾಗಿಯೇ ಹೊರಬಿದ್ದಿದ್ದರು. ಆದರೂ ಕೂಡ ಭಯೋತ್ಪಾದಕರು ದಾಳಿ ಮಾಡಿದರು. ಶ್ರೀನಗರದ ಹೊರವಲಯದಲ್ಲಿರುವ ಖೋನ್​ಮೋಹ್​ ಎಂಬಲ್ಲಿ ಉಗ್ರರು ಅವರಿಗೆ ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸರು ಸುತ್ತುವರಿದಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ. ಭಟ್​ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ ಜಮ್ಮು-ಕಾಶ್ಮೀರ ವಕ್ತಾರ ಆಲ್ತಫ್ ಠಾಕೂರ್​, ಮಾನವೀಯತೆ ಮತ್ತು ಶಾಂತಿಗೆ ಈ ಉಗ್ರರು ಬಹುದೊಡ್ಡ ಶತ್ರುಗಳಾಗಿದ್ದಾರೆ. ಮುಗ್ಧ ನಾಗರಿಕರನ್ನು ಕೊಲ್ಲುವುದು ತಮ್ಮ ಶೌರ್ಯ ಎಂದು ಭಾವಿಸಿದ್ದಾರೆ. ಆದರೆ ನಿಜಕ್ಕೂ ಅದು ಅವರ ಹೇಡಿತನದ ಪರಮಾವಧಿ ಎಂದು ಹೇಳಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಇದು ನಿಜಕ್ಕೂ ದುರಂತ. ಸಮೀರ್​ ಭಟ್​ ಹತ್ಯೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರು ತುಂಬ ಒಳ್ಳೆಯ ಕೆಲಸಗಳನ್ನು ಮಾಡುವ ಇಚ್ಛೆ ಹೊಂದಿದ್ದರು. ಇದೇ ಕಾರಣಕ್ಕಾಗಿಯೇ ಉಗ್ರರಿಂದ ಹತ್ಯೆಗೀಡಾಗಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಪಿಡಿಪಿ ಪಕ್ಷ, ಅಪ್ನಿ ಪಾರ್ಟಿಗಳೂ ಸಮೀರ್ ಭಟ್​ ಹತ್ಯೆಯನ್ನು ಖಂಡಿಸಿವೆ.

ಇದನ್ನೂ ಓದಿ: ಬಟ್ಟೆಯೊಳಗೆ 52 ಹಲ್ಲಿ ಮತ್ತು ಹಾವುಗಳನ್ನು ಅಡಗಿಸಿಟ್ಟುಕೊಂಡು ಗಡಿ ದಾಟುತ್ತಿದ್ದ ವ್ಯಕ್ತಿಯ ಬಂಧನ

Published On - 9:49 am, Thu, 10 March 22