ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಹೇಗೆ ನಡೆಯುತ್ತಿದೆ ಎಎಸ್ಐ ಸಮೀಕ್ಷೆ? ಇಲ್ಲಿವರೆಗೆ ಏನೇನು ಸಿಕ್ಕಿದೆ?

|

Updated on: Aug 07, 2023 | 4:03 PM

ಭಾನುವಾರ ಮಸೀದಿಯ ಎಲ್ಲಾ ಮೂರು ಗುಮ್ಮಟಗಳು ಮತ್ತು ನೆಲಮಾಳಿಗೆಯ ಸಮೀಕ್ಷೆ ನಡೆಸಲಾಗಿದೆ ಎಂದು ಸರ್ಕಾರಿ ವಕೀಲ ರಾಜೇಶ್ ಮಿಶ್ರಾ ತಿಳಿಸಿದ್ದಾರೆ. ಈ ಸಮಯದಲ್ಲಿ ಎಲ್ಲಾ ಮೂರು ಗುಮ್ಮಟಗಳು ಮತ್ತು ನೆಲಮಾಳಿಗೆಯ ಛಾಯಾಗ್ರಹಣ ಮತ್ತು ಮ್ಯಾಪಿಂಗ್ ಅನ್ನು ಮಾಡಲಾಗಿದ್ದು ಸೋಮವಾರವೂ ಇದು ಮುಂದುವರೆದಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಹೇಗೆ ನಡೆಯುತ್ತಿದೆ ಎಎಸ್ಐ ಸಮೀಕ್ಷೆ? ಇಲ್ಲಿವರೆಗೆ ಏನೇನು ಸಿಕ್ಕಿದೆ?
ಜ್ಞಾನವಾಪಿ ಮಸೀದಿ
Follow us on

ವಾರಣಾಸಿ ಆಗಸ್ಟ್ 07: ವಾರಣಾಸಿಯ (Varanasi) ಜ್ಞಾನವಾಪಿ ಮಸೀದಿ (Gyanvapi mosque complex) ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) 5ನೇ ದಿನವಾದ ಇಂದು (ಸೋಮವಾರ) ಸಮೀಕ್ಷೆ ಮುಂದುವರಿಸಿದೆ. ಎಎಸ್‌ಐನ 42 ಅಧಿಕಾರಿಗಳು ಆವರಣದೊಳಗೆ ಸಮೀಕ್ಷೆಯಲ್ಲಿ ತೊಡಗಿದ್ದಾರೆ. ಎಎಸ್‌ಐ ತನ್ನ ತಂಡವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು, ನಿಗದಿತ ಸಮಯದೊಳಗೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಬಹುದು. ಆದರೆ, ಶ್ರಾವಣ ಮಾಸದ ಸೋಮವಾರದ ಕಾರಣ ಮೂರು ತಾಸು ವಿಳಂಬವಾಗಿ ಸರ್ವೆ ಕಾರ್ಯ ಆರಂಭವಾಯಿತು. ಸಂಜೆ 5ರವರೆಗೆ ಸಮೀಕ್ಷೆ ನಡೆಯಲಿದೆ. ಎಎಸ್‌ಐ ತಂಡವು ಸಮೀಕ್ಷೆಗಾಗಿ ವಿವಿಧ ತಂತ್ರಗಳನ್ನು ಬಳಸುತ್ತಿದೆ.

ಭಾನುವಾರ ಮಸೀದಿಯ ಎಲ್ಲಾ ಮೂರು ಗುಮ್ಮಟಗಳು ಮತ್ತು ನೆಲಮಾಳಿಗೆಯ ಸಮೀಕ್ಷೆ ನಡೆಸಲಾಗಿದೆ ಎಂದು ಸರ್ಕಾರಿ ವಕೀಲ ರಾಜೇಶ್ ಮಿಶ್ರಾ ತಿಳಿಸಿದ್ದಾರೆ. ಈ ಸಮಯದಲ್ಲಿ ಎಲ್ಲಾ ಮೂರು ಗುಮ್ಮಟಗಳು ಮತ್ತು ನೆಲಮಾಳಿಗೆಯ ಛಾಯಾಗ್ರಹಣ ಮತ್ತು ಮ್ಯಾಪಿಂಗ್ ಅನ್ನು ಮಾಡಲಾಗಿದ್ದು ಸೋಮವಾರವೂ ಇದು ಮುಂದುವರೆದಿದೆ. ಎಎಸ್‌ಐ ತಂಡವು ಬಳಸುತ್ತಿರುವ ತಂತ್ರಗಳ ಮೂಲಕ, ನೆಲದೊಳಗೆ ಯಾವ ವಸ್ತುಗಳ ಅವಶೇಷಗಳು ಹುದುಗಿವೆ ಎಂದು ಅಗೆಯದೆಯೇ ಇದು ಗೊತ್ತಾಗುತ್ತದೆ.

ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ತಂತ್ರಜ್ಞಾನ

ಸಮೀಕ್ಷೆಯಲ್ಲಿ ಎಎಸ್‌ಐಗೆ ಸಹಾಯ ಮಾಡಲು ಐಐಟಿ ಕಾನ್ಪುರದ ತಂಡವು ಶೀಘ್ರದಲ್ಲೇ ವಾರಣಾಸಿಯನ್ನು ತಲುಪಲಿದ್ದು, ಜಿಪಿಆರ್ ತಂತ್ರಜ್ಞಾನದೊಂದಿಗೆ ಪರೀಕ್ಷಿಸಲಾಗುವುದು. ಇದು ಕ್ಯಾಂಪಸ್‌ನಲ್ಲಿ ಕಂಡುಬರುವ ಕಲಾಕೃತಿಗಳು ಎಷ್ಟು ಹಳೆಯವು ಎಂಬುದನ್ನು ಪತ್ತೆ ಹಚ್ಚಲಿಗೆ. ಅಂದರೆ ಅಗೆಯದೆಯೇ, ಈ ತಂತ್ರವು ನೆಲದೊಳಗೆ ಅಡಗಿರುವುದನ್ನು ತಿಳಿಯಲು ಸಾಧ್ಯವಾಗುತ್ತದೆ.

3D ಮ್ಯಾಪಿಂಗ್

ಪ್ರಪ್ರಥಮ ಬಾರಿಗೆ ಎಎಸ್‌ಐ ತಂಡ ಜ್ಞಾನವಾಪಿ ಗುಮ್ಮಟದ ತನಿಖೆಯಲ್ಲಿ ತೊಡಗಿದೆ. ಸಮೀಕ್ಷಾ ತಂಡವು ಮಸೀದಿಯ ಎಲ್ಲಾ ಮೂರು ಗುಮ್ಮಟಗಳ 3D ಮ್ಯಾಪಿಂಗ್ ಮಾಡಿದೆ. ಸಮೀಕ್ಷಾ ತಂಡವು ಗುಮ್ಮಟವನ್ನು ತಲುಪಲು ಏಣಿಯ ಸಹಾಯವನ್ನು ತೆಗೆದುಕೊಂಡಿತು. ಈ ಸಂದರ್ಭದಲ್ಲಿ, ವ್ಯಾಸ್ ಜಿ ಅವರ ಕೊಠಡಿಯನ್ನು ಸಹ ಪರಿಶೀಲಿಸಲಾಯಿತು. ಗುಮ್ಮಟದ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿಯನ್ನು ಮಾಡಲಾಯಿತು. 3D ಮ್ಯಾಪಿಂಗ್ ಮೂಲಕ ಡಿಜಿಟಲ್ ನಕ್ಷೆಯನ್ನು ತಯಾರಿಸಲಾಗುತ್ತದೆ, ಅದರ ಮೂಲಕ 3D ಆಕಾರಗಳನ್ನು ತಯಾರಿಸಲಾಗುತ್ತದೆ.

ಸಿಕ್ಕಿತೇ ವಿಗ್ರಹ?

ಸಮೀಕ್ಷೆ ನಡೆಯುತ್ತಿದ್ದಂತೆ ಎಎಸ್ ಐ ತಂಡಕ್ಕೆ ಅಲ್ಲಿಂದ ಏನು ಸಿಕ್ಕಿದೆ ಎಂಬ ಕುತೂಹಲ ಹೆಚ್ಚುತ್ತಿದೆ. ಎರಡನೇ ದಿನದ ಸಮೀಕ್ಷೆಯ ನಂತರ, ಹಿಂದೂ ಕಾರ್ಯಕರ್ತೆ ಸೀತಾ ಸಾಹು ಅವರು ಆವರಣದೊಳಗೆ ಒಂದು ವಿಗ್ರಹವನ್ನು ನೋಡಿದ್ದೇನೆ ಅದು ಅರ್ಧ ಪ್ರಾಣಿ ಮತ್ತು ಅರ್ಧ ಮನುಷ್ಯ ಆಕೃತಿಯಲ್ಲಿದೆ ಎಂದಿದ್ದಾರೆ.

ಕಮಲ ಮತ್ತು ಸ್ವಸ್ತಿಕ್ ಚಿಹ್ನೆಗಳೂ ಪತ್ತೆ

ಕಳೆದ ವರ್ಷ ಜ್ಞಾನವಾಪಿಯಲ್ಲಿ ನಡೆದ ಸಮೀಕ್ಷೆಯ ಆಯೋಗದ ನಂತರ, ಇಲ್ಲಿನ ನೆಲಮಾಳಿಗೆಯಲ್ಲಿ ಮೊಸಳೆಯ ಶಿಲ್ಪ, ಕಮಲ ಮತ್ತು ಸ್ವಸ್ತಿಕ ಚಿಹ್ನೆಗಳು ಕಂಡುಬಂದಿವೆ ಎಂದು ಹಿಂದೂ ಕಡೆಯವರು ಹೇಳಿದ್ದಾರೆ. ಇಲ್ಲಿ ತ್ರಿಶೂಲದ ಗುರುತುಗಳೂ ಇರುವ ಕಾರಣ ಇದು ದೇವಾಲಯ ಎಂಬುದಕ್ಕೆ ಸಾಕ್ಷಿಯಾಗಿದೆ. ಈಗ ಎಎಸ್‌ಐ ತಂಡವು ಈ ಹೇಳಿಕೆಯ ಸತ್ಯವನ್ನು ಕಂಡುಹಿಡಿಯಲು ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಸಮೀಕ್ಷೆ ನಡೆಸುತ್ತಿದೆ.

ಮುಸ್ಲಿಂ ಕಡೆಯವರು ಏನು ಹೇಳುತ್ತಾರೆ?

ಹಿಂದೂ ಕಡೆಯವರು ಹೇಳಿಕೆಗಳ ಬಗ್ಗೆ ಮುಸ್ಲಿಂ ಕಡೆಯವರನ್ನು ಪ್ರಶ್ನಿಸಿದಾಗ, ವದಂತಿಗಳನ್ನು ಹರಡಲಾಗುತ್ತಿದೆ ಎಂದು ಅವರು ಹೇಳಿದರು. ಆವರಣದಲ್ಲಿ ವಿಗ್ರಹ ಮತ್ತು ತ್ರಿಶೂಲವಿದೆ ಎಂದು ಸಾಬೀತುಪಡಿಸಲು ಇದುವರೆಗೆ ಏನೂ ಬಂದಿಲ್ಲ. ಇಂತಹ ಸುದ್ದಿಗಳಿಗೆ ಕಡಿವಾಣ ಹಾಕುವಂತೆ ಆಡಳಿತಕ್ಕೆ ಮನವಿ ಮಾಡಿದ್ದೇವೆ. ಇದು ಆಗದಿದ್ದರೆ ಸಮೀಕ್ಷೆ ಬಹಿಷ್ಕರಿಸುತ್ತೇವೆ ಎಂದು ಅವರು ಹೇಳಿರುವುದಾಗಿ ಟಿವಿ9 ಭಾರತ್ ವರ್ಷ್ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Mon, 7 August 23