ದೆಹಲಿ: ಕೇಂದ್ರ ಸರ್ಕಾರವೇ ಸದಾ ರಾಜ್ಯಗಳ ವಿರುದ್ಧ ಸಂಘರ್ಷಕ್ಕೆ ಇಳಿದರೆ ದೇಶ ಅಭಿವೃದ್ಧಿಯಾಗುವುದು ಹೇಗೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಾರ್ಟಿ (Aam Aadmi Party – AAP) ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ಪ್ರಶ್ನಿಸಿದರು. ಕೇಂದ್ರ ಸರ್ಕಾರವು ರಾಜ್ಯಗಳಿಗೆ ತೊಂದರೆ ಕೊಡುತ್ತಿದೆ ಎಂದು ನೇರ ಆರೋಪ ಮಾಡಿದ ಅವರು, ಹಣದುಬ್ಬರ, ನಿರುದ್ಯೋಗದ ಬಿಸಿಗೆ ಸಾಮಾನ್ಯ ಜನರು ತತ್ತರಿಸಿದ್ದಾರೆ. ಈ ಹೊತ್ತಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಜೊತೆಗೂಡಿ ಜನಹಿತಕ್ಕಾಗಿ ಶ್ರಮಿಸಬೇಕಿತ್ತು. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೆಹಲಿಯ ಉಪಮುಖ್ಯಮಂತ್ರಿ ಮತ್ತು ಆಪ್ ನಾಯಕ ಮನೀಶ್ ಸಿಸೊಡಿಯಾ ವಿರುದ್ಧ ಸಿಬಿಐ ಲುಕ್ಔಟ್ ನೊಟೀಸ್ ಜಾರಿ ಮಾಡಿದ ನಂತರ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಸಿಬಿಐ ಲುಕ್ಔಟ್ ನೊಟೀಸ್ ಜಾರಿ ಮಾಡಿರುವುದರಿಂದ ಮನೀಶ್ ಸಿಸೋಡಿಯಾ ವಿದೇಶಕ್ಕೆ ಹೋಗುವುದಕ್ಕೆ ನಿರ್ಬಂಧ ಬಂದಿದೆ. ‘ಕೇಂದ್ರ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ದೇಶ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಡುತ್ತಿಲ್ಲ. ಬದಲಿಗೆ ದೇಶದ ವಿರುದ್ಧವೇ ಹೋರಾಡುತ್ತಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಜಾರಿ ನಿರ್ದೇಶನಾಲಯವನ್ನು (ಇಡಿ) ಈ ರೀತಿ ಹೆದರಿಸಲು ಬಳಸಿಕೊಂಡರೆ ದೇಶ ಉದ್ಧಾರವಾಗುವುದು ಹೇಗೆ’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ದೆಹಲಿ ಸರ್ಕಾರದ ಅಬಕಾರಿ ನೀತಿಯು ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಣ ಸಂಘರ್ಷಕ್ಕೆ ಕಾರಣವಾಗಿದೆ. ಈ ನೀತಿ ಜಾರಿಯಿಂದ ಯಾರಿಗೆಲ್ಲ ಲಾಭವಾಗಿದೆ ಎಂಬ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಶುಕ್ರವಾರ ದೆಹಲಿಯ ಲೆಫ್ಟಿನೆಂಟ್ ಜನರಲ್ ವಿನಯ್ ಕುಮಾರ್ ಸಕ್ಸೆನಾ ಶಿಫಾರಸು ಮಾಡಿದ್ದರು. ಕಳೆದ ಶುಕ್ರವಾರ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ದೇಶದ ಹಲವೆಡೆ ಹಿರಿಯ ನಾಯಕರ ಮೇಲೆ ದಾಳಿ ನಡೆಸಿದ್ದವು. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆಯಲ್ಲಿ ಸುಮಾರು 14 ಗಂಟೆ ತಪಾಸಣೆ ನಡೆದಿತ್ತು. ನಂತರ ಮನಸೀಶ್ ಸಿಸೋಡಿಯಾ ಸೇರಿದಂತೆ 10ಕ್ಕೂ ಹೆಚ್ಚು ನಾಯಕರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತು.
‘ನನ್ನ ಮನೆಯಲ್ಲಿ ದಾಳಿ ವೇಳೆ ಯಾವುದೇ ಆಕ್ಷೇಪಾರ್ಹ ದಾಖಲೆಗಳು ಪತ್ತೆಯಾಗಿಲ್ಲ. ನಾನು ಎಲ್ಲರ ಕಣ್ಣಿಗೂ ಕಾಣಿಸಿಕೊಳ್ಳುವಂತೆಯೇ ಇದ್ದೇನೆ. ಆದರೂ ನನ್ನ ವಿರುದ್ಧ ಲುಕ್ಔಟ್ ನೊಟೀಸ್ ಜಾರಿ ಮಾಡಲಾಗಿದೆ. ಇದೇನು ಗಿಮಿಕ್ ಮೋದಿಜಿ’ ಎಂದು ಸಿಸೋಡಿಯಾ ಪ್ರಶ್ನಿಸಿದ್ದರು. ‘ನಾನು ದೆಹಲಿಯಲ್ಲಿ ಮುಕ್ತವಾಗಿ ಓಡಾಡುತ್ತಿದ್ದೇನೆ. ಎಲ್ಲಿಗೆ ಬರಬೇಕು ತಿಳಿಸಿ’ ಎಂದು ಸವಾಲು ಹಾಕಿದ್ದರು.