ದೆಹಲಿ: 2012ರಲ್ಲಿ ತನ್ನ ಮಗಳು ಶೀನಾ ಬೋರಾ ಹತ್ಯೆಯ (Sheena Bora Murder) ಆರೋಪದಲ್ಲಿ ಜೈಲುವಾಸ ಅನುಭವಿಸಿದ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ (Indrani Mukerjea) ಸುಪ್ರೀಂಕೋರ್ಟ್‌ನ (Supreme Court) ಆದೇಶದ ನಂತರ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ನಿಗದಿತ ಸಮಯಕ್ಕೆ ದಾಖಲೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಗುರುವಾರ ಆಕೆಯನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಇಂದ್ರಾಣಿ ಮುಖರ್ಜಿಗೆ ಜಾಮೀನು ನೀಡುತ್ತಿದ್ದೇವೆ. ಆರೂವರೆಗೆ ವರ್ಷ ತುಂಬಾ ದೀರ್ಘ ಸಮಯ ಎಂದು ನ್ಯಾಯಾಲಯ ಗುರುವಾರ ಹೇಳಿತ್ತು.
2015ರಿಂದ ಇಂದ್ರಾಣಿ ಮುಖರ್ಜಿ ಮುಂಬೈ ಜೈಲಿನಲ್ಲಿದ್ದು, ಸ್ಪೆಷಲ್ ಸಿಬಿಐ ಕೋರ್ಟ್ ಪದೇ ಪದೇ ಜಾಮೀನು ನಿರಾಕರಿಸುತ್ತಿದ್ದರಿಂದ ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಜೈಲಿನಲ್ಲಿ ಈಗಾಗಲೇ ಸುದೀರ್ಘ ಕಾಲ ಶಿಕ್ಷೆ ಅನುಭವಿಸಿರುವುದರಿಂದ ಆಕೆಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರ್ಧರಿಸಿತ್ತು.ದೇಶ ಬಿಟ್ಟು ಹೋಗಬಾರದು ಮತ್ತು ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.
ಇಂದ್ರಾಣಿ ಮುಖರ್ಜಿಯ ಪತಿ ಪೀಟರ್ ಮುಖರ್ಜಿ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧಿತರಾಗಿದ್ದರೂ 2020 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.24 ವರ್ಷದ ಶೀನಾ ಬೋರಾಳ ಕೊಲೆ 2012ರ ಏಪ್ರಿಲ್‌ನಲ್ಲಿ ನಡೆದಿದ್ದು, ಆಕೆಯ ಶವವನ್ನು ಮುಂಬೈ ಪಕ್ಕದ ರಾಯಗಡದಲ್ಲಿ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶೀನಾ ಬೋರಾ ಇಂದ್ರಾಣಿ ಮುಖರ್ಜಿಯ ಬೇರೊಂದು ಸಂಬಂಧದಲ್ಲಿ ಹುಟ್ಟಿದ ಮಗಳು, ಸಾರ್ವಜನಿಕವಾಗಿ ಈಕೆ ತನ್ನ ಸಹೋದರಿ ಎಂದೇ ಇಂದ್ರಾಣಿ ಪರಿಚಯಿಸುತ್ತಿದ್ದರು. ಇಂದ್ರಾಣಿ ಮದುವೆಯಾಗಿದ್ದ ಪೀಟರ್ ಮುಖರ್ಜಿಗೆ ಅವರ ಹಿಂದಿನ ದಾಂಪತ್ಯದಲ್ಲಿ ಹುಟ್ಟಿದ ಮಗ ರಾಹುಲ್ ಮುಖರ್ಜಿಯೊಂದಿಗೆ ಶೀನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಈ ಸಂಬಂಧವನ್ನು ಇಂದ್ರಾಣಿ ಒಪ್ಪಲಿಲ್ಲ.
ಈ ಕೊಲೆ ನಡೆದಿದ್ದು ಮೂರು ವರ್ಷಗಳವರೆಗೆ ಬೆಳಕಿಗೆ ಬರಲೇ ಇಲ್ಲ. ಆ ಸಮಯದಲ್ಲಿ ಇಂದ್ರಾಣಿ ಮುಖರ್ಜಿ ಶೀನಾ ಬೋರಾ ಯುಎಸ್‌ಗೆ ತೆರಳಿದ್ದಾರೆ ಎಂದು ಸ್ನೇಹಿತರು ಮತ್ತು ಕುಟುಂಬಕ್ಕೆ ಹೇಳಿದ್ದರು. ಇನ್ನೂ ಜೈಲಿನಲ್ಲಿದ್ದಾಗ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ತಮ್ಮ 17 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದರು ಮತ್ತು 2019 ರಲ್ಲಿ ವಿಚ್ಛೇದನವನ್ನು ನೀಡಲಾಯಿತು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:20 pm, Fri, 20 May 22