Sheena Bora Murder: ಶೀನಾ ಬೋರಾ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ; ಅಚ್ಚರಿಯ ವಿಷಯ ತಿಳಿಸಿದ ಇಂದ್ರಾಣಿ ಮುಖರ್ಜಿ
Indrani Mukerjea: ಶೀನಾ ಬೋರಾ ಬದುಕಿರುವ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಇಂದ್ರಾಣಿ ಮುಖರ್ಜಿ ಆಗ್ರಹಿಸಿದ್ದಾರೆ. ಈ ಮೂಲಕ ಶೀನಾ ಬೋರಾ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.
ನವದೆಹಲಿ: ತಮ್ಮ ಮಗಳು ಶೀನಾ ಬೋರಾ ಕೊಲೆ ಆರೋಪದಲ್ಲಿ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ ಸಿಬಿಐಗೆ ಪತ್ರವೊಂದನ್ನು ಬರೆದಿದ್ದು, ಅಚ್ಚರಿಯ ವಿಷಯವೊಂದನ್ನು ತಿಳಿಸಿದ್ದಾರೆ. ನನ್ನ ಮಗಳು ಶೀನಾ ಬೋರಾ ಜೀವಂತವಾಗಿದ್ದಾಳೆ. ನನ್ನ ಮಗಳು ಶೀನಾ ಬೋರಾ ಬದುಕಿದ್ದು, ಆಕೆ ಕಾಶ್ಮೀರದಲ್ಲಿದ್ದಾಳೆ ಎಂದು ನನ್ನ ಜೈಲಿನ ಸಹಕೈದಿ ತಿಳಿಸಿದ್ದಾಳೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಇಂದ್ರಾಣಿ ಮುಖರ್ಜಿ ಸಿಬಿಐಗೆ ಪತ್ರ ಬರೆದಿದ್ದಾರೆ. ಇಂದ್ರಾಣಿ ಮುಖರ್ಜಿ ಅವರ ಜೊತೆ ಜೈಲಿನಲ್ಲಿರುವ ಸಹಕೈದಿ ಸರ್ಕಾರದ ಅಧಿಕಾರಿಯಾಗಿದ್ದವರು.
ಶೀನಾ ಬೋರಾ ಬದುಕಿರುವ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಇಂದ್ರಾಣಿ ಮುಖರ್ಜಿ ಆಗ್ರಹಿಸಿದ್ದಾರೆ. ಈ ಮೂಲಕ ಶೀನಾ ಬೋರಾ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ. ಸದ್ಯ ಮುಂಬೈನ ಬೈಕುಲಾ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ನವೆಂಬರ್ 27 ರಂದು ಸಿಬಿಐ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. 2012ರಲ್ಲಿ ಶೀನಾ ಬೋರಾಳನ್ನು ಕೊಂದ ಆರೋಪದಲ್ಲಿ ಜೈಲು ಪಾಲಾಗಿರುವ ಮಾಜಿ ಮಾಧ್ಯಮ ನಿರ್ವಾಹಕಿ ಇಂದ್ರಾಣಿ ಮುಖರ್ಜಿ ಅವರು ಸಿಬಿಐಗೆ ಪತ್ರ ಬರೆದಿದ್ದು, ತನ್ನ ಮಗಳು ಬದುಕಿದ್ದಾಳೆ ಎಂದಿದ್ದಾಳೆ. ಅಲ್ಲದೆ, ಕಾಶ್ಮೀರದಲ್ಲಿರುವ ಆಕೆಯನ್ನು ಹುಡುಕಿ ತನಿಖೆ ನಡೆಸುವಂತೆ ಕೋರಿದ್ದು, ಈ ಬೆಳವಣಿಗೆ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ತಾನು ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ಭೇಟಿಯಾಗಿದ್ದೆ ಎಂದು ಹೇಳಿದ ಮಹಿಳಾ ಕೈದಿಯನ್ನು ನಾನು ಜೈಲಿನಲ್ಲಿ ಭೇಟಿಯಾಗಿದ್ದೆ ಎಂದು ಇಂದ್ರಾಣಿ ಮುಖರ್ಜಿ ಹೇಳಿಕೊಂಡಿದ್ದಾರೆ ಎಂದು ಅವರ ವಕೀಲ ಸನಾ ಖಾನ್ ಹೇಳಿದ್ದಾರೆ. ಇಂದ್ರಾಣಿ ಮುಖರ್ಜಿ ಅವರ ಜಾಮೀನಿಗಾಗಿ ಔಪಚಾರಿಕ ಅರ್ಜಿಯನ್ನು ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
49 ವರ್ಷದ ಇಂದ್ರಾಣಿ ಮುಖರ್ಜಿ 2015ರಿಂದ ಮುಂಬೈನ ಜೈಲಿನಲ್ಲಿದ್ದಾರೆ. ಆಕೆಯ ಮೊದಲ ಗಂಡನ ಮಗಳು 25 ವರ್ಷದ ಶೀನಾ ಬೋರಾಳನ್ನು ಕೊಲೆ ಮಾಡಿದ ಆರೋಪದಲ್ಲಿ ಆಕೆಯನ್ನು ಬಂಧಿಸಲಾಗಿತ್ತು. ಆಕೆಯ ಬಂಧನದ ಮೂರು ತಿಂಗಳ ನಂತರ, ಇಂದ್ರಾಣಿಗೆ ಸಹಾಯ ಮಾಡಿದ ಆರೋಪದ ಮೇಲೆ ಆಕೆಯ 2ನೇ ಪತಿ ಪೀಟರ್ ಮುಖರ್ಜಿಯನ್ನೂ ಬಂಧಿಸಲಾಗಿತ್ತು. ಜೈಲಿನಲ್ಲಿದ್ದಾಗಲೇ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ತಮ್ಮ 17 ವರ್ಷಗಳ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿದ್ದರು. 2019ರಲ್ಲಿ ಅವರಿಬ್ಬರೂ ಜೈಲಿನಿಂದಲೇ ವಿಚ್ಛೇದನವನ್ನು ಪಡೆದಿದ್ದರು. ಪೀಟರ್ ಮುಖರ್ಜಿ 2020ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇಂದ್ರಾಣಿ ಮುಖರ್ಜಿ ಇನ್ನೂ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: Family Suicide Case | ಮಗುವಿನ ಸಾವು ಹಸಿವಿನಿಂದ ಅಲ್ಲ ಕೊಲೆ ಆಡಿಯೋ, ವಿಡಿಯೋ ಸಮೇತ ಸಾಕ್ಷಿ ಸಲ್ಲಿಕೆ
Published On - 1:54 pm, Thu, 16 December 21