ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ (Admiral Dinesh K Tripathi) ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. 1964ರ ಮೇ 15ರಂದು ಜನಿಸಿದ ಅಡ್ಮಿರಲ್ ತ್ರಿಪಾಠಿ ಜುಲೈ 1, 1985ರಂದು ಭಾರತೀಯ ನೌಕಾಪಡೆಯ (Indian Navy) ಕಾರ್ಯನಿರ್ವಾಹಕ ಶಾಖೆಗೆ ನಿಯೋಜಿಸಲ್ಪಟ್ಟರು. ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧ ತಜ್ಞರಾಗಿರುವ ಅವರು ಸುಮಾರು 39 ವರ್ಷಗಳ ಕಾಲ ಸುದೀರ್ಘ ಮತ್ತು ವಿಶಿಷ್ಟ ಸೇವೆಯನ್ನು ಸಲ್ಲಿಸಿದ್ದಾರೆ.
ತ್ರಿಪಾಠಿ ಅವರು ಜನವರಿ 2024ರಲ್ಲಿ ನೌಕಾಪಡೆಯ ಉಪಾಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಪಶ್ಚಿಮ ನೇವಲ್ ಕಮಾಂಡ್ ಮುಖ್ಯಸ್ಥರಾಗಿದ್ದರು. ಈ ಹಿಂದೆ ನೌಕಾಪಡೆಯ ಸಿಬ್ಬಂದಿ ಮುಖ್ಯಸ್ಥರಾಗಿ ಕೂಡ ಸೇವೆ ಸಲ್ಲಿಸಿದ್ದರು. ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಇಂದು ಭಾರತದ 26ನೇ ನೌಕಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2 ವರ್ಷ ಮತ್ತು 5 ತಿಂಗಳುಗಳ ಕಾಲ ಈ ಹುದ್ದೆಯಲ್ಲಿದ್ದ ಅಡ್ಮಿರಲ್ ಆರ್. ಹರಿ ಕುಮಾರ್ ಬಳಿಕ ದಿನೇಶ್ ತ್ರಿಪಾಠಿ ಈ ಹುದ್ದೆಯನ್ನು ಏರಿದ್ದಾರೆ.
ಇದನ್ನೂ ಓದಿ: Malaysian Choppers Crash: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್ಗಳ ಪತನ, 10 ಮಂದಿ ಸಾವು
ತ್ರಿಪಾಠಿ ಅವರು 1985ರ ಜುಲೈ 1ರಂದು ನೌಕಾಪಡೆಗೆ ನಿಯೋಜಿಸಲ್ಪಟ್ಟರು. ಸೇವೆಯ ಉಸ್ತುವಾರಿ ವಹಿಸುವ ಮೊದಲು ಅವರು ನೌಕಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿದ್ದರು. ಇಂದು ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ತ್ರಿಪಾಠಿ, ಇತ್ತೀಚಿನ ವರ್ಷಗಳಲ್ಲಿ ನೌಕಾಪಡೆಯು ಯುದ್ಧಕ್ಕೆ ಸಿದ್ಧವಾದ ಶಕ್ತಿಯಾಗಿ ವಿಕಸನಗೊಂಡಿದೆ. ಆತ್ಮನಿರ್ಭರ್ತದ ಕಡೆಗೆ ನೌಕಾಪಡೆಯ ನಡೆಯುತ್ತಿರುವ ಪ್ರಯತ್ನಗಳನ್ನು ಬಲಪಡಿಸುವುದು ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ