ಭಾರತೀಯ ವಾಯು ಸೇನೆ (IAF) ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (AFCAT)-2ಗೆ ಅರ್ಜಿ ಆಹ್ವಾನಿಸಿದೆ. ಹಾರಾಟ ವಿಭಾಗ ಮತ್ತು ಭೂ ವಿಭಾಗ ಎರಡೂ ಕಡೆಗಳಲ್ಲಿ ಖಾಲಿ ಇರುವ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಈ ಅಧಿಸೂಚನೆ ಹೊರಡಿಸಿದೆ.
ಆನ್ಲೈನ್ನಲ್ಲಿ ನೋಂದಣಿ ಪ್ರಕ್ರಿಯೆ ಜೂ.1ರಿಂದ ಶುರುವಾಗಲಿದ್ದು, ಜೂ.30ರವರೆಗೆ ಅವಕಾಶ ಇರುತ್ತದೆ. ಆಸಕ್ತಿ ಇರುವ ಅರ್ಹರು afcat.cdac.in. ಗೆ ಭೇಟಿ ನೀಡಬೇಕು. ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದನ್ನು ನಮೂದಿಸಿ ಅರ್ಜಿ ಸಲ್ಲಿಸಿಕೊಳ್ಳಬಹುದಾಗಿದೆ.
ವಾಯು ಮತ್ತು ಭೂ ವಿಭಾಗಗಳಿಂದ ಒಟ್ಟು 334 ಹುದ್ದೆಗಳು ಖಾಲಿ ಇವೆ. ಇದರಲ್ಲಿ 96 ಕಿರು ಸೇವಾ ಆಯೋಗ (SSC)ದಲ್ಲಿ ಖಾಲಿ ಇವೆ. ಹಾಗೆ ನೆಲ ವಿಭಾಗದ ತಾಂತ್ರಿಕ ಶಾಖೆಯ ಎಸ್ಎಸ್ಸಿ ಮತ್ತು ಶಾಶ್ವತ ಆಯೋಗ (ಪಿಸಿ)ದಲ್ಲಿ 137, ನೆಲ ವಿಭಾಗದ ತಾಂತ್ರಿಕೇತರ ಶಾಖೆಯಲ್ಲಿ 73 ಪಿಸಿ/ಎಸ್ಎಸ್ಸಿ ಹುದ್ದೆಗಳು, ಹವಾಮಾನ ಶಾಖೆಯಲ್ಲಿ 28 ಪಿಸಿ/ಎಸ್ಎಸ್ಸಿ ಹುದ್ದೆಗಳು ಖಾಲಿ ಇವೆ. ಇನ್ನು ಎನ್ಸಿಸಿ ವಿಶೇಷ ಪ್ರವೇಶದಡಿ, ಸಂಯೋಜಿತ ರಕ್ಷಣಾ ಸೇವೆಗಳಡಿ ಬರುವ ಶಾಶ್ವತ ಆಯೋಗಕ್ಕೆ 10 ಪರ್ಸಂಟ್ ಮತ್ತು ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆಯಡಿಯ ಕಿರುಸೇವಾ ಆಯೋಗಕ್ಕೆ 10 ಪರ್ಸಂಟ್ ಸೀಟ್ಗಳನ್ನು ಮೀಸಲಿಡಲಾಗಿದೆ.
ಅರ್ಹತೆಗಳೇನು?
ವಾಯು ವಿಭಾಗದ ಶಾಖೆಯ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವವರು 20-24ವರ್ಷದವರಾಗಿರಬೇಕು. ಇನ್ನು ಇದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಅಂದರೆ 26ವರ್ಷದವರೆಗಿನ ಯಾರಾದರೂ ಡೈರಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA)ದಿಂದ ಮಾನ್ಯತೆ ಪಡೆದ ವಾಣಿಜ್ಯ ಪೈಲಟ್ ಲೈಸೆನ್ಸ್ ಪಡೆದಿದ್ದರೆ ಅಂಥವರಿಗೆ ಅವಕಾಶ ನೀಡಲಾಗುತ್ತದೆ.
ನೆಲವಿಭಾಗದ ಹುದ್ದೆಗಳಿಗೆ, ತಾಂತ್ರಿಕ ಆಗಿರಲಿ ಅಥವಾ ತಾಂತ್ರಿಕೇತರ ಶಾಖೆಯಾಗಲಿ 20-26ವರ್ಷದವರೆಗಿನವರು ಅರ್ಜಿಸಲ್ಲಿಸಬಹುದು. ಎಎಫ್ಸಿಎಟಿಗೆ ನೋಂದಣಿ ಮಾಡುವವರು 250 ರೂ.ಶುಲ್ಕ ಪಾವತಿಸಬೇಕು. ಅದೇ ಎನ್ಸಿಸಿ ವಿಶೇಷ ಪ್ರವೇಶ ಮತ್ತು ಹವಾಮಾನ ಇಲಾಖೆಗೆ ಅರ್ಜಿ ಸಲ್ಲಿಸುವವರು ಹಣ ನೀಡಬೇಕಿಲ್ಲ.
ನೋಂದಣಿ ಹೇಗೆ?
ಮೊದಲು afcat.cdac.in ಗೆ ಭೇಟಿ ನೀಡಿ
ಅದರ ಹೋಂ ಪೇಜ್ನಲ್ಲಿ ಕ್ಯಾಂಡಿಡೇಟ್ ಲಾಗಿನ್ ಟ್ಯಾಬ್ಗೆ ಹೋಗಿ AFCAT 02/2021 ಲಿಂಕ್ ಮೇಲೆ ಕ್ಲಿಕ್ ಮಾಡಿ
ಅದರಲ್ಲಿ ಕಾಣುವ New registration ಎಂಬಲ್ಲಿ ಕ್ಲಿಕ್ ಮಾಡಿ. ಅಲ್ಲಿ ಕೇಳಿರುವ ವಿವರಗಳನ್ನು ತುಂಬಿ.
ಅದನ್ನು ಸಬ್ಮಿಟ್ ಮಾಡಿ ಮತ್ತು ನಿಮ್ಮ ನೋಂದಣಿ ಐಡಿ ಹಾಗೂ ಪಾಸ್ವರ್ಡ್ನ್ನು ಸೇವ್ ಮಾಡಿಟ್ಟುಕೊಳ್ಳಿ.
ನಂತರ ಈ ಕ್ರೆಡೆನ್ಷಿಯಲ್ಗಳನ್ನು ಬಳಸಿ ಲಾಗಿನ್ ಆಗಿ, ಅರ್ಜಿಯನ್ನು ತುಂಬಿ.
ನಂತರ ಶುಲ್ಕವನ್ನು ತುಂಬಿ ಅರ್ಜಿಯನ್ನು ಸಬ್ಮಿಟ್ ಮಾಡಿ. ಆ ಕಾಪಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ.
ಇದನ್ನೂ ಓದಿ: ಕೊರೊನಾ ಮೂರನೇ ಅಲೆ; ಮುಂಜಾಗೃತಾ ಕ್ರಮವಾಗಿ ಮಕ್ಕಳ ಸಮೀಕ್ಷೆಗೆ ಮುಂದಾದ ಕೊಪ್ಪಳ ಜಿಲ್ಲಾಡಳಿತ