ಭಾರತದಲ್ಲಿ ಎಲಿ ಲಿಲ್ಲಿ ಸಂಸ್ಥೆಯ ಆ್ಯಂಟಿಬಾಡಿ ಕಾಕ್ಟೈಲ್ ತುರ್ತು ಬಳಕೆಗೆ ಅಸ್ತು ಎಂದ ಡಿಸಿಜಿಐ; ಕೊರೊನಾ ಮಣಿಸಲು ಹೊಸ ಅಸ್ತ್ರ
ಎಲಿ ಲಿಲ್ಲಿ ಇಂಡಿಯಾ ಅಭಿವೃದ್ಧಿಪಡಿಸಿರುವ ಮಾನೋಕ್ಲೋನಲ್ ಆ್ಯಂಟಿಬಾಡಿ ಡ್ರಗ್ಸ್ ಸಾಧಾರಣ ಹಾಗೂ ಮಧ್ಯಮ ಕೊರೊನಾ ಲಕ್ಷಣ ಇರುವ ರೋಗಿಗಳ ಚಿಕಿತ್ಸೆಗೆ ಬಳಸಬಹುದಾಗಿದ್ದು, ಮೂರನೇ ಅಲೆಯ ನಿರೀಕ್ಷೆಯಲ್ಲಿರುವ ಭಾರತಕ್ಕೆ ಇದೊಂದು ಮಹತ್ತರ ಅಸ್ತ್ರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ: ಕೊರೊನಾ ವೈರಾಣು ನಿಗ್ರಹಕ್ಕಾಗಿ ವೈದ್ಯಕೀಯ ಲೋಕ ನಿರಂತರ ಅಧ್ಯಯನದಲ್ಲಿ ತೊಡಗಿದ್ದು, ಇದೀಗ ಭಾರತದಲ್ಲಿ ಎಲಿ ಲಿಲ್ಲಿ ಇಂಡಿಯಾ ಕಂಪೆನಿ ತಯಾರಿಸಿರುವ ಆ್ಯಂಟಿಬಾಡಿ ಕಾಕ್‌ಟೇಲ್ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಇದರ ತುರ್ತು ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಅಸ್ತು ಎಂದಿರುವ ಬೆನ್ನಲ್ಲೇ ಆ್ಯಂಟಿಬಾಡಿ ಕಾಕ್ಟೈಲ್ ಅನ್ನು ಸರ್ಕಾರಕ್ಕೆ ದಾನವಾಗಿ ನೀಡುವ ಬಗ್ಗೆ ಮಾತುಕತೆ ನಡೆಸಲು ಸಂಸ್ಥೆ ಸಿದ್ಧವಾಗಿದೆ.
ಈಗಾಗಲೇ ಭಾರತದಲ್ಲಿ ರೋಚೆಸ್ ಮತ್ತು ರಿಜನರಿಯನ್ ಎಂಬ ಎರಡು ಕಂಪನಿಗಳ ಆ್ಯಂಟಿಬಾಡಿ ಕಾಕ್ಟೈಲ್ ತುರ್ತು ಬಳಕೆಗೆ ಒಪ್ಪಿಗೆ ಲಭಿಸಿದೆ. ಇದೀಗ ಎಲಿ ಲಿಲ್ಲಿ ಇಂಡಿಯಾ ಅಭಿವೃದ್ಧಿಪಡಿಸಿರುವ ಮಾನೋಕ್ಲೋನಲ್ ಆ್ಯಂಟಿಬಾಡಿ ಡ್ರಗ್ಸ್ ಸಾಧಾರಣ ಹಾಗೂ ಮಧ್ಯಮ ಕೊರೊನಾ ಲಕ್ಷಣ ಇರುವ ರೋಗಿಗಳ ಚಿಕಿತ್ಸೆಗೆ ಬಳಸಬಹುದಾಗಿದ್ದು, ಮೂರನೇ ಅಲೆಯ ನಿರೀಕ್ಷೆಯಲ್ಲಿರುವ ಭಾರತಕ್ಕೆ ಇದೊಂದು ಮಹತ್ತರ ಅಸ್ತ್ರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾದ ಔಷಧ ಸಂಸ್ಥೆಯೊಂದರ ಸಹಯೋಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲಿ ಲಿಲ್ಲಿ ಇಂಡಿಯಾ ಕಂಪೆನಿ ತಾನು ತಯಾರಿಸಿರುವ ಆ್ಯಂಟಿಬಾಡಿ ಕಾಕ್ಟೈಲ್ ತುರ್ತು ಬಳಕೆಗೆ ಡಿಸಿಜಿಐ ಕಡೆಯಿಂದ ಅನುಮತಿ ಸಿಕ್ಕಿರುವುದನ್ನು ಇಂದು (ಜೂನ್ 1) ಹೇಳಿಕೊಂಡಿದೆ. bamlanivimab 700 mg ಮತ್ತು etesevimab 1,400 mg ಮಿಶ್ರಣವಾಗಿರುವ ಈ ಔಷಧಿಯನ್ನು ಭಾರತದಲ್ಲಿ ಸಾಧಾರಣ ಹಾಗೂ ಮಧ್ಯಮ ಕೊರೊನಾ ಲಕ್ಷಣ ಇರುವ ಸೋಂಕಿತರ ತುರ್ತು ಚಿಕಿತ್ಸೆಗೆ ಬಳಸಬಹುದಾಗಿದೆ ಎಂದು ತಿಳಿಸಿದೆ.
ಎಲಿ ಲಿಲ್ಲಿ ಸಂಸ್ಥೆಯು ಕೊರೊನಾ ನಿರ್ಮೂಲನೆ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಪ್ರಮುಖ ಔಷಧವನ್ನು ತಯಾರಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಭಾರತ ಹಾಗೂ ವಿಶ್ವಮಟ್ಟದಲ್ಲಿನ ಕೊವಿಡ್ 19 ವಿರುದ್ಧದ ಹೋರಾಟದಲ್ಲಿ ನಾವು ನಿರಂತರವಾಗಿ ಪಾಲ್ಗೊಳ್ಳುತ್ತೇವೆ. ಈ ಔಷಧವನ್ನು 12 ವರ್ಷ ಮೇಲ್ಪಟ್ಟವರಿಗೆ ಹಾಗೂ ಕನಿಷ್ಠ 40ಕೆಜಿಗಿಂತ ಹೆಚ್ಚು ತೂಕ ಹೊಂದಿರುವವರಿಗೆ ನೀಡಬಹುದಾಗಿದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಲೂಕಾ ವಿಸಿನಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಅಮೆರಿಕಾ ಹಾಗೂ ಯುರೋಪಿನ ಕೆಲವೆಡೆ ಎಲಿ ಲಿಲ್ಲಿ ತಯಾರಿಸಿದ ಆ್ಯಂಟಿಬಾಡಿ ಕಾಕ್ಟೈಲ್ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದು, ಸಾಧಾರಣ ಹಾಗೂ ಮಧ್ಯಮ ಕೊರೊನಾ ಲಕ್ಷಣ ಇರುವ ಸೋಂಕಿತರ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ.
(Eli Lilly gets emergency use approval from DCGI for Antibody Cocktail to treat covid 19 patients in India)
ಇದನ್ನೂ ಓದಿ: ಅಪೊಲೊ ಆಸ್ಪತ್ರೆಯಲ್ಲಿಯೂ ಕೊವಿಡ್ಗೆ ಆ್ಯಂಟಿಬಾಡಿ ಕಾಕ್‌ಟೇಲ್ ಚಿಕಿತ್ಸೆ ಆರಂಭ
Published On - 2:52 pm, Tue, 1 June 21