ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಲೋಹಿಯಾ (DGP Hemant Lohia) ಅವರನ್ನು ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆ (Murder) ಮಾಡಲಾಗಿತ್ತು. ಅವರ ಮನೆಯ ಕೆಲಸದವನು ನಾಪತ್ತೆಯಾಗಿದ್ದರಿಂದ ಆತನ ಮೇಲೇ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಟಿಆರ್‌ಎಫ್ (TRF) ಉಗ್ರ ಸಂಘಟನೆ ತಾನೇ ಈ ಕೊಲೆಯ ರೂವಾರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕೊಲೆಯ ಹೊಣೆ ಹೊತ್ತುಕೊಂಡಿತ್ತು. ಆದರೆ, ಇದನ್ನು ತಳ್ಳಿಹಾಕಿದ್ದ ಪೊಲೀಸರು ಹೇಮಂತ್ ಲೋಹಿಯಾ ಅವರ ಮನೆಗೆಲಸದವನೇ ಈ ಕೊಲೆ ಮಾಡಿದ್ದಾನೆ. ಇದಕ್ಕೂ ಉಗ್ರ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು. ನಾಪತ್ತೆಯಾಗಿದ್ದ ಮನೆಕೆಲಸದ ಯುವಕ ಯಾಸಿರ್ಗಾಗಿ ನಿನ್ನೆ ರಾತ್ರಿಯಿಂದ ಹುಡುಕಾಟ ನಡೆಸಿದ್ದ ಪೊಲೀಸರ ತಂಡ ಕೊನೆಗೂ ಆತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ರಾತ್ರಿಯಿಡೀ ನಡೆದ ಹುಡುಕಾಟದ ನಂತರ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಅವರ ಹಂತಕನನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಹೇಮಂತ್ ಲೋಹಿಯಾ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಮನೆಕೆಲಸಗಾರ ಯಾಸಿರ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಆತನನ್ನು ಉನ್ನತ ಪೊಲೀಸ್ ಅಧಿಕಾರಿಯ ಕೊಲೆ ಆರೋಪದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಮುಖೇಶ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಐಪಿಎಸ್ ಅಧಿಕಾರಿ ಹೇಮಂತ್ ಲೋಹಿಯಾ ಹತ್ಯೆಯ ಹಿಂದೆ ಟಿಆರ್‌ಎಫ್ ಉಗ್ರ ಸಂಘಟನೆ ಕೈವಾಡ?
ಜಮ್ಮುವಿನ ಉದಯವಾಲಾ ಪ್ರದೇಶದಲ್ಲಿ ತನ್ನ ಗೆಳೆಯನ ಮನೆಯಲ್ಲಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಕುಮಾರ್ ಅವರನ್ನು ಸೋಮವಾರ ಮಧ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ನಂತರ ಅವರ ಕತ್ತು ಸೀಳಲಾಗಿತ್ತು. ಬಳಿಕ ಅವರ ದೇಹವನ್ನು ಅರೆಬರೆ ಸುಡಲಾಗಿತ್ತು. ಹೇಮಂತ್ ಲೋಹಿಯಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ಅಹಮದ್ ಎಂಬಾತ ನಾಪತ್ತೆಯಾಗಿದ್ದು, ಆತನೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದರು.
ಆದರೆ, ಟಿಆರ್‌ಎಫ್ ಉಗ್ರ ಸಂಘಟನೆ ಈ ಕೊಲೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಸಿ ಮುಟ್ಟಿಸಲು ಹಿರಿಯ ಐಪಿಎಸ್ ಅಧಿಕಾರಿಯನ್ನು ಕೊಲೆ ಮಾಡಿದ್ದೇವೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯಾಸಿರ್ ತಮ್ಮದೇ ಸಂಘಟನೆಗೆ ಸೇರಿದವನು ಎಂದು ಟಿಆರ್‌ಎಫ್ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ 2019ರಲ್ಲಿ ಈ ಭಯೋತ್ಪಾದಕ ಸಂಘಟನೆಯನ್ನು ಪ್ರಾರಂಭಿಸಲಾಯಿತು. ಈ ಟಿಆರ್‌ಎಫ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ರಚಿಸಿದೆ. ಕಾಶ್ಮೀರದ ಕಣಿವೆಯಲ್ಲಿ ನಡೆದ ಅನೇಕ ಭಯೋತ್ಪಾದಕ ದಾಳಿಗಳ ಹೊಣೆಯನ್ನು ಈ ಸಂಘಟನೆಯು ವಹಿಸಿಕೊಂಡಿದೆ. ಪ್ರಮುಖವಾಗಿ, 2020ರಲ್ಲಿ ಕಾಶ್ಮೀರದಲ್ಲಿ ಐವರು ಭಾರತೀಯ ಸೇನೆಯ ಪ್ಯಾರಾ ಕಮಾಂಡೋಗಳ ಸಾವು ಸೇರಿದಂತೆ ಅನೇಕ ದಾಳಿಯ ಹೊಣೆಯನ್ನು TRF ಸಂಘಟನೆ ವಹಿಸಿಕೊಂಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕತ್ತು ಸೀಳಿ ಹಿರಿಯ ಐಪಿಎಸ್ ಅಧಿಕಾರಿಯ ಬರ್ಬರ ಹತ್ಯೆ; ಮನೆ ಕೆಲಸದವನು ನಾಪತ್ತೆ
ಆದರೆ, ಭಾರತೀಯ ಸೇನೆಯು ದಿ ರೆಸಿಸ್ಟೆನ್ಸ್ ಫ್ರಂಟ್ ಅಸ್ತಿತ್ವವನ್ನು ವಜಾಗೊಳಿಸಿದೆ. TRF ವಾಸ್ತವವಾಗಿ ಅಸ್ತಿತ್ವದಲ್ಲಿಯೇ ಇಲ್ಲ. ಇದು ಕೇವಲ ಸಾಮಾಜಿಕ ಮಾಧ್ಯಮ ಘಟಕವಾಗಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ. ಭದ್ರತಾ ಪಡೆಗಳನ್ನು ದಾರಿತಪ್ಪಿಸಲು ಕೊಲೆ ಮತ್ತು ದಾಳಿಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿಕೊಳ್ಳುತ್ತದೆ ಎಂದು ಹೇಳಿದ್ದರು. ಹೀಗಾಗಿ, ಯಾಸಿರ್ ಅಹಮದ್ನೇ ಈ ಕೊಲೆಯ ಪ್ರಮುಖ ಆರೋಪಿಯಾಗಿದ್ದರಿಂದ ಆತನಿಗಾಗಿ ನಿನ್ನೆ ರಾತ್ರಿಯಿಂದ ಹುಡುಕಾಟ ನಡೆಸಲಾಗುತ್ತಿತ್ತು. ಕೊನೆಗೂ ಆತ ಇಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ವಿಚಾರಣೆ ನಡೆಸಲಾಗುತ್ತಿದ್ದು, ಈ ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ತನಿಖೆಯ ಬಳಿಕ ಮಾಹಿತಿ ಸಿಗಲಿದೆ.
Published On - 12:53 pm, Tue, 4 October 22