ದೆಹಲಿ: ಮಿಲಿಟರಿ ನೇಮಕಾತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಅಗ್ನಿಪಥ್ ಯೋಜನೆ (Agnipath Scheme) ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ವಿವಿಧ ರಾಜ್ಯಗಳ ಪೊಲೀಸರು ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡ ಸುಮಾರು 1,000 ಮಂದಿಯನ್ನು ಬಂಧಿಸಿದ್ದಾರೆ. ಬಿಹಾರದಲ್ಲಿಯೇ (Bihar) ಹೆಚ್ಚಿನ ಸಂಖ್ಯೆಯ ಜನರನ್ನು ಬಂಧಿಸಲಾಗಿದೆ. ಪ್ರತಿಭಟನೆಯ ವಿಡಿಯೊ ಫೂಟೇಜ್ಗಳನ್ನು ಗಮನಿಸಿ, ಹಿಂಸಾಚಾರ ಎಸಗಿದವರನ್ನು ಪೊಲೀಸರು ಗುರುತಿಸುತ್ತಿದ್ದಾರೆ. ಅಗ್ನಿಪಥ್ ಯೋಜನೆ ವಿರೋಧಿಸಿ ನಡೆದ ಪ್ರತಿಭಟನೆಗಳ ತೀವ್ರತೆ ಬಿಹಾರದಲ್ಲಿ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಲಾಗಿದೆ. ರೈಲುಗಳಿಗೂ ಬೆಂಕಿ ಹಚ್ಚಲಾಗಿದೆ. ಬಿಹಾರದ 805 ಮಂದಿಯ ವಿರುದ್ಧ 148 ಎಫ್ಐಆರ್ ದಾಖಲಾಗಿದೆ.
ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಹಾಳು ಮಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಇಂಥವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಬಿಹಾರದ ಹೆಚ್ಚುವರಿ ಗೃಹ ಕಾರ್ಯದರ್ಶಿ ಚೈತನ್ಯ ಪ್ರಸಾದ್ ಹೇಳಿದರು. ದುಷ್ಕೃತ್ಯ ಎಸಗಿದವರನ್ನು ಗುರುತಿಸಿ, ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ತಾರೆಗಾಣ ರೈಲು ನಿಲ್ದಾಣದಲ್ಲಿ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಮಸೌರ್ಹಿ ಪಟ್ಟಣದ ಕೋಚಿಂಗ್ ಕೇಂದ್ರಗಳ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಿಂಸಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ಜಿಲ್ಲೆಯಲ್ಲಿ 191 ಮಂದಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ.
ತೆಲಂಗಾಣದ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಹಿಂಸಾಚಾರದಲ್ಲಿ ಹೊರಗಿನವರ ಕೈವಾಡವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ‘ಪ್ರತಿಭಟನೆಯನ್ನು ಯಾವುದೇ ಬಾಹ್ಯ ಸಮಾಜಘಾತುಕ ಶಕ್ತಿ ಪ್ರೇರೇಪಿಸಿಲ್ಲ. ಸೇನೆಯಲ್ಲಿ ಕೆಲಸ ಬಯಸಿದ್ದ ಆಕಾಂಕ್ಷಿಗಳು ಕೋಚಿಂಗ್ ಕೇಂದ್ರಗಳ ಮುಖ್ಯಸ್ಥರು ನೀಡಿದ ತಪ್ಪು ಮಾಹಿತಿಯಿಂದ ದಾರಿ ತಪ್ಪಿ ಹಿಂಸಾಚಾರಕ್ಕೆ ಇಳಿದಿದ್ದರು ಎಂದು ರೈಲ್ವೆ ರಕ್ಷಣಾ ದಳದ ಎಡಿಜಿಪಿ ರಣದೀಪ್ ಶಾಂಡಿಲ್ಯ ಹೇಳಿದರು.
ಕೋಚಿಂಗ್ ಕೇಂದ್ರವೊಂದರ ನಿರ್ದೇಶಕ ಈ ಪ್ರತಿಭಟನೆಯ ಪ್ರಧಾನ ಸೂತ್ರಧಾರ ಎಂದು ಶಂಕಿಸಲಾಗಿದ್ದು, ಆತನನ್ನು ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 46 ಮಂದಿಯನ್ನು ಬಂಧಿಸಿದ್ದಾರೆ. ಪ್ರಸ್ತುತ ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇತರರನ್ನು ಗುರುತಿಸುವ ಕೆಲಸ ಆರಂಭವಾಗಿದೆ.
ಉತ್ತರ ಪ್ರದೇಶದಲ್ಲಿ ಈವರೆಗೆ 387 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ 145 ಮಂದಿಯ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151ನೇ ವಿಧಿಯ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇತರ 242 ಆರೋಪಿಗಳ ಮೇಲೆ ಸಾರ್ವಜನಿಕ ಆಸ್ತಿಗೆ ಧಕ್ಕೆ ತಂದ ಆರೋಪ ಹೊರಿಸಲಾಗಿದೆ. ಪ್ರತಿಭಟನಾಕಾರರ ವಿರುದ್ಧ ಭಾನುವಾರದವರೆಗೆ ಒಟ್ಟು 34 ಎಫ್ಐಆರ್ಗಳನ್ನು ದಾಖಲಿಸಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದರು.
ಅಗ್ನಿಪಥ್ ಯೋಜನೆಯ ವಿರುದ್ಧ ಹೋರಾಟ ಅರಂಭಿಸಲೆಂದು ಪೊಲೀಸರಿಂದ ಅನುಮತಿ ಪಡೆಯದೇ ಗುಂಪು ಸೇರಿದ್ದ ಆರೋಪದ ಮೇಲೆ 14 ಮಂದಿಯನ್ನು ಗುಜರಾತ್ನ ಅಹಮದಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. ನಗರದ ಮೆಘಾನಿನಗರ ಪ್ರದೇಶದಲ್ಲಿ ಸುಮಾರು 100 ಮಂದಿ ಗುಂಪುಗೂಡಿದ್ದರು. ಪೊಲೀಸರ ಕ್ರಮವನ್ನು ಗುಜರಾತ್ನ ಪ್ರತಿಭಟನಾಕಾರರು ವಿರೋಧಿಸಿದ್ದಾರೆ. ‘ನಾವು ಗಾಂಧಿಯವರ ಮಾರ್ಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೆವು. ಆದರೆ ಎರಡು ನಿಮಿಷ ಕುಳಿತುಕೊಳ್ಳಲೂ ನಮಗೆ ಪೊಲೀಸರು ಅವಕಾಶ ನೀಡಲಿಲ್ಲ. ಈ ಯೋಜನೆಯನ್ನು ಹಿಂಪಡೆದಿರುವುದಾಗಿ ಕೇಂದ್ರ ಸರ್ಕಾರ ಘೋಷಿಸುವವರೆಗೆ ಪ್ರತಿಭಟನೆ ನಡೆಸಬೇಕು ಎಂದು ನಾವು ಇಚ್ಛಿಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ಪ್ರತಿಭಟನಾಕಾರರೊಬ್ಬರು ಬೇಸರ ವ್ಯಕ್ತಪಡಿಸಿದರು.
ತೊಕೊನಿಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ ಸುಮಾರು 400 ಮಂದಿಯನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ. ಹಿಂಸಾಚಾರಕ್ಕಿಳಿದ ಯುವ ಪ್ರತಿಭಟನಾಕಾರರು, ಪೊಲೀಸರೊಂದಿಗೆ ವಾಗ್ವಾದ ಆರಂಭಿಸಿದರು. ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯುಂಟು ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 am, Mon, 20 June 22