ನವದೆಹಲಿ: ದೇಶದಲ್ಲಿ ರೈತರಿಗೆ ನೀಡುವ ಕೃಷಿ ಸಾಲ ಹಾಗೂ ಬೆಳೆ ಸಾಲದ ಪ್ರಮಾಣವನ್ನು ಏರಿಸುವ ಸಾಧ್ಯತೆ ಇದೆ. ಈ ವರ್ಷದ ಫೆಬ್ರವರಿ 1ರಂದು ಲೋಕಸಭೆಯಲ್ಲಿ ಮಂಡನೆಯಾಗುವ ಕೇಂದ್ರ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಕೃಷಿ ಸಾಲದ ಗುರಿಯನ್ನು 18 ಲಕ್ಷ ಕೋಟಿ ರೂ.ಗೆ ಏರಿಸುವ ಸಾಧ್ಯತೆ ಇದೆ. ಇದರಿಂದ ದೇಶದ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಸಾಲ, ಬೆಳೆ ಸಾಲ ಸಿಗಲಿದೆ. ನಮ್ಮ ಕರ್ನಾಟಕದಲ್ಲೂ ರೈತರು ಬೆಳೆ, ಕೃಷಿ ಸಾಲ ಪಡೆಯುವುದು ಹೇಗೆ ಎಂಬುದರ ಪೂರ್ತಿ ಮಾಹಿತಿ ಇಲ್ಲಿದೆ.
ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಫೆಬ್ರವರಿ 1ರಂದು ಮಂಡಿಸಲಿರುವ 2022-23ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕೃಷಿ ಸಾಲದ ಗುರಿಯನ್ನು ಸುಮಾರು 18 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಕೇಂದ್ರದ ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ (2021-22) 16.5 ಲಕ್ಷ ಕೋಟಿ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಸರ್ಕಾರವು ಪ್ರತಿ ವರ್ಷ ಕೃಷಿ ವಲಯದ ಸಾಲದ ಗುರಿಯನ್ನು ಹೆಚ್ಚಿಸುತ್ತಿದೆ. ಈ ಬಾರಿಯೂ 2022-23ಕ್ಕೆ ಗುರಿಯನ್ನು 18ರಿಂದ 18.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ತಿಂಗಳ ಕೊನೆಯ ವಾರದಲ್ಲಿ ಬಜೆಟ್ ಅಂಕಿ-ಅಂಶಕ್ಕೆ ಅಂತಿಮ ಸ್ಪರ್ಶ ನೀಡುವ ಸಮಯದಲ್ಲಿ ಕೃಷಿ ಸಾಲದ ಅಂತಿಮ ಸಂಖ್ಯೆಯನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕಿಂಗ್ ವಲಯಕ್ಕೆ ಬೆಳೆ ಸಾಲ ಗುರಿ ಸೇರಿದಂತೆ ವಾರ್ಷಿಕ ಕೃಷಿ ಸಾಲವನ್ನು ಸರ್ಕಾರ ನಿಗದಿಪಡಿಸುತ್ತದೆ. ಕೃಷಿ ಸಾಲದ ಹರಿವು ಕಳೆದ ಕೆಲ ವರ್ಷಗಳಲ್ಲಿ ಸ್ಥಿರವಾಗಿ ಹೆಚ್ಚುತ್ತಿದೆ. ಪ್ರತಿ ಹಣಕಾಸು ವರ್ಷಕ್ಕೆ ನಿಗದಿಪಡಿಸಿದ ಗುರಿಯನ್ನು ಮೀರಿದೆ. ಉದಾಹರಣೆಗೆ, 2017-18ರಲ್ಲಿ 11.68 ಲಕ್ಷ ಕೋಟಿ ರೂ. ಮೌಲ್ಯದ ಸಾಲವನ್ನು ರೈತರಿಗೆ ನೀಡಲಾಗಿದೆ. ಆ ವರ್ಷಕ್ಕೆ ನಿಗದಿಪಡಿಸಿದ 510 ಲಕ್ಷ ಕೋಟಿ ರೂಪಾಯಿ ಗುರಿಗಿಂತ ಹೆಚ್ಚಿನ ಸಾಲವನ್ನು ರೈತರಿಗೆ ನೀಡಲಾಗಿದೆ.
ಅದೇ ರೀತಿ 2016-17ನೇ ಸಾಲಿನಲ್ಲಿ 10.66 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬೆಳೆ ಸಾಲ ವಿತರಿಸಲಾಗಿದ್ದು, ಸಾಲದ ಗುರಿ 9 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ. ಹೆಚ್ಚಿನ ಕೃಷಿ ಉತ್ಪಾದನೆಯನ್ನು ಸಾಧಿಸುವಲ್ಲಿ ಕ್ರೆಡಿಟ್ ನಿರ್ಣಾಯಕ ಇನ್‌ಪುಟ್ ಆಗಿದೆ. ಸಾಂಸ್ಥಿಕ ಸಾಲವು ಸಾಂಸ್ಥಿಕವಲ್ಲದ ಮೂಲಗಳಿಂದ ರೈತರನ್ನು ದೂರ ಮಾಡಲು ಮಾಡಲು ಸಹಾಯ ಮಾಡುತ್ತದೆ, ಅಲ್ಲಿ ಅವರು ಬಡ್ಡಿಗೆ ಬಡ್ಡಿ ಪಾವತಿಸಿ ಸಾಲದ ಸುಳಿಗೆ ಸಿಲುಕಿ ಹಾಕಿಕೊಳ್ಳುತ್ತಾರೆ. ಇದರಿಂದ ರೈತರಿಗೆ ಸಂಕಷ್ಟ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಿ ಬ್ಯಾಂಕ್ ಗಳಿಂದಲೇ ಸಾಲ ಪಡೆಯಲು ಅನುಕೂಲವಾಗುವಂತೆ ಮಾಡಲು ಪ್ರತಿ ವರ್ಷ ಕೇಂದ್ರ ಸರ್ಕಾರವು ಕೃಷಿ ಸಾಲದ ಗುರಿಯನ್ನು ಹೆಚ್ಚಿಸುತ್ತಿದೆ.
ಸಾಮಾನ್ಯವಾಗಿ ಕೃಷಿ ಸಾಲಗಳು ಒಂಬತ್ತು ಪರ್ಸೆಂಟ್ ಬಡ್ಡಿದರವನ್ನು ಆಕರ್ಷಿಸುತ್ತವೆ. ಆದಾಗ್ಯೂ, ಅಲ್ಪಾವಧಿಯ ಬೆಳೆ ಸಾಲವನ್ನು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡಲು ಸರ್ಕಾರವು ಬಡ್ಡಿ ರಿಯಾಯಿತಿಯನ್ನು ಒದಗಿಸುತ್ತಿದೆ.
ರೈತರಿಗೆ 3 ಲಕ್ಷದವರೆಗಿನ ಅಲ್ಪಾವಧಿಯ ಕೃಷಿ ಸಾಲವನ್ನು ವಾರ್ಷಿಕ ಶೇಕಡ 7 ರ ಪರಿಣಾಮಕಾರಿ ದರದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎರಡು ಶೇಕಡಾ ಬಡ್ಡಿ ಸಬ್ಸಿಡಿಯನ್ನು ನೀಡುತ್ತಿದೆ.
ನಿಗದಿತ ದಿನಾಂಕದೊಳಗೆ ಸಾಲವನ್ನು ತ್ವರಿತವಾಗಿ ಮರುಪಾವತಿಸುವ ರೈತರಿಗೆ ಮೂರು ಪರ್ಸೆಂಟ್ ದರದಲ್ಲಿ ಹೆಚ್ಚುವರಿ ಪ್ರೋತ್ಸಾಹವನ್ನು ನೀಡಲಾಗುತ್ತಿದೆ, ಇದು ಪರಿಣಾಮಕಾರಿ ಬಡ್ಡಿ ದರವನ್ನು ಶೇಕಡಾ ನಾಲ್ಕಕ್ಕೆ ಇಳಿಕೆ ಮಾಡುತ್ತದೆ. ಔಪಚಾರಿಕ ಸಾಲ ವ್ಯವಸ್ಥೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ವ್ಯಾಪ್ತಿಯನ್ನು ಹೆಚ್ಚಿಸಲು ಆರ್‌ಬಿಐ ಮೇಲೆ ಆಧಾರರಹಿತ ಕೃಷಿ ಸಾಲದ ಮಿತಿಯನ್ನು 1 ಲಕ್ಷ ರೂ.ನಿಂದ 1.6 ಲಕ್ಷ ರೂ.ಗೆ ಏರಿಸಲು ನಿರ್ಧರಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು (PSB ಗಳು), ಖಾಸಗಿ ಸಾಲದಾತರು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (RRBs) ತಮ್ಮ ಸ್ವಂತ ನಿಧಿಯ ಬಳಕೆಗೆ ಮತ್ತು RRB ಗಳು ಮತ್ತು ಸಹಕಾರಿ ಬ್ಯಾಂಕುಗಳಿಗೆ ಮರುಹಣಕಾಸು ಮಾಡಲು ನಬಾರ್ಡ್‌ಗೆ ಬಡ್ಡಿ ರಿಯಾಯಿತಿಯನ್ನು ನೀಡಲಾಗುತ್ತದೆ. ನಬಾರ್ಡ್ ಮೂಲಕ ರಾಜ್ಯದ ಡಿ.ಸಿ.ಸಿ. ಬ್ಯಾಂಕ್ ಗಳಿಗೆ ಹಣವನ್ನು ರೈತರಿಗೆ ಕೃಷಿ ಸಾಲ ನೀಡಲು ನೀಡಲಾಗುತ್ತದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ 3 ಲಕ್ಷ ರೂ.ವರೆಗಿನ ಬೆಳೆ ಸಾಲಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸಾಲಕ್ಕೆ ಬಡ್ಡಿ ಕಟ್ಟಿ ಹೈರಾಣಾಗುವ ಪ್ರಮೇಯವೇ ಇಲ್ಲ. 3 ಲಕ್ಷ ರೂ.ವರೆಗಿನ ಬೆಳೆ ಸಾಲವನ್ನು ಬಳಸಿಕೊಂಡು ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಕೂಲಿಯಾಳುಗಳ ಖರ್ಚುವೆಚ್ಚವನ್ನು ನಿಭಾಯಿಸಬಹುದು. ಕರ್ನಾಟಕದ ಬಹಳಷ್ಟು ಪ್ರಗತಿ ಪರ ರೈತರು ಬೆಳೆ ಸಾಲ ಪಡೆದು ಕೃಷಿ ವೆಚ್ಚ ನಿಭಾಯಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗಿನ ಬೆಳೆ ಸಾಲ ಯೋಜನೆಯು ರೈತರಿಗೆ ಸಾಕಷ್ಟು ಅನುಕೂಲಕರವಾಗಿದೆ.
ಕರ್ನಾಟಕದಲ್ಲಿ 2019-20 ರಲ್ಲಿ 22.58 ಲಕ್ಷ ರೈತರಿಗೆ 13,577 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಲಾಗಿತ್ತು. 2020-21ರಲ್ಲಿ 24.5 ಲಕ್ಷ ರೈತರಿಗೆ 14,500 ಕೋಟಿ ರೂ. ಕೃಷಿ ಸಾಲ ನೀಡುವ ಗುರಿ ಇತ್ತು. 2021-22 ರಲ್ಲಿ 20 ಸಾವಿರ ಕೋಟಿ ರೂ. ಕೃಷಿ ಸಾಲ ನೀಡುವ ಗುರಿಯನ್ನು ಸಹಕಾರ ಇಲಾಖೆ ಹಾಕಿಕೊಂಡಿತ್ತು. ಈಗ 2022-23ರಲ್ಲಿ ಕರ್ನಾಟಕದಲ್ಲೂ ಕೃಷಿ ಸಾಲ, ಬೆಳೆ ಸಾಲ ನೀಡುವ ಗುರಿಯನ್ನು ಸಹಜವಾಗಿಯೇ ಹೆಚ್ಚಿಸಲಾಗುತ್ತದೆ. ಈ ಬಾರಿ 2022ರ ಮಾರ್ಚ್ನಿಂದ ಪ್ರಾರಂಭವಾಗುವ 2022-23ರ ಹಣಕಾಸು ವರ್ಷದಲ್ಲಿ 25 ಸಾವಿರ ಕೋಟಿ ರೂ. ಕೃಷಿ ಸಾಲ, ಬೆಳೆ ಸಾಲ ನೀಡುವ ಗುರಿಯನ್ನು ಸಹಕಾರ ಇಲಾಖೆ ಹಾಕಿಕೊಳ್ಳುವ ನಿರೀಕ್ಷೆ ಇದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ರೈತರಿಗೆ ಡಿಸಿಸಿ ಬ್ಯಾಂಕ್ ಗಳು 10 ಲಕ್ಷ ರೂ.ವರೆಗೂ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡುತ್ತಾವೆ. ಹಸು ಸಾಕಣೆ, ಕೋಳಿ ಸಾಕಣೆ, ಕುರಿ ಸಾಕಣೆ, ಕೃಷಿ ಭೂಮಿ ಅಭಿವೃದ್ದಿ ಸೇರಿದಂತೆ ನಾನಾ ಉದ್ದೇಶಗಳಿಗೆ ಭೂಮಿಯನ್ನು ಅಡಮಾನ ಇಟ್ಟುಕೊಂಡು ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡುತ್ತಾವೆ. ಈ ಸಾಲಕ್ಕೆ ಶೇ.4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಈ ಸಾಲ ಪಡೆಯಲು ಕೃಷಿ ಭೂಮಿಯ ಅಸಲು ಪತ್ರಗಳು, ಪ್ರಾಜೆಕ್ಟ್ ವರದಿ, ಪಹಣಿ, ಭೂ ಕಂದಾಯ ರಸೀದಿ, ಮ್ಯುಟೇಷನ್, ಸಬ್ ರಿಜಿಸ್ಟಾರ್ ಕಚೇರಿಯ ಇ.ಸಿ. ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಡಿಸಿಸಿ ಬ್ಯಾಂಕ್ಗೆ ಸಲ್ಲಿಸಬೇಕು. ಈ ದಾಖಲೆಗಳನ್ನು ಸಾಲ ವಾಪಾಸ್ ತೀರಿಸುವವರೆಗೂ ಬ್ಯಾಂಕ್ ಇಟ್ಟುಕೊಂಡಿರುತ್ತದೆ. ಕೃಷಿ ಭೂಮಿ, ನೀರಿನ ಸೌಲಭ್ಯ ಇದ್ದು, ಹಸು ಸಾಕಣೆ, ಕೋಳಿ ಸಾಕಣೆ, ಕುರಿ ಸಾಕಣೆ ಸೇರಿದಂತೆ ವಿವಿಧ ಉದ್ಯೋಗಗಳನ್ನು ಉದ್ಯಮ ಸ್ವರೂಪದಲ್ಲಿ ಮಾಡ ಬಯಸುವ ನಿರುದ್ಯೋಗಿ ಯುವಜನತೆಗೆ, ರೈತರಿಗೆ ಈ ಯೋಜನೆಯೂ ವರದಾನವಾಗಿದೆ.
ಇದನ್ನೂ ಓದಿ: ಬರಡು ಭೂಮಿಯಲ್ಲಿ ಮಿಶ್ರ ಬೆಳೆ ಬೆಳೆದ ಬೀದರ್ ರೈತ; ನೈಸರ್ಗಿಕ ಕೃಷಿ ಪದ್ಧತಿಯಿಂದಲೇ ವರ್ಷಕ್ಕೆ 20 ಲಕ್ಷ ರೂ. ಆದಾಯ
ಕೃಷಿ ಕಾಯ್ದೆಗಳು ತಿದ್ದುಪಡಿ ರೂಪದಲ್ಲಿ ಮತ್ತೆ ಜಾರಿಯಾಗುತ್ತವಾ? ಕೇಂದ್ರ ಕೃಷಿ ಸಚಿವರು ಕೊಟ್ಟ ಸ್ಪಷ್ಟ ಉತ್ತರ ಹೀಗಿದೆ
Published On - 4:06 pm, Mon, 3 January 22