ಕೃಷಿ ಕಾಯ್ದೆಗಳು ತಿದ್ದುಪಡಿ ರೂಪದಲ್ಲಿ ಮತ್ತೆ ಜಾರಿಯಾಗುತ್ತವಾ? ಕೇಂದ್ರ ಕೃಷಿ ಸಚಿವರು ಕೊಟ್ಟ ಸ್ಪಷ್ಟ ಉತ್ತರ ಹೀಗಿದೆ

ಕೃಷಿ ಕಾಯ್ದೆಗಳು ತಿದ್ದುಪಡಿ ರೂಪದಲ್ಲಿ ಮತ್ತೆ ಜಾರಿಯಾಗುತ್ತವಾ? ಕೇಂದ್ರ ಕೃಷಿ ಸಚಿವರು ಕೊಟ್ಟ ಸ್ಪಷ್ಟ ಉತ್ತರ ಹೀಗಿದೆ
ನರೇಂದ್ರ ಸಿಂಗ್ ತೋಮರ್

ಪ್ರಧಾನಿ ಮೋದಿಯವರು ಕ್ಷಮೆ ಕೇಳಿ, ಈ ಕಾಯ್ದೆಗಳನ್ನು ವಾಪಸ್​ ಪಡೆದಿದ್ದಾರೆ. ಆದರೆ ಮತ್ತೆ ಮುಂದುವರಿಯುತ್ತೇವೆ ಎಂದು ಹೇಳುವ ಮೂಲಕ ಕೃಷಿ ಸಚಿವ ನರೇಂದ್ರ ತೋಮರ್​ ಪ್ರಧಾನಿ ಮೋದಿಯವರು ಕೇಳಿದ್ದ ಕ್ಷಮೆಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್​ ಗಾಂಧಿ ಹೇಳಿದ್ದರು.

TV9kannada Web Team

| Edited By: Lakshmi Hegde

Dec 26, 2021 | 2:32 PM

ಗ್ವಾಲಿಯರ್​: ಮೂರು ವಿವಾದಿತ ಕೃಷಿ ಕಾಯ್ದೆ(Farm Laws) ಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದರೂ ಅದರ ಸುತ್ತ ನಡೆಯುತ್ತಿರುವ ವಿವಾದ ಮಾತ್ರ ಕೊನೆಯಾಗಿಲ್ಲ. ಈ ಮಧ್ಯೆ ಕೇಂದ್ರ ಕೃಷಿ ಸಚಿವ ನರೇಂದ್ರ್​ ಸಿಂಗ್​ ತೋಮರ್(Narendra Singh Tomar)​ ಅವರು ಸ್ಪಷ್ಟನೆಯೊಂದನ್ನು ನೀಡಿದ್ದಾರೆ. ಮುಂದೆ ಇನ್ಯಾವತ್ತೂ ಕೂಡ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಜಾರಿ ಮಾಡುವುದಿಲ್ಲ. ತಿದ್ದುಪಡಿ ರೂಪದಲ್ಲೂ ಸಹ ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.  ಕೇಂದ್ರ ಸರ್ಕಾರ ಈಗ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದಿದ್ದರೂ, ಮುಂದಿನ ವರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಂತರ ಮತ್ತೆ ಕಾಯ್ದೆಗಳನ್ನು ತಿದ್ದುಪಡಿಗೊಳಿಸಿ ಜಾರಿಗೊಳಿಸಲಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್​ ಆರೋಪಿಸಿದ ಬೆನ್ನಲ್ಲೇ ಕೃಷಿ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.  

ಶುಕ್ರವಾರ ನಾಗ್ಪುರದ ಸಮಾರಂಭವೊಂದರಲ್ಲಿ ಮಾತನಾಡಿದ್ದ ಕೃಷಿ ಸಚಿವ ತೋಮರ್​, ನಾವು ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಿದೆವು. ಆದರೆ ಕೆಲವರಿಗೆ ಇದು ಇಷ್ಟವಾಗಲಿಲ್ಲ. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ಜಾರಿಗೆ ಬಂದ ಅತಿದೊಡ್ಡ ಸುಧಾರಣಾ ಯೋಜನೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಿಲ್ಲ. ಹಾಗಂತ ನಮ್ಮ ಸರ್ಕಾರ ನಿರಾಶವಾಗುವುದಿಲ್ಲ. ನಾವು ಈಗ ನಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ. ಆದರೆ ನಾವು ಮತ್ತೆ ಈ ವಿಚಾರದಲ್ಲಿ ಮುಂದಡಿ ಇಡುತ್ತೇವೆ. ಯಾಕೆಂದರೆ ರೈತರು ಈ ದೇಶದ ಬೆನ್ನೆಲುಬು. ಆ ಬೆನ್ನೆಲುಬನ್ನು ಸದೃಢಗೊಳಿಸಿದರೆ, ಇಡೀ ದೇಶ ಗಟ್ಟಿಯಾಗುತ್ತದೆ ಎಂದಿದ್ದರು.

ನರೇಂದ್ರ ತೋಮರ್ ಈ ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್​ ನಾಯಕರಾದ ರಾಹುಲ್​ ಗಾಂಧಿ,  ರಣದೀಪ್​ ಸುರ್ಜೇವಾಲಾ ಪ್ರತಿಕ್ರಿಯೆ ನೀಡಿದ್ದರು. ತೋಮರ್​ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರು ಕ್ಷಮೆ ಕೇಳಿ, ಈ ಕಾಯ್ದೆಗಳನ್ನು ವಾಪಸ್​ ಪಡೆದಿದ್ದಾರೆ. ಆದರೆ ಮತ್ತೆ ಮುಂದುವರಿಯುತ್ತೇವೆ ಎಂದು ಹೇಳುವ ಮೂಲಕ ಕೃಷಿ ಸಚಿವ ನರೇಂದ್ರ ತೋಮರ್​ ಪ್ರಧಾನಿ ಮೋದಿಯವರು ಕೇಳಿದ್ದ ಕ್ಷಮೆಗೆ ಅವಮಾನ ಮಾಡಿದ್ದಾರೆ. ಮತ್ತೊಮ್ಮೆ ಈ ಕೃಷಿ ವಿರೋಧಿ ಕ್ರಮಗಳನ್ನು ಕೈಗೊಂಡರೆ, ಮತ್ತೆ ಅನ್ನದಾತರು ಸತ್ಯಾಗ್ರಹ ಶುರು ಮಾಡುತ್ತಾರೆ ಎಂದಿದ್ದರು. ಹಾಗೇ, ಸುರ್ಜೇವಾಲಾ ಪ್ರತಿಕ್ರಿಯೆ ನೀಡಿ, ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತರಲು ಕೇಂದ್ರ ಸರ್ಕಾರ ಏನೋ ಪಿತೂರಿ ನಡೆಸುತ್ತಿದೆ ಎಂಬುದನ್ನು ತೋಮರ್​ ಹೇಳಿಕೆ ಸ್ಪಷ್ಟವಾಗಿ ತೋರಿಸುತ್ತದೆ.  ಕೇಂದ್ರ ಸರ್ಕಾರಕ್ಕೆ ಬಂಡವಾಳಶಾಹಿಗಳು ಒತ್ತಡ ಹೇರುತ್ತಿದ್ದಾರೆ. ಖಂಡಿತವಾಗಿಯೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ, ಹೊಸ ರೂಪದಲ್ಲಿ ಕೃಷಿ ಕಾಯ್ದೆಗಳನ್ನು ಕೇಂದ್ರ ಜಾರಿಗೊಳಿಸುತ್ತದೆ ಎಂದಿದ್ದರು. ಇದೆಲ್ಲದರ ಮಧ್ಯೆ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮ್ಯಾನ್ಮಾರ್‌ನ ಕಯಾಹ್​​ನಲ್ಲಿ 30ಕ್ಕೂ ಹೆಚ್ಚು ಜನರಿಗೆ ಗುಂಡಿಕ್ಕಿ ಮೃತದೇಹ ಸುಟ್ಟುಹಾಕಿದ ಸ್ಥಿತಿಯಲ್ಲಿ ಪತ್ತೆ; ಹತ್ಯೆಯಲ್ಲಿ ಮಿಲಿಟರಿ ಕೈವಾಡ?

Follow us on

Related Stories

Most Read Stories

Click on your DTH Provider to Add TV9 Kannada