ದೆಹಲಿ: ನಮ್ಮ ದೇಶದಲ್ಲಿ ಚಕಿತ ಮತ್ತು ಪವಾಡಗಳಿಗೇನು ಕಮ್ಮಿಯಿಲ್ಲ. ಇದೀಗ, ಚಿಕಿತ್ಸೆಗೆಂದು ದಾಖಲಾದ ರೋಗಿಯೊಬ್ಬನ ಯಕೃತ್ತದಲ್ಲಿ ಬರೋಬ್ಬರಿ 20 ಸೆಂಟಿಮೀಟರ್ ಉದ್ದದ ಚಾಕು ಪತ್ತೆಯಾದಿಗೆ. ಅಂದ ಹಾಗೆ ಈ ಸ್ವಾರಸ್ಯಕರ ಸಂಗತಿ ರಾಜಧಾನಿ ದೆಹಲಿಯ ಪ್ರತಿಷ್ಠಿತ AIIMS ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಎರಡು ತಿಂಗಳ ಹಿಂದೆಯೇ ಚಾಕು ನುಂಗಿದ್ದ!
ಕಳೆದ ಎರಡು ತಿಂಗಳ ಹಿಂದೆ ಈ ಚಾಕುವನ್ನು ನುಂಗಿದ್ದ ಈ 28 ವರ್ಷದ ಭೂಪ ಹಾಗೇ ಆರಾಮಾಗಿ ಜೀವನ ಸಾಗಿಸುತ್ತಿದ್ದನಂತೆ. ಆದರೆ, ಇತ್ತೀಚೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈತನ ಕುಟುಂಬದವರು ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು X-ray ನಡೆಸಿದೆ ವೇಳೆ ಈತನ ಯಕೃತ್ತದಲ್ಲಿ ಚಾಕು ಇರೋದು ಗೊತ್ತಾಗಿದೆ.
ಆದರೆ, ಕೂಡಲೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರಿಗೆ ಸಾಕಷ್ಟು ಸವಾಲುಗಳು ಎದುರಾದವು. ಚಾಕು ಯಕೃತ್ತದಲ್ಲಿದ್ದ ಪ್ರಮುಖ ರಕ್ತನಾಳದ ಬಳಿ ಸಿಲುಕಿಕೊಂಡಿದೆ. ಆಪರೇಷನ್ ವೇಳೆ ಸ್ವಲ್ಪ ಯಾಮಾರಿದ್ರು ರೋಗಿಯ ಪ್ರಾಣಕ್ಕೆ ಕುತ್ತು. ಹಾಗಾಗಿ, ಆಸ್ಪತ್ರೆಯ ಶಸ್ತ್ರವೈದ್ಯರಾದ ಡಾ. NR ದಾಸ್ ರೋಗಿಯ ದೇಹವನ್ನ ಶಸ್ತ್ರಚಿಕಿತ್ಸೆಗೆ ಸಧೃಡಪಡಿಸಲು ಪೂರಕ ಔಷಧಿ ನೀಡಲು ಮುಂದಾದರು.
ಬಳಿಕ ರೋಗಿಗೆ ಧೈರ್ಯತುಂಬಿದ ಡಾ. ದಾಸ್ರ ತಂಡ ನಂತರ ಆತನ ಯಕೃತ್ತದಲ್ಲಿ ಸೇರಿಕೊಂಡಿದ್ದ ಕೀವು ಹೊರತೆಗೆದರು. ಇದೆಲ್ಲಾ ಆದ ಬಳಿಕ ಸತತ ಮೂರು ಗಂಟೆಗಳ ಅತ್ಯಂತ ಸೂಕ್ಷ್ಮವಾಗಿ ಶಸ್ತ್ರಚಿಕಿತ್ಸೆ ನಡೆಸಿ ಚಾಕುವನ್ನ ಯಶಸ್ವಿಯಾಗಿ ಹೊರತೆಗೆದರು.
ಚಾಕು ನುಂಗಿದ ಮಹಾಶಯನ ಆರೋಗ್ಯಸ್ಥಿತಿ ಸ್ಥಿರವಾಗಿದ್ದು ಚೇತರಿಕೆ ಕಾಣುತ್ತಿದ್ದಾನೆ. ಅಂದ ಹಾಗೆ, ಈ ಭೂಪ ಚಾಕು ಯಾಕೆ ನುಂಗಿದ ಅನ್ನೋ ಪ್ರಶ್ನೆ ಕಾಡುತ್ತಿರಬೇಕಲ್ವ? ಇದಕ್ಕೆ ಉತ್ತರ ಚಾಕು ನುಂಗಿದವನು ಮಾದಕ ವ್ಯಸನಿಯಂತೆ. ಒಮ್ಮೆ ಸೇವಿಸಲು ಗಾಂಜಾ ಸಿಗದೆ ಬೇಸರದಲ್ಲಿ ಕಣ್ಣಿಗೆ ಬಿದ್ದ ಚಾಕು ನುಂಗಿಬಿಟ್ಟನಂತೆ!
Published On - 3:35 pm, Tue, 28 July 20