7 ವರ್ಷದ ಮಗಳೆದುರೇ ರಕ್ತ ಬರುವಂತೆ ಪ್ರಯಾಣಿಕನ ಮೇಲೆ ಏರ್ ಇಂಡಿಯಾ ಪೈಲಟ್ ಹಲ್ಲೆ

ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಪೈಲಟ್ ಕ್ಯಾಪ್ಟನ್ ವೀರೇಂದ್ರ ಪ್ರಯಾಣಿಕ ಅಂಕಿತ್ ದಿವಾನ್ ಮೇಲೆ ಹಲ್ಲೆ ನಡೆಸಿದ್ದಾರೆ. 7 ವರ್ಷದ ಮಗಳೆದುರೇ ನಡೆದ ಈ ಘಟನೆಯಲ್ಲಿ ಪ್ರಯಾಣಿಕನಿಗೆ ರಕ್ತಸ್ರಾವವಾಗಿದೆ. ಸಿಬ್ಬಂದಿ ಮಾರ್ಗ ಬಳಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ವೀಡಿಯೊಗಳು ವೈರಲ್ ಆದ ನಂತರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್ ಅನ್ನು ಅಮಾನತುಗೊಳಿಸಿದೆ. ಕುಟುಂಬಕ್ಕೆ ಆಘಾತವಾಗಿದೆ.

7 ವರ್ಷದ ಮಗಳೆದುರೇ ರಕ್ತ ಬರುವಂತೆ ಪ್ರಯಾಣಿಕನ ಮೇಲೆ ಏರ್ ಇಂಡಿಯಾ ಪೈಲಟ್ ಹಲ್ಲೆ
ಪ್ರಯಾಣಿಕನ ಮೇಲೆ ಪೈಲಟ್ ಹಲ್ಲೆ

Updated on: Dec 20, 2025 | 1:16 PM

ನವದೆಹಲಿ, ಡಿಸೆಂಬರ್ 20: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಏರ್ ಇಂಡಿಯಾ ಪೈಲಟ್(Pilot) ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪೈಲಟ್ ಕ್ಯಾಪ್ಟನ್ ವೀರೇಂದ್ರ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಲ್ಲದೆ, ದೈಹಿಕವಾಗಿ ಹಲ್ಲೆ ನಡೆಸಿದ್ದರಿಂದ ರಕ್ತಸ್ರಾವವಾಗಿದೆ ಎಂದು ಅಂಕಿತ್ ದಿವಾನ್ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳು ಮತ್ತು ಫೋಟೋಗಳು ಕಾಣಿಸಿಕೊಂಡ ನಂತರ ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆಯು ತನ್ನ ಇಡೀ ರಜೆಯನ್ನು ಹಾಳುಮಾಡಿದೆ ಮತ್ತು ತನ್ನ ಕುಟುಂಬ, ವಿಶೇಷವಾಗಿ ತನ್ನ 7 ವರ್ಷದ ಮಗಳು ಇನ್ನೂ ಆಘಾತದಲ್ಲಿದ್ದಾರೆ ಎಂದು ಅಂಕಿತ್ ಹೇಳಿದ್ದಾರೆ. ಘಟನೆಯ ನಂತರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಷಾದ ವ್ಯಕ್ತಪಡಿಸಿ ಹೇಳಿಕೆ ನೀಡಿ, ಆರೋಪಿ ಪೈಲಟ್‌ನನ್ನು ತಕ್ಷಣವೇ ಕರ್ತವ್ಯದಿಂದ ತೆಗೆದುಹಾಕಿದೆ.

ನಮ್ಮೊಂದಿಗೆ 4 ತಿಂಗಳ ಮಗು ಇದ್ದ ಸಿಬ್ಬಂದಿ ಬಳಸುವ ಭದ್ರತಾ ತಪಾಸಣಾ ಮಾರ್ಗಕ್ಕೆ ಪ್ರವೇಶಿಸಲು ಕೇಳಿದ್ದೆವು. ಆಗ ನಾವು ಆ ಮಾರ್ಗದಲ್ಲಿ ಹೋಗುವ ವೇಳೆ ಕ್ಯಾಪ್ಟನ್ ವೀರೇಂದ್ರ ಕೋಪಗೊಂಡು, ನೀವು ಅನಕ್ಷರಸ್ಥರೇ ಈ ಮಾರ್ಗ ಸಿಬ್ಬಂದಿಗೆ ಮಾತ್ರ ಎಂದು ಹೇಳುವ ಫಲಕವನ್ನು ನೀವು ಓದಿಲ್ಲವೇ ಎಂದು ಕೇಳಿದ್ದರು, ನಂತರ ಮಾತಿನ ಚಕಮಕಿ ನಡೆಯಿತು ಎಂದು ಪ್ರಯಾಣಿಕ ಬರೆದಿದ್ದಾರೆ. ಆಗ ನನ್ನ 7 ವರ್ಷದ ಮಗಳ ಮುಂದೆಯೇ ನನಗೆ ರಕ್ತ ಬರುವ ಹಾಗೆ ಅವರು ಹಲ್ಲೆ ನಡೆಸಿದ್ದಾರೆ.ಪೈಲಟ್ ಶರ್ಟ್ ಮೇಲಿನ ರಕ್ತ ನನ್ನದೇ ಆಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ