ಮಮತಾ ಬ್ಯಾನರ್ಜಿ ಸರ್ಕಾರ ನುಸುಳುಕೋರರನ್ನು ರಕ್ಷಿಸಲು ಎಸ್‌ಐಆರ್ ಅನ್ನು ವಿರೋಧಿಸುತ್ತಿದೆ; ಪ್ರಧಾನಿ ಮೋದಿ ಆರೋಪ
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ನೀಡುವಂತೆ ಅವರು ಬಂಗಾಳದ ಜನರಿಗೆ ಮನವಿ ಮಾಡಿದ್ದಾರೆ. ದಟ್ಟವಾದ ಮಂಜಿನಿಂದಾಗಿ ತಾಹೆರ್‌ಪುರ ರ‍್ಯಾಲಿಯ ಸ್ಥಳವನ್ನು ತಲುಪಲು ವಿಫಲವಾದ ಕಾರಣದಿಂದಾಗಿ ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ವರ್ಚುವಲ್ ಆಗಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಇಂದು ಮಧ್ಯಾಹ್ನ ಅವರು ರ‍್ಯಾಲಿಯ ಸ್ಥಳಕ್ಕೆ ತಲುಪಬೇಕಿತ್ತು. ಆದರೆ ಕೆಟ್ಟ ಹವಾಮಾನದಿಂದಾಗಿ ಅವರ ಹೆಲಿಕಾಪ್ಟರ್ ತಾಹೆರ್‌ಪುರ ಹೆಲಿಪ್ಯಾಡ್ ಮೇಲೆ ಸ್ವಲ್ಪ ಹೊತ್ತು ಹಾರಾಡುತ್ತಾ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು.

ಕೊಲ್ಕತ್ತಾ, ಡಿಸೆಂಬರ್ 20: ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಡಳಿತವು ನುಸುಳುಕೋರರನ್ನು ರಕ್ಷಿಸಲು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅನ್ನು ವಿರೋಧಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನಾಡಿಯಾ ಜಿಲ್ಲೆಯ ತಾಹೆರ್‌ಪುರದಲ್ಲಿ ದೂರವಾಣಿ ಮೂಲಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ನುಸುಳುಕೋರರು ಬಂಗಾಳದಲ್ಲಿ ಟಿಎಂಸಿಯ ಬೆಂಬಲವನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಟಿಎಂಸಿಯ ‘ಮಹಾ ಜಂಗಲ್ ರಾಜ್’ ಅನ್ನು ಕೊನೆಗೊಳಿಸಲಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಬಂಗಾಳದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಓಲೈಕೆಯ ರಾಜಕೀಯ ಆಳ್ವಿಕೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಟಿಎಂಸಿ ಬಿಜೆಪಿಯನ್ನು ವಿರೋಧಿಸಬಹುದು. ಆದರೆ ಬಿಹಾರದ ಚುನಾವಣಾ ಫಲಿತಾಂಶಗಳು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಾಗಿಲು ತೆರೆದಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾದಲ್ಲಿ ಮೆಸ್ಸಿ ಕಾರ್ಯಕ್ರಮದಲ್ಲಿ ನಡೆದ ಗಲಭೆಗೆ ಬಂಗಾಳದ ಕ್ರೀಡಾ ಸಚಿವ ರಾಜೀನಾಮೆ
“ಬಿಹಾರವು ಬಂಗಾಳದಲ್ಲಿ ಬಿಜೆಪಿಯ ಗೆಲುವಿಗೆ ದಾರಿ ಮಾಡಿಕೊಟ್ಟಿದೆ. ಬಿಹಾರದ ಜಂಗಲ್ ರಾಜ್ ಅನ್ನು ತೊಡೆದುಹಾಕಲಾಯಿತು. ಈಗ ನಾವು ಪಶ್ಚಿಮ ಬಂಗಾಳದಲ್ಲಿ ‘ಮಹಾ ಜಂಗಲ್ ರಾಜ್’ ಅನ್ನು ತೊಡೆದುಹಾಕಬೇಕಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೆಟ್ಟ ಹವಾಮಾನದಿಂದಾಗಿ ನಾಡಿಯಾವನ್ನು ತಲುಪಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ಬಿಜೆಪಿ ಯಾವುದೇ ಬೆಲೆ ತೆತ್ತಾದರೂ ಪಶ್ಚಿಮ ಬಂಗಾಳದ ಅಭಿವೃದ್ಧಿಯನ್ನು ಮಾಡುತ್ತದೆ ಎಂದು ಹೇಳಿದರು. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಜನರಿಗೆ ಮನವಿ ಮಾಡಿದ ಅವರು ಬಂಗಾಳಕ್ಕೆ ಅದರಲ್ಲೂ ವಿಶೇಷವಾಗಿ ಹಿಂದುಳಿದಿರುವ ಪ್ರದೇಶಗಳಿಗೆ ಸಂಪರ್ಕವನ್ನು ಒದಗಿಸಲು ಬಿಜೆಪಿ ಬಯಸುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಣಘಾಟ್‌ನಲ್ಲಿ ಪ್ರಧಾನಿ ಮೋದಿ ಬಹು ಅಭಿವೃದ್ಧಿ ಕಾರ್ಯಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಸುಮಾರು 3,200 ಕೋಟಿ ರೂ. ಮೌಲ್ಯದ ಎರಡು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಕೂಡ ಸೇರಿವೆ. ಇದರಲ್ಲಿ NH-34 ರ 66.7 ಕಿಮೀ ಉದ್ದದ ಬಾರಾಜಗುಲಿ-ಕೃಷ್ಣನಗರ ವಿಭಾಗದ 4 ಪಥ ನಿರ್ಮಾಣ ಯೋಜನೆಯೂ ಒಂದು. NH-34 ರ 17.6 ಕಿಮೀ ಉದ್ದದ ಬಾರಾಜಸತ್-ಬಾರಾಜಗುಲಿ ವಿಭಾಗದ 4 ಪಥ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದ ಎಸ್‌ಐಆರ್ ಕರಡಿನಲ್ಲಿ 58 ಲಕ್ಷ ಹೆಸರುಗಳು ಡಿಲೀಟ್
ಈ ಯೋಜನೆಗಳು ಕೋಲ್ಕತ್ತಾವನ್ನು ಸಿಲಿಗುರಿಯೊಂದಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ ಮತ್ತು ಜನರ ಪ್ರಯಾಣದ ಸಮಯವನ್ನು ಸುಮಾರು 2 ಗಂಟೆಗಳ ಕಾಲ ಕಡಿಮೆ ಮಾಡುತ್ತದೆ. ಈ ಯೋಜನೆಗಳು ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸುಧಾರಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




