ಅಜಿತ್ ದೋವಲ್ ನಿವಾಸದ ಭದ್ರತೆ ಕರ್ತವ್ಯದಲ್ಲಿ ವೈಫಲ್ಯ; ಮೂವರು ಕಮಾಂಡೋಗಳನ್ನು ವಜಾ ಮಾಡಿದ ಕೇಂದ್ರ

| Updated By: ರಶ್ಮಿ ಕಲ್ಲಕಟ್ಟ

Updated on: Aug 17, 2022 | 8:28 PM

Ajit Doval ಫೆಬ್ರವರಿ 2022 ರಲ್ಲಿ ಅಜಿತ್ ದೋವಲ್ ಅವರ ನಿವಾಸದ ಆವರಣದೊಳಗೆ ವ್ಯಕ್ತಿಯೊಬ್ಬರು ಪ್ರವೇಶಿಸಲು ಪ್ರಯತ್ನಿಸಿದ್ದು ಭದ್ರತಾ ಉಲ್ಲಂಘನೆ ವರದಿಯಾಗಿತ್ತು.

ಅಜಿತ್ ದೋವಲ್ ನಿವಾಸದ ಭದ್ರತೆ ಕರ್ತವ್ಯದಲ್ಲಿ ವೈಫಲ್ಯ; ಮೂವರು ಕಮಾಂಡೋಗಳನ್ನು ವಜಾ ಮಾಡಿದ ಕೇಂದ್ರ
ಅಜಿತ್ ದೋವಲ್
Follow us on

ಈ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ (Ajit Doval) ಅವರ ಭದ್ರತೆಯಲ್ಲಿ ನಿಯೋಜಿತರಾಗಿರುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಮೂವರು ಕಮಾಂಡೋಗಳನ್ನು ಕೇಂದ್ರ ಸರ್ಕಾರ ವಜಾಗೊಳಿಸಿದೆ. ಮೂಲಗಳ ಪ್ರಕಾರ, ಎನ್‌ಎಸ್‌ಎ ದೋವಲ್‌ ಅವರ ವಿಐಪಿ ಭದ್ರತೆಗೆ ಸಂಬಂಧಿಸಿದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಮತ್ತು ಕಮಾಂಡೆಂಟ್ ಶ್ರೇಣಿಯ ಅಧಿಕಾರಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಫೆಬ್ರವರಿ 2022 ರಲ್ಲಿ ಅಜಿತ್ ದೋವಲ್ ಅವರ ನಿವಾಸದ ಆವರಣದೊಳಗೆ ವ್ಯಕ್ತಿಯೊಬ್ಬರು ಪ್ರವೇಶಿಸಲು ಪ್ರಯತ್ನಿಸಿದ್ದು ಭದ್ರತಾ ಉಲ್ಲಂಘನೆ ವರದಿಯಾಗಿತ್ತು. ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದು ನಂತರ ದೆಹಲಿ ಪೊಲೀಸರು ಬಂಧಿಸಿದ್ದರು. ವ್ಯಕ್ತಿಯೊಬ್ಬರು ಕೆಂಪು ಬಣ್ಣದ ಎಸ್‌ಯುವಿ ಚಲಾಯಿಸಿ ಬಂದಿದ್ದು ದೋವಲ್‌ರ ಹೈ-ಸೆಕ್ಯುರಿಟಿ ಸೆಂಟ್ರಲ್ ದೆಹಲಿ ನಿವಾಸದ ಗೇಟ್ ಮೂಲಕ ಪ್ರವೇಶಿಸಲು ಪ್ರಯತ್ನಿಸಿದೆ ಎಂದು ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.

ಎನ್‌ಎಸ್‌ಎ ದೋವಲ್ ಅವರ ಮನೆಯನ್ನು ಕಾವಲು ಕಾಯುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಕಾರನ್ನು ತಡೆದು ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಶಂತನು ರೆಡ್ಡಿ ಎಂದು ಗುರುತಿಸಲಾದ ವ್ಯಕ್ತಿ ತನ್ನ ದೇಹದಲ್ಲಿ ಚಿಪ್ ಇದೆ. ಇದನ್ನು ಹೊರಗಿನಿಂದ ನಿಯಂತ್ರಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಆದರೆ, ಎಂಆರ್‌ಐ ಸ್ಕ್ಯಾನ್‌ನಲ್ಲಿ ಯಾವುದೇ ಚಿಪ್ ಪತ್ತೆಯಾಗಿಲ್ಲ.

ಈ ವ್ಯಕ್ತಿ ಬೆಂಗಳೂರಿನವನಾಗಿದ್ದು ಮಾನಸಿಕ ಅಸ್ವಸ್ಥನಾಗಿದ್ದ. ಕಾರನ್ನು ನೋಯ್ಡಾದಿಂದ ಬಾಡಿಗೆಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಐಎಸ್ಎಫ್ ಕಮಾಂಡೋಗಳ ಉನ್ನತ ಝೆಡ್ ಪ್ಲಸ್ ಕೆಟಗರಿ ಭದ್ರತೆ ದೋವಲ್ ಅವರಿಗಿದ್ದು ಘಟನೆ ನಡೆದಾಗ ಅವರು ಮನೆಯಲ್ಲೇ ಇದ್ದರು.