ಅಖಿಲೇಶ್ ಯಾದವ್ ರ‍್ಯಾಲಿಯಲ್ಲಿ ದುರಂತ, ಬುಲ್ಡೋಜರ್ ಡಿಕ್ಕಿ ಹೊಡೆದು ಬಿಜೆಪಿ ನಾಯಕನ ಪುತ್ರ ಸಾವು
ಗೋರಖ್‌ಪುರದಲ್ಲಿ ನಡೆದ ಅಖಿಲೇಶ್ ಯಾದವ್ ರ‍್ಯಾಲಿ ವೇಳೆ ಭೀಕರ ಅಪಘಾತ ಸಂಭವಿಸಿದೆ. ಹೂವಿನ ಸುರಿಮಳೆಗೈಯುತ್ತಿದ್ದ ಬುಲ್ಡೋಜರ್ ಡಿಕ್ಕಿ ಹೊಡೆದು ಬಿಜೆಪಿ ನಾಯಕನ ಅಪ್ರಾಪ್ತ ಪುತ್ರ ಮೃತಪಟ್ಟಿದ್ದಾನೆ. ಈ ಘಟನೆ ರಾಜಕೀಯ ರ‍್ಯಾಲಿಗಳ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಗೋರಖ್‌ಪುರ, ನವೆಂಬರ್ 19: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರ‍್ಯಾಲಿ ವೇಳೆ ಅಪಘಾತವೊಂದು ಸಂಭವಿಸಿದೆ. ರ‍್ಯಾಲಿಯಲ್ಲಿ ಹೂಮಳೆ ಸುರಿಮಳೆಗೈಯುತ್ತಿದ್ದ ಬುಲ್ಡೋಜರ್ ಡಿಕ್ಕಿ ಹೊಡೆದ ಪರಿಣಾಮ ಬಿಜೆಪಿ ನಾಯಕನ ಅಪ್ರಾಪ್ತ ಪುತ್ರ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸಂಭವಿಸಿದೆ. ರಾಜಕೀಯ ಕಾರ್ಯಕ್ರಮದಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಮೃತ ಬಾಲಕನನ್ನು ಆರ್ಯವರ್ಧನ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಬಿಜೆಪಿ ನಾಯಕ ಓಂಕಾರ್ ಸಿಂಗ್ ಅವರ ಪುತ್ರ. ಬುಧವಾರ ಅಖಿಲೇಶ್ ಯಾದವ್ ನೇತೃತ್ವದಲ್ಲಿ ನಡೆದ ಸಮಾಜವಾದಿ ಪಕ್ಷದ ‘ಪಿಡಿಎ ರಥಯಾತ್ರೆ’ ವೇಳೆ ಕೂಡಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
ರ‍್ಯಾಲಿಯಲ್ಲಿ ಹೂವಿನ ಸುರಿಮಳೆಗೈಯುತ್ತಿದ್ದ ಬುಲ್ಡೋಜರ್
ಬಿಜೆಪಿ ನಾಯಕ ಓಂಕಾರ್ ಸಿಂಗ್ ಅವರ ಪ್ರಕಾರ, ಅವರು ತಮ್ಮ ಮಗನೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಬುಲ್ಡೋಜರ್ ಹೂವಿನ ದಳಗಳನ್ನು ಸುರಿಸುತ್ತಾ ಮುಂದೆ ಸಾಗುತ್ತಿತ್ತು. ವೇಗವಾಗಿ ಬಂದ ಬುಲ್ಡೋಜರ್ ಹಿಂದಿನಿಂದ ತಮ್ಮ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಬಾಲಕ ರಸ್ತೆ ವಿಭಜಕಕ್ಕೆ ಬಿದ್ದಿದ್ದು, ತಲೆಯ ಹಿಂಭಾಗಕ್ಕೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಯೋಧ್ಯೆಗೆ ಅಖಿಲೇಶ್ ಯಾದವ್ ಭೇಟಿ: ರಾಮಭಕ್ತರಲ್ಲಿ ಮೊದಲು ಕ್ಷಮೆ ಕೇಳಿ ಎಂದ ಯೋಗಿ ಆದಿತ್ಯನಾಥ್
ಕುಟುಂಬಸ್ಥರು, ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯನ್ನು ಖಂಡಿಸಿ ಗೋರಖ್‌ಪುರ-ದೇವರಿಯಾ ರಸ್ತೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.
ಸ್ಥಳೀಯ ಶಾಸಕ ಎಂಜಿನಿಯರ್ ಸರ್ವಣ್ ನಿಶಾದ್ ಮೃತ ಬಾಲಕನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಸಚಿವ ಡಾ. ಸಂಜಯ್ ನಿಶಾದ್ ಕೂಡ ಕುಟುಂಬಕ್ಕೆ ಅಗತ್ಯ ನೆರವು ಒದಗಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಬುಲ್ಡೋಜರ್ ವಶಕ್ಕೆ ಪಡೆದ ಪೊಲೀಸರು
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬುಲ್ಡೋಜರ್ ಅನ್ನು ವಶಕ್ಕೆ ಪಡೆದಿದ್ದಾರೆ. ಅದರ ಚಾಲಕ ಮತ್ತು ಮಾಲೀಕರನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಅಪಘಾತಕ್ಕೆ ಕಾರಣವೇನು, ರ‍್ಯಾಲಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿತ್ತೇ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಮಾಡಲಾಗಿತ್ತೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
गोरखपुर में अखिलेश यादव के स्वागत के उन्माद में सपाइयों ने एक 12 वर्षीय मासूम की जिंदगी छीन ली! PDA रथ यात्रा के दौरान JCB की चपेट में आकर बच्चे की दर्दनाक मौत, सपाइयों के हुड़दंग और गैर-जिम्मेदाराना रवैये का नतीजा है।
अभी सत्ता से बाहर रहकर ये हाल है, तो सोचिए सत्ता में आ गए तो क्या कहर बरपाएंगे! इन्हें सपाई कहें या बलवाई? इनके लिए सत्ता का प्रदर्शन, एक मासूम की जिंदगी से भी ज्यादा कीमती है?
— BJP Uttar Pradesh (@BJP4UP) November 18, 2026
ಅಖಿಲೇಶ್ ಯಾದವ್ ಹೇಳಿದ್ದೇನು?
ಬಾಲಕನ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಘಟನೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ರ‍್ಯಾಲಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಘಟನೆಯನ್ನು ಖಂಡಿಸಿದ್ದು, ರ‍್ಯಾಲಿಯ ವೇಳೆ ನಡೆದ ಅವಘಡಕ್ಕೆ ಸಮಾಜವಾದಿ ಪಕ್ಷದ ಕಾರ್ಯಕ್ರಮದ ವ್ಯವಸ್ಥೆಗಳೇ ಕಾರಣ ಎಂದು ಟೀಕಿಸಿದ್ದಾರೆ.
ರಾಜಕೀಯ ರ‍್ಯಾಲಿಗಳಲ್ಲಿ ಸುರಕ್ಷತೆ ಬಗ್ಗೆ ಪ್ರಶ್ನೆ
ಅಖಿಲೇಶ್ ಯಾದವ್ ಅವರ ಪಿಡಿಎ ರಥಯಾತ್ರೆ ಗೋರಖ್‌ಪುರ ವಿಮಾನ ನಿಲ್ದಾಣದಿಂದ ಆರಂಭವಾಗಿ ಚೌರಿ ಚೌರಾದ ದಿಯೋಕಾಹಿ ಗ್ರಾಮದಲ್ಲಿ ಮುಕ್ತಾಯಗೊಂಡಿತ್ತು. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ರಾಜಕೀಯ ರ‍್ಯಾಲಿಗಳಲ್ಲಿ ಜನಸಂದಣಿಯ ನಡುವೆ ಬುಲ್ಡೋಜರ್‌ನಂತಹ ಭಾರೀ ವಾಹನಗಳನ್ನು ಬಳಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಎಷ್ಟು ಮುಖ್ಯ ಎಂಬ ಚರ್ಚೆ ಈ ಘಟನೆಯ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




