ಚೆನ್ನೈ ಮೊಸಳೆ ಪಾರ್ಕ್​ನಲ್ಲಿದ್ದ 15 ಲಕ್ಷ ರೂ.ಮೌಲ್ಯದ, ದೊಡ್ಡ ಗಾತ್ರದ ಆಮೆ ಕಳವು; ಆಡಳಿತ ಸಿಬ್ಬಂದಿಯ ಮೇಲೆ ಪೊಲೀಸರ ಡೌಟ್​

| Updated By: ರಾಜೇಶ್ ದುಗ್ಗುಮನೆ

Updated on: Dec 26, 2020 | 3:28 PM

ಪಾರ್ಕ್​ ನಿರ್ದೇಶಕರು ಇನ್ನೂ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದುವರೆಗೂ ಇಂಥ ಪ್ರಕರಣಗಳು ಇಲ್ಲಿ ನಡೆದೂ ಇರಲಿಲ್ಲ. ಇನ್ನೊಂದು ವಿಚಿತ್ರವೆಂದರೆ, ಅಲ್ಡಾಬ್ರಾದ ಒಂದು ಆಮೆ ಕಳವಾಗಿದ್ದರೂ, ಪಾರ್ಕ್​ನ ಫೇಸ್​ಬುಕ್​ ಪೇಜ್​ನಲ್ಲಿ ಕ್ರಿಸ್ಮಸ್​ ಶುಭಾಶಯ ಕೋರಲು ಇದೇ ಪ್ರಭೇದದ ಆಮೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.

ಚೆನ್ನೈ ಮೊಸಳೆ ಪಾರ್ಕ್​ನಲ್ಲಿದ್ದ 15 ಲಕ್ಷ ರೂ.ಮೌಲ್ಯದ, ದೊಡ್ಡ ಗಾತ್ರದ ಆಮೆ ಕಳವು; ಆಡಳಿತ ಸಿಬ್ಬಂದಿಯ ಮೇಲೆ ಪೊಲೀಸರ ಡೌಟ್​
ಅಲ್ಡಾಬ್ರಾ ಆಮೆಯ ಪ್ರಾತಿನಿಧಿಕ ಚಿತ್ರ
Follow us on

ಚೆನ್ನೈ: ದಕ್ಷಿಣ ಚೆನ್ನೈನ ಮಹಾಬಲಿಪುರಂನಲ್ಲಿರುವ ಮದ್ರಾಸ್​ ಕ್ರೊಕೊಡೈಲ್ ಬ್ಯಾಂಕ್​ ಟ್ರಸ್ಟ್​ ​(ಮೊಸಳೆ ಪಾರ್ಕ್) ಪಾರ್ಕ್​​​ನಲ್ಲಿದ್ದ ಅಂದಾಜು 80-100 ಕೆಜಿ ತೂಕದ, ಜಗತ್ತಿನ ದೊಡ್ಡ ಗಾತ್ರದ ಆಮೆಗಳಲ್ಲಿ ಒಂದಾದ ಅಲ್ಡಾಬ್ರಾ ಆಮೆ ಕಾಣೆಯಾಗಿದೆ. ಈ ಆಮೆಗೆ ಮಾರುಕಟ್ಟೆಯಲ್ಲಿ ಏನಿಲ್ಲವೆಂದರೂ 15 ಲಕ್ಷ ರೂ.ಮೌಲ್ಯವಿದೆ.

ಅಲ್ಡಾಬ್ರಾ ಪ್ರಭೇದದ ಆಮೆಗಳು ದೀರ್ಘಾಯುಷ್ಯ ಹೊಂದಿರುತ್ತವೆ. ಈ ಉದ್ಯಾನದಲ್ಲಿದ್ದ ಆಮೆ ಕಾಣೆಯಾಗಿ ಆರುವಾರಗಳೇ ಕಳೆದಿದ್ದರೂ ಈಗಷ್ಟೇ ಬೆಳಕಿಗೆ ಬಂದಿದೆ. ಆಮೆಯನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೊಸಳೆ ಪಾರ್ಕ್​ ಆಡಳಿತ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಶುರು ಮಾಡಿರುವ ಪೊಲೀಸರು, ಇದು ಯಾರೋ ಉದ್ಯಾನದ ಸಿಬ್ಬಂದಿಯದೇ ಕೆಲಸ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೇ ಎಲ್ಲಾ ಆಡಳಿತ ಸಿಬ್ಬಂದಿಯನ್ನೂ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.

ಬೃಹತ್ ಆಮೆ ಇದ್ದ ಸುತ್ತಮುತ್ತಲೂ ಸಿಸಿಟಿವಿ ಕ್ಯಾಮರಾ ಇಲ್ಲ. ಸರಿಯಾಗಿ ಯೋಜನೆ ರೂಪಿಸಿ ಆಮೆಯನ್ನು ಕಳವು ಮಾಡಲಾಗಿದೆ. ಅಷ್ಟಾದರೂ ಕೆಲವು ಮಹತ್ವದ ಸುಳಿವು ಸಿಕ್ಕಿದ್ದು, ಅದರ ಆಧಾರ ಮೇಲೆ ತನಿಖೆ ನಡೆಸುತ್ತಿದ್ದೇವೆ. ಕಳ್ಳರು ಆಮೆಯನ್ನು ಹೊತ್ತು ಪೂರ್ವ ಕರಾವಳಿ ರಸ್ತೆ ಮೂಲಕ ಪರಾರಿಯಾಗಿದ್ದಾರೆ. ಪಾರ್ಕ್​ನ ಆಡಳಿತ ಸಿಬ್ಬಂದಿಯ ಕೈವಾಡ ಇಲ್ಲದೆ ಇದನ್ನು ಮಾಡುವುದು ಕಷ್ಟ ಎಂಬುದು ನಮ್ಮ ಬಲವಾದ ಅನಿಸಿಕೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ವೆಲ್ ಮುರುಗನ್ ತಿಳಿಸಿದ್ದಾರೆ.

ಇದು ಸರೀಸೃಪಗಳ ಉದ್ಯಾನವಾಗಿದ್ದು, ವಿವಿಧ ಪ್ರಭೇದಗಳ ಮೊಸಳೆಗಳು, ಆಮೆಗಳು ಇವೆ. ಅಲ್ಡಾಬ್ರಾ ಪ್ರಭೇದದ 4 ಮೊಸಳೆಗಳು ಇಲ್ಲಿದ್ದು, ಒಂದು ಕಾಣೆಯಾಗಿದೆ. ಅಲ್ಡಾಬ್ರಾ ಆಮೆಗಳು ಸುಮಾರು 150 ವರ್ಷ ಬದುಕುತ್ತವೆ.. ಸದ್ಯ ಕಾಣೆಯಾದ ಆಮೆಗೆ ಕೇವಲ 50 ವರ್ಷ ವಯಸ್ಸಾಗಿತ್ತು. ಆಮೆಗಳ ದೇಹದ ಅಂಗಗಳು ವೈದ್ಯಕೀಯವಾಗಿ ಹಲವು ಪ್ರಯೋಜನ ಕೊಡುತ್ತವೆ. ಬಹುಶ್ಯಃ ಇದೇ ಕಾರಣಕ್ಕೆ ಕಳವು ಮಾಡಿರಬಹುದು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಪಾರ್ಕ್​ ನಿರ್ದೇಶಕರು ಇನ್ನೂ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇದುವರೆಗೂ ಇಂಥ ಪ್ರಕರಣಗಳು ಇಲ್ಲಿ ನಡೆದೂ ಇರಲಿಲ್ಲ. ಇನ್ನೊಂದು ವಿಚಿತ್ರವೆಂದರೆ, ಅಲ್ಡಾಬ್ರಾದ ಒಂದು ಆಮೆ ಕಳವಾಗಿದ್ದರೂ, ಪಾರ್ಕ್​ನ ಫೇಸ್​ಬುಕ್​ ಪೇಜ್​ನಲ್ಲಿ ಕ್ರಿಸ್ಮಸ್​ ಶುಭಾಶಯ ಕೋರಲು ಇದೇ ಪ್ರಭೇದದ ಆಮೆಯ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ನಿಂದ ಗೋರಕ್ಷಣೆ ಮಂತ್ರ ಪಠಣ: ಪಕ್ಷ ಸಂಘಟನೆಗೆ ಹೊಸ ತಂತ್ರ?

Published On - 3:24 pm, Sat, 26 December 20