ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ನಿಂದ ಗೋರಕ್ಷಣೆ ಮಂತ್ರ ಪಠಣ: ಪಕ್ಷ ಸಂಘಟನೆಗೆ ಹೊಸ ತಂತ್ರ?
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತಿನಂತೆ ಕಾಂಗ್ರೆಸ್ ನಡೆದುಕೊಳ್ಳಲು ತೊಡಗಿದೆ. ಬಿಜೆಪಿ ಮೂಲಮಂತ್ರಗಳಾಗಿದ್ದ ಗೋರಕ್ಷಣೆ, ಗೋಶಾಲೆ ನಿರ್ಮಾಣ ಯೋಜನೆಗಳನ್ನು ಕಾಂಗ್ರೆಸ್ ತನ್ನ ಬತ್ತಳಿಕೆಗೂ ಸೇರಿಸಿಕೊಂಡಿದೆ.
ದೆಹಲಿ: ಬಿಜೆಪಿ ಪಕ್ಷ ಮೂಲಮಂತ್ರವಾಗಿ ಜಪಿಸುತ್ತಿದ್ದ ಯೋಜನೆಗಳನ್ನು ಈಗ ಕಾಂಗ್ರೆಸ್ ತನ್ನ ತೆಕ್ಕೆಗೂ ಸೆಳೆದುಕೊಂಡಿದೆ. ದೇಶದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಬಲಪಡಿಸುತ್ತ, ಇತರ ಪಕ್ಷಗಳನ್ನು ಕೆಡವುತ್ತಿರುವ ಸಂದರ್ಭದಲ್ಲಿ, ಕೈ ನಾಯಕರು ಮತ್ತೆ ಪುಟಿದೇಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಕಾಂಗ್ರೆಸ್, ಹೊಸ ಯೋಜನೆಗಳನ್ನು ರೂಪಿಸಿಕೊಂಡಿದೆ.
ಉತ್ತರ ಪ್ರದೇಶದ ಬುಂದೇಲ್ಖಂಡ ಪ್ರದೇಶದಲ್ಲಿ ಗಾಯ್ ಬಚಾವೊ, ಕಿಸಾನ್ ಬಚಾವೊ (ಗೋ ರಕ್ಷಿಸಿ, ರೈತರನ್ನು ರಕ್ಷಿಸಿ) ಪಾದಯಾತ್ರೆ ನಡೆಸುವುದಾಗಿ ಕಾಂಗ್ರೆಸ್ ತಿಳಿಸಿದೆ. ಜೊತೆಗೆ, ತಿರಂಗಾ ಯಾತ್ರಾ ಹಾಗೂ ರಾಷ್ಟ್ರಧ್ವಜದೊಂದಿಗೆ ಸೆಲ್ಫೀ ತೆಗದು ಹಂಚಿಕೊಳ್ಳುವ ಆನ್ಲೈನ್ ಆಂದೋಲನ ನಡೆಸುವುದಾಗಿಯೂ ಪಕ್ಷ ಹೇಳಿದೆ.
ಉತ್ತರ ಪ್ರದೇಶದಲ್ಲಿ 2022ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಜನರ ಭಾವನೆಗೆ ಹತ್ತಿರವಾಗುವಂಥ ವಿಚಾರಗಳನ್ನು ಕೇಂದ್ರೀಕರಿಸಿ ಕಾಂಗ್ರೆಸ್ ಕೆಲಸ ಮಾಡಲು ಹೊರಟಿದೆ. ಗೋರಕ್ಷಣೆ, ಗೋಶಾಲೆ ಯೋಜನೆಗಳಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದೆ ಎಂದು ಜನತೆಗೆ ತಿಳಿಸುವ ಮೂಲಕ, ಪ್ರಾದೇಶಿಕವಾಗಿ ತನ್ನ ಪ್ರಾಬಲ್ಯ ನೆಲೆಯೂರಿಸಲು ಪ್ರಯತ್ನಿಸುತ್ತಿದೆ.
ಹಸುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ, ಕಾಂಗ್ರೆಸ್ ಆಡಳಿತವಿರುವ ಚತ್ತೀಸ್ಘಡವನ್ನು ನೋಡಿ ಕಲಿಯಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಹಿಂದೆ ಹೇಳಿಕೆ ನೀಡಿದ್ದರು. ಇದೀಗ, ಡಿಸೆಂಬರ್ 26ರಂದು ಲಲಿತ್ಪುರ ಜಿಲ್ಲೆಯಿಂದ ಮಧ್ಯಪ್ರದೇಶದ ಚಿತ್ರಕೂಟದವರೆಗೆ, ಬುಂದೇಲ್ಖಂಡ ಮೂಲಕ ಪಾದಯಾತ್ರೆ ನಡೆಸುವುದಾಗಿ ಹೇಳಿದೆ. ತನ್ಮೂಲಕ, ಯುಪಿ ಸರ್ಕಾರದ ಸುಪರ್ದಿಯಲ್ಲಿರುವ ಗೋಶಾಲೆಗಳ ಅವ್ಯವಸ್ಥೆಯನ್ನು ಎತ್ತಿ ತೋರಿಸುವುದಾಗಿ ಹೇಳಿದೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಮಾತಿನಂತೆ ಕಾಂಗ್ರೆಸ್ ಈ ರೀತಿ ನಡೆದುಕೊಳ್ಳಲು ಶುರು ಮಾಡಿದೆ. ಬಿಜೆಪಿ ಮೂಲಮಂತ್ರಗಳಾಗಿದ್ದ ಗೋರಕ್ಷಣೆ, ಗೋಶಾಲೆ ನಿರ್ಮಾಣ ಯೋಜನೆಗಳನ್ನು ಕಾಂಗ್ರೆಸ್ ತನ್ನ ಬತ್ತಳಿಕೆಗೂ ಸೇರಿಸಿಕೊಂಡಿದೆ.
ಪಕ್ಷ ಸಂಘಟನೆಗೆ ಕಾಂಗ್ರೆಸ್ನಿಂದ ಹೊಸ ರೂಪುರೇಷೆ ಡಿಸೆಂಬರ್ 28ರಂದು ಕಾಂಗ್ರೆಸ್ ಪಕ್ಷ 136ನೇ ಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಕಾಂಗ್ರೆಸ್ ಸ್ಥಾಪನೆಯಾಗಿ 136 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ, ರಾಜ್ಯದ ಕಾಂಗ್ರೆಸ್ ಕಚೇರಿಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ತಿರಂಗಾ ಯಾತ್ರದಂತಹ ಇತರ ಸೃಜನಾತ್ಮಕ ಆಂದೋಲನಗಳನ್ನು, ಕೊವಿಡ್-19 ಮಾರ್ಗಸೂಚಿ ಅನುಸರಿಸಿ ನಡೆಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಪ್ರದೇಶ ಕಾಂಗ್ರೆಸ್ ಸಮಿತಿಗಳನ್ನು ಇನ್ನಷ್ಟು ಕಾರ್ಯಶೀಲಗೊಳಿಸುವ ಆಶಯವನ್ನು ಕಾಂಗ್ರೆಸ್ ಪಕ್ಷ ತೋರುತ್ತಿದೆ. ಈ ನಿಟ್ಟಿನಲ್ಲಿ, ದೆಹಲಿಯಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಹೇಳಲಾಗಿದೆ.
ಮುಂದಿನ ವರ್ಷದಲ್ಲಿ 1971ರ ಭಾರತ-ಪಾಕ್ ಯುದ್ಧ ನಡೆದ 50 ವರ್ಷಗಳಾಗಲಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನಾಯಕತ್ವವನ್ನು ಬಿಂಬಿಸುವ ವಿಚಾರಗಳ ಪ್ರದರ್ಶನ ನಡೆಸಲು ಕಾಂಗ್ರೆಸ್ ಯೋಜನೆ ಹಾಕಿಕೊಂಡಿದೆ.
ಕಾಂಗ್ರೆಸ್ ಹೊಸದಾಗಿ ಹೊರಹೊಮ್ಮಲು ನಡೆಸುತ್ತಿರುವ ಈ ಪ್ರಯತ್ನಗಳ ಬಗ್ಗೆ ತಮ್ಮದೇ ಪಕ್ಷದ ಕೆಲ ಹಿರಿಯ ನಾಯಕರು ಅಸಮಾಧಾನ ತೋರಿರುವುದಾಗಿ ಮೂಲಗಳು ತಿಳಿಸಿವೆ. ಬಿಜೆಪಿಯ ವಿಚಾರಗಳನ್ನು ಹಿಡಿದು ನಾವು ಅವರನ್ನು ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್ ತನ್ನ ತತ್ವ-ಸಿದ್ಧಾಂತಗಳ ಮೂಲಕವೇ ಜನರನ್ನು ತಲುಪಬೇಕು ಎಂದು ಅವರು ಆಶಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
योगी के मीडिया सलाहकार @shalabhmaniतो बोल रहे थे कि ललितपुर की गौशालाओं से आए वीडियो झूठे हैं। तो मुकदमा क्यों लिखा गया?
मतलब साफ है कि गौशालाओं में गायों की दुर्दशा को योगी जी छिपाना चाहते हैं। वोट दुह लिए अब क्या चाहिए।#गाय_बचाओ_किसान_बचाओ pic.twitter.com/dJYUKoWeX5
— UP Congress (@INCUttarPradesh) December 26, 2020
गाय बचाओ, किसान बचाओ यात्रा हर कीमत पर निकलेगी और योगी सरकार ने गौशालाओं के नाम पर जो करोड़ों के फंड का वारा – न्यारा किया है उसका हिसाब होगा।
बुंदेलखंड में किसानों की दुर्दशा का हिसाब मांगा जाएगा। pic.twitter.com/m0DKyOPM05
— UP Congress (@INCUttarPradesh) December 25, 2020
ಗೋ ಹತ್ಯೆ ನಿಷೇಧ ಕಾಯ್ದೆ ಕಠೋರ, ಅವೈಜ್ಞಾನಿಕ, ರೈತ ವಿರೋಧಿ ಎಂದು ಗುಡುಗಿದ ಸಿದ್ದರಾಮಯ್ಯ
Published On - 2:37 pm, Sat, 26 December 20