ಲಂಚ ಕೇಳಿದ ಆರೋಪ; ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಆಪ್ತ ಸಹಾಯಕರ ವಿರುದ್ಧ ನ್ಯಾಯಾಲಯದ ಮೊರೆ ಹೋದ ಶೂಟರ್ ವರ್ತಿಕಾ ಸಿಂಗ್
ನಿಮ್ಮನ್ನು ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಇದಕ್ಕಾಗಿ ನೀವು ನಮಗೆ ₹ 1 ಕೋಟಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ನಂತರ ಅದನ್ನು ₹ 25 ಲಕ್ಷಕ್ಕೆ ಇಳಿಸಿದರು ಎಂದು ವರ್ತಿಕಾ ಸಿಂಗ್ ಆರೋಪಿಸಿದ್ದಾರೆ.
ಸುಲ್ತಾನಪುರ: ಕೇಂದ್ರ ಮಹಿಳಾ ಆಯೋಗದ ಸದಸ್ಯರಾಗಲು ಲಂಚ ಕೇಳಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಸಚಿವೆಯ ಆಪ್ತ ಸಹಾಯಕರ ಮೇಲೆ ಆರೋಪ ಹೊರಿಸಿ, ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಸಂಸದ-ಶಾಸಕ ನ್ಯಾಯಾಲಯವು ಜನವರಿ 2 ರಂದು ವಿಚಾರಣೆಗೆ ದಿನಾಂಕ ನಿಗದಿಪಡಿಸಿದೆ. ವಿಚಾರಣೆಯಲ್ಲಿ ಪ್ರಕರಣವು ತನ್ನ ವ್ಯಾಪ್ತಿಗೆ ಒಳಪಟ್ಟಿದೆಯೇ ಎಂದು ನಿರ್ಧರಿಸುತ್ತದೆ ಎಂದು ವರ್ತಿಕಾ ಸಿಂಗ್ ಪರ ವಕೀಲ ಹೇಳಿದ್ದಾರೆ. ಸಚಿವರ ಆಪ್ತ ಸಹಾಯಕರಾದ ವಿಜಯ್ ಗುಪ್ತಾ ಮತ್ತು ರಜನೀಶ್ ಸಿಂಗ್ ಇಬ್ಬರು ಸೇರಿ ವರ್ತಿಕಾ ಸಿಂಗ್ ಅವರಿಗೆ ನಕಲಿ ಪತ್ರವೊಂದನ್ನು ನೀಡಿದ್ದು, ನಿಮ್ಮನ್ನು ಕೇಂದ್ರ ಮಹಿಳಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಇದಕ್ಕಾಗಿ ನೀವು ನಮಗೆ ₹ 1 ಕೋಟಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ ನಂತರ ಅದನ್ನು ₹ 25 ಲಕ್ಷಕ್ಕೆ ಇಳಿಸಿದರು ಎಂದು ವರ್ತಿಕಾ ಸಿಂಗ್ ಆರೋಪಿಸಿದ್ದಾರೆ.
ಅವರಲ್ಲಿ ಒಬ್ಬರು ತನ್ನೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ವರ್ತಿಕಾ ಸಿಂಗ್ ಆರೋಪಿಸಿದ್ದಾರೆ. ಆದಾಗ್ಯೂ, ನವೆಂಬರ್ 23 ರಂದು ವಿಜಯ್ ಗುಪ್ತಾ ಅವರು ಅಮೆತಿ ಜಿಲ್ಲೆಯ ಮುಸಾಫಿರ್ಖಾನಾ ಪೊಲೀಸ್ ಠಾಣೆಯಲ್ಲಿ ಶೂಟರ್ ವರ್ತಿಕಾ ಸಿಂಗ್ ಮತ್ತು ಇನ್ನೊಬ್ಬ ವ್ಯಕ್ತಿ ನಮ್ಮ ವಿರುದ್ಧ ಆಧಾರ ರಹಿತ ಆರೋಪಗಳನ್ನು ಹೊರಿಸಿದ್ದಾರೆ. ಈ ಮೂಲಕ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು, ಶೂಟರ್ ವರ್ತಿಕಾ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವರ್ತಿಕಾ ಸಿಂಗ್, ಸಚಿವೆಯ ಆಪ್ತರ ಭ್ರಷ್ಟಾಚಾರವನ್ನು ಬಹಿರಂಗಪಡಿಸುವುದಾಗಿ ಹೇಳಿದ ಕಾರಣದಿಂದಾಗಿ ಅವರು ನನ್ನ ಮೇಲೆ ದೂರು ದಾಖಲಿಸಿದ್ದಾರೆ ಎಂದಿದ್ದಾರೆ.