ತಿರುವನಂತಪುರಂ: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಯಲ್ಲಿ ಅತ್ಯಂತ ಮಹತ್ವದ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮಕರ ಸಂಕ್ರಾಂತಿ ದಿನವಾದ ಇಂದು ಪವಿತ್ರ ಮಕರ ಜ್ಯೋತಿ ದರ್ಶನ ಹಾಗೂ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆಯ ಸಂಪ್ರದಾಯಗಳನ್ನು ಕಾಣಲು ಭಕ್ತರು ಕಾತರದಿಂದ ಕಾದಿದ್ದರು. ಆದರೆ ಈ ಬಾರಿ ಭಕ್ತರ ಉತ್ಸಾಹಕ್ಕೆ ಕೋವಿಡ್-19 ಕಡಿವಾಣ ಹಾಕಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವ ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹಾಗಾಗಿ ನೆಗೆಟಿವ್ ಪ್ರಮಾಣಪತ್ರ ಹೊಂದಿರುವವರು ಮಾತ್ರ ಸನ್ನಿಧಿಗೆ ಆಗಮಿಸುವಂತಾಗಿದೆ. ಇನ್ನು ಇಂದು ಸಂಜೆ ಮಕರ ಜ್ಯೋತಿ ದರ್ಶನವಾಗಲಿದ್ದು ಭಕ್ತರು ಕಾತರರಾಗಿದ್ದಾರೆ.
ತಂತ್ರಿಗಳಾದ ಕಂದಾದಾರು ರಾಜೀವರು ನೇತೃತ್ವದಲ್ಲಿ ದೇವಾಲಯದಲ್ಲಿ ಬಿಂಬಾಶುದ್ಧಿ ಸೇರಿದಂತೆ ಶುದ್ಧೀಕರಣಗಳು ನಡೆದಿದ್ದು, ಇಂದು ಸಂಜೆ ಹೊತ್ತಿಗೆ ದೇವರ ಆಭರಣಗಳನ್ನು ಉತ್ಸವ ಮೂಲಕ ದೇವಾಲಯಕ್ಕೆ ತರಲಾಗುವುದು.
ಕೊರೊನಾ ಹಿನ್ನೆಲೆ ಈ ಬಾರಿ ಕೇವಲ 5,000 ಭಕ್ತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ ದೇವಸ್ಥಾನ ಮಂಡಳಿಯ ಅಧ್ಯಕ್ಷ ಎನ್.ವಾಸು, ಅಯ್ಯಪ್ಪಸ್ವಾಮಿಯ ನೈಯಾಭಿಷೇಕ (ತುಪ್ಪದ ಅಭಿಷೇಕ) ಸೇವೆ ಜ.18ಕ್ಕೆ ಮುಕ್ತಾಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸರ ನಿಯೋಜನೆ
ಜಿಲ್ಲೆಯನ್ನು 13 ವಿವಿಧ ವಲಯಗಳಾಗಿ ವಿಂಗಡಿಸುವ ಮೂಲಕ ಭಕ್ತರ ವಾಹನಗಳ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಸುತ್ತಮುತ್ತಲಿನಲ್ಲಿ 6 ವಿಭಾಗಗಳಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.
ನೀಲಕಲ್ನಿಂದ ಹಿಂದಿರುಗುವ ಭಕ್ತರು ಕಣಮಲ-ಪಾಲಪ್ಪಳ್ಳಿ-ಳಾಹಾ-ಪೆರುನಾಡ್-ವಡಶ್ಶೇರಿಕ್ಕರ ಮಾರ್ಗದಲ್ಲಿ ಸಾಗಬೇಕಾಗುತ್ತದೆ. ಎರುಮೇಲಿಯಿಂದ ನೀಲಕಲ್ಗೆ ಹೋಗುವ ಭಕ್ತರು ಮಂದಿರಂಪಾಡಿ-ವಡಸೇರಿಕಾರ ಮಾರ್ಗದಲ್ಲಿ ಸಾಗಬೇಕಾಗುತ್ತದೆ.
ಆದಾಯ ವಿವರ
ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಯ ಮೊದಲ 54 ದಿನಗಳಲ್ಲಿ 1.34 ಲಕ್ಷ ಭಕ್ತರು ಆಗಮಿಸಿದ್ದು, ದೇವಾಲಯಕ್ಕೆ ಸುಮಾರು ₹ 16.30 ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಮಕರ ಸಂಕ್ರಾಂತಿ ಹೊತ್ತಿಗೆ ಸುಮಾರು ₹ 60.26 ಕೋಟಿ ರೂ ಆದಾಯ ಗಳಿಸಿತ್ತು. ಸದ್ಯ ದೇಗುಲದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟ ಕಾರಣ ₹ 100 ಕೋಟಿ ಹಣದ ನೆರವನ್ನು ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತದೆ ಎಂದು ಎನ್.ವಾಸು ಮಾಹಿತಿ ನೀಡಿದ್ದಾರೆ.
ಶಬರಿಮಲೆಗೆ ತೆರಳುವವರ ಗಮನಕ್ಕೆ; ನಿಮ್ಮೊಂದಿಗೆ ಇರಲೇಬೇಕು ಕೊವಿಡ್-19 ನೆಗೆಟಿವ್ ರಿಪೋರ್ಟ್
Published On - 10:14 am, Thu, 14 January 21