
ನವದೆಹಲಿ, ಅಕ್ಟೋಬರ್ 26: ದೇಶಾದ್ಯಂತ ವ್ಯಾಪಕ ರಾಜಕೀಯ ಚರ್ಚೆ ಮತ್ತು ವಿರೋಧ ಪಕ್ಷಗಳ ಆಕ್ಷೇಪಕ್ಕೆ ಕಾರಣವಾಗಿರುವ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (ಎಸ್‌ಐಆರ್) ಪ್ರಕ್ರಿಯೆಯನ್ನು ಭಾರತೀಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲು ಮತ್ತು ನಕಲಿ ಮತದಾರರನ್ನು ತೆಗೆದುಹಾಕಲು ಈ ನಿರ್ಧಾರವನ್ನು ಆಯೋಗವು ಸರ್ವಾನುಮತದಿಂದ ಕೈಗೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿ ಹಾಗೂ ಚುನಾವಣಾ ಆಯೋಗದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿವೆ ಎಂಬ ಪತ್ರಿಕಾ ವರದಿಯನ್ನು ಆಧರಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಪ್ರತಿಯಾಗಿ ಆಯೋಗವು ಸುಪ್ರೀಂ ಕೋರ್ಟ್‌ಗೆ ಪ್ರತ್ಯುತ್ತರ ಅಫಿಡವಿಟ್ ಸಲ್ಲಿಸಿದೆ.
ಜೂನ್ 2025, ಅಕ್ಟೋಬರ್ 2025 ಮತ್ತು ಮೇ 2026ರಲ್ಲಿ ಹೊರಡಿಸಲಾದ ಎಲ್ಲಾ 3 ಎಸ್‌ಐಆರ್ ಆದೇಶಗಳನ್ನು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರು ಸರ್ವಾನುಮತದಿಂದ ಅನುಮೋದಿಸಿದ್ದಾರೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಫಾರ್ಮ್ 6 ತಿದ್ದುಪಡಿ ಆಗಿಲ್ಲ:
ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ಅನ್ನು ಆಯೋಗವು ತಿದ್ದುಪಡಿ ಮಾಡಿಲ್ಲ. ಫಾರ್ಮ್ 6 ಅನ್ನು ತಿದ್ದುಪಡಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಎಸ್‌ಐಆರ್ ಸ್ವಯಂ-ಘೋಷಣೆಯು ಪ್ರತ್ಯೇಕ ದಾಖಲೆಯಾಗಿದ್ದು, ಆನ್‌ಲೈನ್ ಗೊಂದಲಗಳನ್ನು ನಿವಾರಿಸಲು ಅಕ್ಟೋಬರ್ 21ರಿಂದ ಆನ್‌ಲೈನ್ ಅರ್ಜಿಯಲ್ಲೂ ‘ಫಾರ್ಮ್ 6’ ಹಾಗೂ ‘ಘೋಷಣಾ ಪತ್ರ’ವನ್ನು ಪ್ರತ್ಯೇಕಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಇದನ್ನೂ ಓದಿ: ಎಸ್‌ಐಆರ್ ವಿವಾದದ ಬೆನ್ನಲ್ಲೇ 17 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಎಸ್ಆರ್ ಘೋಷಿಸಿದ ಚುನಾವಣಾ ಆಯೋಗ
ಮನೆಯ ಬಾಗಿಲಿಗೇ ಸೇವೆ:
ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಮ್ಯಾಪಿಂಗ್ ಆಗದ ಮತದಾರರು ಖುದ್ದಾಗಿ ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಅವರ ಮನೆಗೇ ತೆರಳಿ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಆನ್‌ಲೈನ್ ಮೂಲಕ ವಿಚಾರಣೆ ನಡೆಯಲಿದೆ ಎಂದು ಕೋರ್ಟ್‌ಗೆ ವಿವರಿಸಲಾಗಿದೆ. ದಸರಾ ರಜಾದಿನಗಳ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಂಕ್ಷಿಪ್ತ ಅಫಿಡವಿಟ್ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ವಿವರವಾದ ಪ್ರತ್ಯುತ್ತರವನ್ನು ಸಲ್ಲಿಸುವುದಾಗಿ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ