ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕುಳಿತ ಬಿಜೆಪಿಯ ಅಮರಿಂದರ್ ಸಿಂಗ್

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿಯ ಅಮರಿಂದರ್ ಸಿಂಗ್ ಭಾಗವಹಿಸಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಸಿಂಗ್, ಗಾಂಧಿ ಕುಟುಂಬದೊಂದಿಗೆ ಆತ್ಮೀಯವಾಗಿ ಮಾತನಾಡಿರುವುದು ಕುತೂಹಲ ಮೂಡಿಸಿದೆ. ಅವರು ಕಾಂಗ್ರೆಸ್‌ಗೆ ಮರಳುವ ಬಗ್ಗೆ ಊಹಾಪೋಹಗಳು ಕೇಳಿಬಂದರೂ, ಸಿಂಗ್ ರಾಜಕೀಯ ಸೇರ್ಪಡೆ ನಿರಾಕರಿಸಿ, ವೈಯಕ್ತಿಕ ಸಂಬಂಧ ಎಂದಿದ್ದಾರೆ.

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕುಳಿತ ಬಿಜೆಪಿಯ ಅಮರಿಂದರ್ ಸಿಂಗ್
ಅಮರಿಂದರ್ ಸಿಂಗ್
Image Credit source: PTI

Updated on: Nov 17, 2026 | 7:22 AM

ನವದೆಹಲಿ, ನವೆಂಬರ್ 17: ಐದು ವರ್ಷಗಳ ಹಿಂದೆ ಸೋನಿಯಾ ಗಾಂಧಿ ವಿರುದ್ಧವೇ ಏಳು ಪುಟಗಳ ಪತ್ರ ಬರೆದು ಕಾಂಗ್ರೆಸ್ ತೊರೆದಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಈಗ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿರುವ ಅಮರಿಂದರ್ ಸಿಂಗ್ ಮತ್ತು ರಾಹುಲ್ ಗಾಂಧಿ ನಡುವಿನ ಆತ್ಮೀಯ ಮಾತುಕತೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಹಾಗಾದರೆ ಅಮರಿಂದರ್ ಮತ್ತೆ ಕಾಂಗ್ರೆಸ್ ಸೇರುತ್ತಾರಾ?.

ಕಾಂಗ್ರೆಸ್‌ನ ಮಾಜಿ ನಾಯಕ ಹಾಗೂ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತೆ ರಾಜಕೀಯ ಚರ್ಚೆಯ ಕೇಂದ್ರವಾಗಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದು, ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯವಾಗಿ ಮಾತನಾಡಿರುವುದು ಗಮನ ಸೆಳೆದಿದೆ.

Loading...

ವಿಶೇಷವೆಂದರೆ, ಐದು ವರ್ಷಗಳ ಹಿಂದೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ತೊರೆದಿದ್ದ ಅಮರಿಂದರ್ ಸಿಂಗ್, ಇದೀಗ ಅದೇ ಕುಟುಂಬದ ಕಾರ್ಯಕ್ರಮದಲ್ಲಿ ಮೊದಲ ಸಾಲಿನಲ್ಲಿ ಕುಳಿತಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಏಕೈಕ ಬಿಜೆಪಿ ನಾಯಕ ಎಂಬುದು ಮತ್ತೊಂದು ವಿಶೇಷ.

ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅಮರಿಂದರ್ ಸಿಂಗ್ ಅವರನ್ನು ವೇದಿಕೆಯಿಂದಲೇ ಆತ್ಮೀಯವಾಗಿ ಮಾತನಾಡಿಸಿದರು. ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ನಡುವಿನ ಸಂಬಂಧದ ಹಳೆಯ ನೆನಪುಗಳನ್ನು ಹಂಚಿಕೊಂಡ ರಾಹುಲ್, ಮಾತಿನ ಮಧ್ಯೆ ಅಮರಿಂದರ್ ಸಿಂಗ್ ಅವರನ್ನೂ ನೆನಪಿಸಿಕೊಂಡರು.

ಇದನ್ನೂ ಓದಿ: ಸೋನಿಯಾ ಗಾಂಧಿಯ ‘ಬಿಲಾಂಗಿಂಗ್; ಎ ಜರ್ನಿ ಆಫ್ ಲವ್’ ಆತ್ಮಕತೆ ಇಂದು ಅಧಿಕೃತ ಬಿಡುಗಡೆ

1980ರ ದಶಕದಲ್ಲಿ ತಮ್ಮ ತಂದೆ-ತಾಯಿ ನಡುವೆ ನಡೆದಿದ್ದ ಅಪರೂಪದ ಜಗಳವೊಂದನ್ನು ರಾಹುಲ್ ಪ್ರಸ್ತಾಪಿಸಿದರು. ಆ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ಅಮರಿಂದರ್ ಸಿಂಗ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು ಎಂದು ಹೇಳಿದರು. ಈ ಘಟನೆ ನಿಮಗೆ ನೆನಪಿದೆಯೇ ಎಂದು ರಾಹುಲ್ ಕೇಳಿದಾಗ ಅಮರಿಂದರ್ ಸಿಂಗ್ ನಗುತ್ತಾ ಪ್ರತಿಕ್ರಿಯಿಸಿದರು.

ತಮ್ಮ ಕುಟುಂಬದ ಹಳೆಯ ನೆನಪುಗಳನ್ನು ಹಂಚಿಕೊಂಡ ರಾಹುಲ್, ಮನೆಯಲ್ಲಿ ನಡೆಯುತ್ತಿದ್ದ ಕುಟುಂಬದ ಊಟ, ತಂದೆ-ತಾಯಿಯ ನಡುವಿನ ಪ್ರೀತಿ ಹಾಗೂ ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಅವರನ್ನು ಕಳೆದುಕೊಂಡ ನೋವಿನ ಬಗ್ಗೆಯೂ ಮಾತನಾಡಿದರು.

ಅಮರಿಂದರ್ ಸಿಂಗ್ ಕಾಂಗ್ರೆಸ್‌ಗೆ ಮರಳುತ್ತಾರಾ?
ಈ ಕಾರ್ಯಕ್ರಮದ ಬಳಿಕ ಅಮರಿಂದರ್ ಸಿಂಗ್ ಮತ್ತೆ ಕಾಂಗ್ರೆಸ್ ಸೇರುತ್ತಾರೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಆದರೆ ಈ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, “ನಾವು ಇಲ್ಲಿಗೆ ಸಾಮಾಜಿಕ ಕಾರ್ಯಕ್ರಮಕ್ಕಾಗಿ ಬಂದಿದ್ದೇವೆ. ಇದರಲ್ಲಿ ರಾಜಕೀಯವನ್ನು ಏಕೆ ತರುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.

ಗಾಂಧಿ ಕುಟುಂಬದೊಂದಿಗೆ ಹಲವು ವರ್ಷಗಳಿಂದ ವೈಯಕ್ತಿಕ ಸಂಬಂಧ ಹೊಂದಿದ್ದೇನೆ. ಸೋನಿಯಾ ಗಾಂಧಿ ಅವರು ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಬಂದಿದ್ದರು. ಹೀಗಾಗಿ ಅವರ ಕಾರ್ಯಕ್ರಮಕ್ಕೆ ಆಹ್ವಾನ ಬಂದಾಗ ನಾನು ಭಾಗವಹಿಸಿದ್ದೇನೆ. ಕಾಂಗ್ರೆಸ್‌ಗೆ ಮರಳುವಂತೆ ಯಾರೂ ನನ್ನನ್ನು ಕೇಳಿಲ್ಲ. ಹಾಗೆಯೇ ಪಕ್ಷಕ್ಕೆ ಬರಬಾರದು ಎಂದೂ ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಕೂಡ ಅಮರಿಂದರ್ ಸಿಂಗ್ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. “ಅವರು ನಮ್ಮೊಂದಿಗೆ ಇದ್ದರೆ ಅದ್ಭುತವಾಗಿರುತ್ತದೆ” ಎಂದು ಹೇಳಿದ್ದಾರೆ. ಆದರೆ ಈ ಭೇಟಿಗೆ ಯಾವುದೇ ರಾಜಕೀಯ ಅರ್ಥವಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಅಂಬಿಕಾ ಸೋನಿ ಅಭಿಪ್ರಾಯಪಟ್ಟಿದ್ದಾರೆ.

ಐದು ವರ್ಷಗಳ ಹಿಂದೆ ನಡೆದಿದ್ದೇನು?
ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಡುವಿನ ಬಿರುಕು 2021ರಲ್ಲಿ ತೀವ್ರವಾಗಿತ್ತು. ಪಂಜಾಬ್ ಕಾಂಗ್ರೆಸ್‌ನಲ್ಲಿ ನವಜೋತ್ ಸಿಂಗ್ ಸಿಧು ಅವರೊಂದಿಗೆ ನಡೆದ ಅಧಿಕಾರ ಸಂಘರ್ಷದ ಹಿನ್ನೆಲೆಯಲ್ಲಿ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಸೋನಿಯಾ ಗಾಂಧಿಗೆ ಏಳು ಪುಟಗಳ ರಾಜೀನಾಮೆ ಪತ್ರ ಬರೆದಿದ್ದರು. ಅದರಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕುಟುಂಬ ರಾಜಕೀಯ ನಡೆಸಿದೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್ ತೊರೆದ ಬಳಿಕ 2021ರಲ್ಲಿ ಪಂಜಾಬ್ ಲೋಕ ಕಾಂಗ್ರೆಸ್ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಬಳಿಕ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಬಿಜೆಪಿ ಸೇರಿದರು.

ರಾಹುಲ್ ಗಾಂಧಿಗೆ ಅಮರಿಂದರ್ ಸಿಂಗ್ ಅಚ್ಚುಮೆಚ್ಚಿನ ಬಿಜೆಪಿ ನಾಯಕ
ಇತ್ತೀಚೆಗೆ ರಾಹುಲ್ ಗಾಂಧಿ ಇನ್‌ಸ್ಟಾಗ್ರಾಂನಲ್ಲಿ ನಡೆಸಿದ ‘ಆಸ್ಕ್ ಮಿ ಎನಿಥಿಂಗ್’ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ಬಿಜೆಪಿ ನಾಯಕ ಯಾರು ಎಂಬ ಪ್ರಶ್ನೆಗೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎಂದು ಉತ್ತರಿಸಿದ್ದರು. ಅಮರಿಂದರ್ ಸಿಂಗ್ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಅವರು ತುಂಬಾ ಕೂಲ್ ವ್ಯಕ್ತಿ. ಮಿಲಿಟರಿ ಇತಿಹಾಸದ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ ಎಂದು ರಾಹುಲ್ ಹೇಳಿದ್ದರು. ಅಲ್ಲದೆ, “ನಮಸ್ಕಾರ ಅಮರಿಂದರ್ ಅಂಕಲ್” ಎಂದೂ ಸಂದೇಶ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅಮರಿಂದರ್, ರಾಹುಲ್ ಮತ್ತು ಪ್ರಿಯಾಂಕಾ ಅವರನ್ನು ಬಾಲ್ಯದಿಂದಲೂ ಪರಿಚಯವಿದೆ. ಅವರ ಕುಟುಂಬದೊಂದಿಗಿನ ವೈಯಕ್ತಿಕ ಸಂಬಂಧ ಮುಂದುವರಿಯಲಿದೆ. ಆದರೆ ರಾಜಕೀಯವಾಗಿ ತಾನು ಬಿಜೆಪಿಯಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದರು.

ಈ ಪುಸ್ತಕದಲ್ಲಿ ಇಟಲಿಯ ಬಾಲ್ಯದಿಂದ ಭಾರತಕ್ಕೆ ಬಂದದ್ದು, ರಾಜೀವ್ ಗಾಂಧಿ ಅವರೊಂದಿಗಿನ ಪ್ರೀತಿ ಮತ್ತು ವಿವಾಹ, ಗಾಂಧಿ ಕುಟುಂಬದ ಜೀವನ ಹಾಗೂ ರಾಜಕೀಯ ಪ್ರವೇಶದವರೆಗಿನ ವೈಯಕ್ತಿಕ ಅನುಭವಗಳನ್ನು ವಿವರಿಸಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು. ಪ್ರಕಾಶಕರ ಪ್ರಕಾರ, ಬಿಡುಗಡೆಯಾದ ಒಂದು ವಾರದೊಳಗೆ ಪುಸ್ತಕದ ಎರಡು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ

ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿದ್ದರೂ ಗಾಂಧಿ ಕುಟುಂಬ ಮತ್ತು ಅಮರಿಂದರ್ ಸಿಂಗ್ ನಡುವಿನ ವೈಯಕ್ತಿಕ ಸಂಬಂಧ ಇನ್ನೂ ಮುಂದುವರಿದಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಆದರೆ ಅಮರಿಂದರ್ ಸಿಂಗ್ ಕಾಂಗ್ರೆಸ್‌ಗೆ ಮರಳುವ ಬಗ್ಗೆ ಯಾವುದೇ ಅಧಿಕೃತ ಮಾತುಕತೆ ನಡೆದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:21 am, Tue, 17 November 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us