ಅಮೆಜಾನ್​ನ ಡೆಲಿವರಿ ಸಿಬ್ಬಂದಿಯಿಂದ ದೇಶದಾದ್ಯಂತ ಒಂದು ದಿನದ ಮುಷ್ಕರಕ್ಕೆ ಸಿದ್ಧತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 24, 2021 | 8:16 PM

ಅಮೆಜಾನ್​ನ ಡೆಲಿವರಿ ಸಿಬ್ಬಂದಿ ದೇಶದಾದ್ಯಂತ ಒಂದು ದಿನದ ಮುಷ್ಕರ ನಡೆಸಲು ಸಿದ್ಧತೆ ನಡೆಸಿದ್ದಾರೆ. ಕಮಿಷನ್ ದರ ಹೆಚ್ಚಳ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಈ ಮುಷ್ಕರ ನಡೆಸಲಿದ್ದಾರೆ. ಆದರೆ ಇದರಿಂದ ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗಲ್ಲ ಎಂದು ಅಮೆಜಾನ್ ಹೇಳಿದೆ.

ಅಮೆಜಾನ್​ನ ಡೆಲಿವರಿ ಸಿಬ್ಬಂದಿಯಿಂದ ದೇಶದಾದ್ಯಂತ ಒಂದು ದಿನದ ಮುಷ್ಕರಕ್ಕೆ ಸಿದ್ಧತೆ
ಸಾಂದರ್ಭಿಕ ಚಿತ್ರ
Follow us on

ಅಮೆಜಾನ್​ನ ಡೆಲಿವರಿ ಸಿಬ್ಬಂದಿ ಮುಂಬರುವ ದಿನಗಳಲ್ಲಿ ಒಂದು ದಿನದ ದೇಶವ್ಯಾಪಿ ಮುಷ್ಕರ ನಡೆಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಕಮಿಷನ್ ದರ ಹೆಚ್ಚಳ ಮಾಡಬೇಕು, ಇನ್ಷೂರೆನ್ಸ್ ಕ್ಲೇಮ್ ಏರಿಕೆ ಮತ್ತು ಗ್ರಾಹಕರಿಗೆ ಕೆವೈಸಿ (Know Your Customer) ಪ್ರಕ್ರಿಯೆ ಕಡ್ಡಾಯ ಮಾಡಬಾರದು ಎಂಬ ಕಾರಣಗಳಿಗೆ ಈ ಮುಷ್ಕರ ನಡೆಸುವುದಕ್ಕೆ ಉದ್ದೇಶಿಸಿದ್ದಾರೆ ಎಂದು ವರದಿ ಆಗಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಪುಣೆ ಸೇರಿದಂತೆ ವಿವಿಧ ನಗರಗಳಲ್ಲಿ ಇರುವ ಗೋದಾಮುಗಳಲ್ಲಿ ಒಂದು ದಿನದ ಮುಷ್ಕರ ನಡೆಸುವ ಆಲೋಚನೆ ಮಾಡಿದ್ದಾರೆ. ಟ್ರೇಡ್ ಯೂನಿಯನ್ಸ್ ಇಂಡಿಯನ್ ಫೆಡರೇಷನ್ ಆಫ್ ಆ್ಯಪ್- ಬೇಸ್ಡ್ ಟ್ರಾನ್ಸ್​ಪೋರ್ಟ್ ವರ್ಕರ್ಸ್ (IFAT) ಮತ್ತು ತೆಲಂಗಾಣ ಗಿಗ್ ಮತ್ತು ಪ್ಲಾಟ್​ಫಾರ್ಮ್ ವರ್ಕರ್ಸ್ ಯೂನಿಯನ್ ಈ ಬಗ್ಗೆ ಮಾತನಾಡಿ, ಮುಷ್ಕರದ ಕಾರಣಕ್ಕೆ ಈ ನಗರಗಳಲ್ಲಿನ ಅಮೆಜಾನ್ ಗೋದಾಮುಗಳಲ್ಲಿ ಪಾರ್ಸೆಲ್​ಗಳು ಹಾಗೇ ಉಳಿಯಲಿವೆ ಎಂದಿವೆ. ಆದರೆ ಅಮೆಜಾನ್ ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದಿದ್ದಾರೆ.

10,000ದಿಂದ 20,000 ಡೆಲಿವರಿ ಸಿಬ್ಬಂದಿ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಈ ತಿಂಗಳ ಕೊನೆಯ ಭಾಗದಲ್ಲಿ ಮುಷ್ಕರ ನಡೆಯಬಹುದು ಎಂದು IFAT ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶೇಖ್ ಸಲಾವುದ್ದೀನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅಮೆಜಾನ್​ನ ಸರಕು ಸಾಗಾಟ ವ್ಯವಸ್ಥೆಯ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುವ ಮೊದಲ ಮುಷ್ಕರ ಇದಾಗಲಿದೆ ಎಂದು ಅವರು ಹೇಳಿದ್ದಾರೆ. ದೆಹಲಿ ಮತ್ತು ಪುಣೆಯಲ್ಲಿ 1500ರಿಂದ 2000 ಮಂದಿ ಪುಣೆಯಲ್ಲಿ ಮುಷ್ಕರ ನಡೆಸಿದ್ದರು. 1000ದಿಂದ 1500 ಮಂದಿ ಇದೇ ಥರದ ನಡೆಯನ್ನು ದೆಹಲಿಯಲ್ಲಿ ಇಟ್ಟಿದ್ದರು. ಅದಾಗಿ ಕೆಲವು ದಿನಕ್ಕೆ ದೇಶದಾದ್ಯಂತ ಮುಷ್ಕರ ನಡೆಸುವ ಆಲೋಚನೆ ಬಂದಿದೆ ಎಂದು ಸಲಾವುದ್ದೀನ್ ಹೇಳಿದ್ದಾರೆ.

ಪ್ರಮುಖ ನಗರಗಳಲ್ಲಿ 24 ಗಂಟೆಗಳ ಆರಂಭಿಕ ಮುಷ್ಕರ
ಈ ಹಿಂದಿನ ಮುಷ್ಕರಗಳ ನಂತರವೂ ಅಮೆಜಾನ್​ನ ಈಗಿನ ನೀತಿಗಳಲ್ಲಿ ಯಾವ ಬದಲಾವಣೆಗಳೂ ಆಗಲಿಲ್ಲ. ಆದರೆ ಹೊರನಡೆದಿದ್ದ ಡೆಲಿವರಿ ಸಿಬ್ಬಂದಿ ಕೆಲವರ ವಿರುದ್ಧ ನಕಾರಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಲಾಗಿದೆ. ಒಟ್ಟಾರೆಯಾಗಿ ಅಮೆಜಾನ್ ಮೇಲೆ ಒತ್ತಡ ತರಬೇಕು ಎಂಬ ಉದ್ದೇಶದಿಂದ ಏಕಕಾಲಕ್ಕೆ ಪ್ರಮುಖ ನಗರಗಳಲ್ಲಿ 24 ಗಂಟೆಗಳ ಆರಂಭಿಕ ಮುಷ್ಕರ ನಡೆಸಲು ಯೋಜನೆ ರೂಪಿಸಲಾಗಿದೆ. ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳದಿದ್ದಲ್ಲಿ ಮುಷ್ಕರವು ಇನ್ನಷ್ಟು ವಿಸ್ತರಿಸಬಹುದು ಎನ್ನಲಾಗಿದೆ.

IFAT ಬುಧವಾರದಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಪ್ರಕಾರ, ಕಳೆದ ವರ್ಷದ ಕೊರೊನಾ ಲಾಕ್​ಡೌನ್​ಗೂ ಮುಂಚೆ ಅಮೆಜಾನ್​ನ ಡೆಲಿವರಿ ಸಿಬ್ಬಂದಿ ತಿಂಗಳಿಗೆ 20,000 ರೂಪಾಯಿ ಮಾಡುತ್ತಿದ್ದರು. ಆದರೆ ಈಗ ಗಳಿಕೆಯು ರೂ. 10,000ಕ್ಕೆ ಕುಸಿದಿದೆ. ಇನ್ನೂ ಮುಂದುವರಿದು, ಮಾರ್ಚ್ 15ರಂದು ಅಮೆಜಾನ್ ನೀಡಿರುವ ಹೊಸ ನೀತಿಯಂತೆ, ಸಣ್ಣ ಪ್ಯಾಕೇಜ್​ಗಳ ಡೆಲಿವರಿಗೆ ಒಂದಕ್ಕೆ ರೂ. 10 ಹಾಗೂ ಟೆಂಪೋಗಳ ಮೂಲಕ ಮಾಡುವ ಡೆಲಿವರಿಗೆ ರೂ. 15 ಸಿಗುತ್ತದೆ. ಈ ಹಿಂದೆ ಸಿಬ್ಬಂದಿಯು ರೂ. 35 ಪಡೆಯುತ್ತಿದ್ದರು ಎಂದು ತಿಳಿಸಲಾಗಿದೆ.

ವ್ಯಾನ್​ಗಳ ಮೂಲಕ ಮಾಡುವ ಪಾರ್ಸೆಲ್ ಡೆಲಿವರಿ ಒಂದಕ್ಕೆ ರೂ. 35 ನಿಗದಿ ಮಾಡಬೇಕು. ಸಣ್ಣ ಪಾರ್ಸೆಲ್​ಗಳಿಗೆ ತಲಾ ರೂ. 20 ನಿಗದಿಪಡಿಸಬೇಕು. “ಐ ಹ್ಯಾವ್ ಸ್ಪೇಸ್” ಪಿಕ್-ಅಪ್ ಪಾಯಿಂಟ್​ಗಳಿಂದ ಪಡೆಯುವ ಪಾರ್ಸೆಲ್​ಗೆ ತಲಾ 25 ರೂ. ನೀಡಬೇಕು ಎಂಬುದು ಬೇಡಿಕೆ ಆಗಿದೆ.

ವಿತರಣೆಗೆ ಅಡ್ಡಿಯಿಲ್ಲ: ಅಮೆಜಾನ್ ಪ್ರತಿಕ್ರಿಯೆ
ಡೆಲಿವರಿ ಸಿಬ್ಬಂದಿಯ ಮುಷ್ಕರದಿಂದ ವಿತರಣೆಗೆ ಅಡ್ಡಿ  ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿರುವ ಅಮೆಜಾನ್ ವಕ್ತಾರರು, ‘ನಮ್ಮ ಯಾವುದೇ ವಿತರಣಾ ಕಾರ್ಯಾಚರಣೆಗಳಲ್ಲಿ ಅಡೆತಡೆಗಳಿಲ್ಲ, ಮತ್ತು ನಮ್ಮ ಪಾಲುದಾರರು ದೇಶಾದ್ಯಂತ ಅಮೆಜಾನ್ ಗ್ರಾಹಕರಿಗೆ ಸಮಯಕ್ಕೆ ತಲುಪಿಸಲು ನಮ್ಮೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತಾರೆ. ನಮ್ಮ ಪಾಲುದಾರರೊಂದಿಗೆ ನಿಯಮಿತವಾಗಿ ಸಂಭಾಷಣೆ ನಡೆಸುವಲ್ಲಿ, ಅವರ ಪ್ರತಿಕ್ರಿಯೆಯನ್ನು ಆಲಿಸುವಲ್ಲಿ ಮತ್ತು ಅವರ ಅನುಭವವನ್ನು ನಿರಂತರವಾಗಿ ಸುಧಾರಿಸಲು ಯತ್ನಿಸುತ್ತೇವೆ. ಅವರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವಲ್ಲಿ ನಾವು ಅಗಾಧ ಗೌರವ ಇಡುತ್ತೇವೆ’ ಎಂದಿದ್ದಾರೆ.

ಇನ್ನು ವಿಮೆ ಮತ್ತು ಕೆವೈಸಿ ಕುರಿತು ಮಾತನಾಡಿ, ‘ಅಮೆಜಾನ್ ಒಡೆತನದ ವಿತರಣಾ ನೆಟ್​ವರ್ಕ್, ಡೆಲಿವರಿ ಸರ್ವೀಸ್ ಪಾರ್ಟನರ್ ನೆಟ್​ವರ್ಕ್ ಮತ್ತು ಅಮೆಜಾನ್ ಫ್ಲೆಕ್ಸ್ ಪ್ರೋಗ್ರಾಂನಾದ್ಯಂತದ ಎಲ್ಲಾ ಸಹವರ್ತಿಗಳು ವಿಭಿನ್ನ ವಿಮಾ ಯೋಜನೆಗಳ ವ್ಯಾಪ್ತಿಗೆ ಬರುತ್ತಾರೆ. ಕೆವೈಸಿ ಸಂಪೂರ್ಣವಾಗಿ ಐಚ್ಛಿಕವಾಗಿದೆ ಮತ್ತು ಸಹವರ್ತಿಗಳು ಆಯ್ಕೆ ಮಾಡಬಹುದು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Amazon Mega Music Fest: ಸಂಗೀತ ಪ್ರಿಯರಿಗೆ ಸಂತಸದ ಸುದ್ದಿ; ಆಡಿಯೊ ಡಿವೈಸ್​ಗಳಿಗೆ ಅಮೆಜಾನ್ ಆಫರ್!

Published On - 7:23 pm, Wed, 24 March 21