ನಡ್ಡಾ ಕಾರಿನ ಮೇಲೆ ದಾಳಿ; ವರದಿ ನೀಡಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರದ ಸೂಚನೆ

200ಕ್ಕೂ ಹೆಚ್ಚು ಜನರು ಕೋಲುಗಳನ್ನು ಹಿಡಿದುಕೊಂಡು ಜೆ.ಪಿ. ನಡ್ಡಾ ಕಾರಿನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ನಡ್ಡಾ ಕಾರಿನ ಮೇಲೆ ದಾಳಿ; ವರದಿ ನೀಡಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರದ ಸೂಚನೆ
ಜೆ.ಪಿ. ನಡ್ಡಾ

Updated on: Dec 10, 2020 | 7:33 PM

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಪಶ್ಚಿಮ ಬಂಗಾಳ ಪ್ರವಾಸದ ವೇಳೆ ಉಂಟಾದ ಭದ್ರತಾ ಲೋಪದ ಬಗ್ಗೆ ವರದಿ ನೀಡಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಮತ್ತೊಂದೆಡೆ ಈ ದಾಳಿ ಕುರಿತು ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿದೆ.

ಜೆ.ಪಿ .ನಡ್ಡಾ ನಾರ್ತ್​​ 24 ಪರಗಣಾಸ್​​ ಜಿಲ್ಲೆಗೆ ತೆರಳಿದ್ದ ವೇಳೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್​ ಕೇಂದ್ರ ಗೃಹ ಸಚಿವ ಅಮಿತ್​ ಶಾಗೆ ಪತ್ರ ಬರೆದಿದ್ದಾರೆ.

200ಕ್ಕೂ ಹೆಚ್ಚು ಜನರು ಕೋಲುಗಳನ್ನು ಹಿಡಿದುಕೊಂಡು ಜೆ.ಪಿ. ನಡ್ಡಾ ಕಾರಿನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಕಪ್ಪು ಬಾವುಟ ಹಾರಿಸಿದ್ದಾರೆ. ಈ ಉದ್ರಿಕ್ತ ಗುಂಪಿನವರು ಬಿಜೆಪಿ ಕಚೇರಿ ಹೊರ ಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಹತ್ತಿ ಹಾನಿ ಮಾಡಿದ್ದಾರೆ. ಆದರೆ, ಪೊಲೀಸರು ಇದನ್ನು ತಡೆಯಲು ಮುಂದಾಗಿಲ್ಲ. ಈ ಗುಂಪಿನವರನ್ನು ಜೆ.ಪಿ. ನಡ್ಡಾ ಕಾರಿನ ಬಳಿ ತೆರಳದಂತೆಯೂ ಪೊಲೀಸರು ತಡೆದಿಲ್ಲ. ಇದು ಗಂಭೀರವಾದ ಭದ್ರತಾ ಲೋಪ ಎಂದು ದಿಲೀಪ್​ ಘೋಷ್​ ಪತ್ರದಲ್ಲಿ ತಿಳಿಸಿದ್ದಾರೆ.

ಜೆ.ಪಿ. ನಡ್ಡಾ ಭೇಟಿ ವೇಳೆ ಸಾಕಷ್ಟು ಭದ್ರತಾ ಲೋಪ ಕಂಡು ಬಂದಿದೆ. ಪೊಲೀಸ್​ ಸಿಬ್ಬಂದಿ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ದಿಲೀಪ್​ ಘೋಷ್​ ಪತ್ರದಲ್ಲಿ ಆರೋಪಿಸಿದ್ದಾರೆ. ಈ ಪತ್ರ ದೊರೆತ ಬೆನ್ನಲ್ಲೇ ಈ ಬಗ್ಗೆ ವಿಸ್ತೃತ ವರದಿ ನೀಡುವಂತೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.

ಜೆ.ಪಿ. ನಡ್ಡಾ ಗುರುವಾರ (ಡಿ.10) ಚುನಾವಣಾ ಪ್ರಚಾರಕ್ಕೆ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಈ ವೇಳೆ ಅವರ ಕಾರಿನ ಮೇಲೆ ಕಲ್ಲುತೂರಾಟ ನಡೆದಿತ್ತು. ಇದನ್ನು ಬಿಜೆಪಿ ಖಂಡಿಸಿತ್ತು. ಅಲ್ಲದೆ, ಭಾರತೀಯ ರಾಜಕೀಯ ಇತಿಹಾಸದಲ್ಲೇ ಇದು ಕರಾಳ ದಿನ ಎಂದು ಹೇಳಿತ್ತು.

ಜೆ.ಪಿ.ನಡ್ಡಾ ಪ್ರವಾಸದ ವೇಳೆ ಬಿಜೆಪಿ ಮುಖಂಡರ ವಾಹನಗಳ ಮೇಲೆ ಕಲ್ಲು ತೂರಾಟ

 

Published On - 7:12 pm, Thu, 10 December 20

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us