ವಿಶ್ಲೇಷಣೆ: ವೇತನ ತಾರತಮ್ಯ; ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಸ್ಥಿತಿ

|

Updated on: Apr 06, 2024 | 7:51 PM

ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಲಿಂಗ ಆಧಾರಿತ ವೇತನದ ಅಂತರವನ್ನು ಕಾಣಬಹುದು.ಮಹಿಳೆಯರು ಸಾಮಾನ್ಯವಾಗಿ ಪುರುಷರಷ್ಟೇ ಕೆಲಸ ಮಾಡಿದರೂ ಅವರಿಗಿಂತ ಕಡಿಮೆ ಗಳಿಸುತ್ತಾರೆ. ಲಿಂಗ ಸಮಾನತೆಯ ಪ್ರಗತಿಗಳ ಹೊರತಾಗಿಯೂ, ಸಾಮಾಜಿಕ ನಿಯಮಗಳು, ತಾರತಮ್ಯ ಮತ್ತು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಸೀಮಿತ ಪ್ರವೇಶದಂತಹ ಅಂಶಗಳು ಈ ಅಸಮಾನತೆಗೆ ಕಾರಣವಾಗಿವೆ. ದೇಶದಲ್ಲಿನ ಲಿಂಗ ಆಧಾರಿತ ವೇತನ ಅಂತರದ ವಿಶ್ಲೇಷಣೆ ಇಲ್ಲಿದೆ.

ವಿಶ್ಲೇಷಣೆ: ವೇತನ ತಾರತಮ್ಯ; ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಸ್ಥಿತಿ
ಪ್ರಾತಿನಿಧಿಕ ಚಿತ್ರ
Follow us on

ಇತ್ತೀಚೆಗೆ DBS ಬ್ಯಾಂಕ್ ಇಂಡಿಯಾ ಸಹಯೋಗದೊಂದಿಗೆ CRISIL ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 23 ರಷ್ಟು ಸಂಬಳ ಪಡೆಯುವ ಮಹಿಳೆಯರು ಲಿಂಗ ಆಧಾರಿತ ವೇತನದ ಅಂತರ ಮತ್ತು 16 ಶೇಕಡಾ ಮಹಿಳೆಯರು ಭಾರತದಲ್ಲಿ ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮೆಟ್ರೋ ನಗರಗಳಲ್ಲಿ ಸಂಬಳ ಪಡೆಯುವ 42 ಪ್ರತಿಶತ ಮಹಿಳೆಯರು ಕೆಲಸಕ್ಕೆ ಸೇರುವ ಹೊತ್ತು ಸಂಬಳದ ಮಾತುಕತೆಯ ಸಮಯದಲ್ಲಿ ಸವಾಲುಗಳನ್ನು ಎದುರಿಸುತ್ತಾರೆ ಎಂದು ಸಮೀಕ್ಷೆ ಕಂಡು ಹಿಡಿದಿದೆ. ಆದಾಗ್ಯೂ, ಇಂಥಾ ಅನುಭವಗಳು ಭಾರತದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವೆ ಭಿನ್ನವಾಗಿರುತ್ತವೆ. ಎರಡು ಮೂರು ವರ್ಷಗಳ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಂಜಯ್ ಲೀಲಾ ಬನ್ಸಾಲಿ ಚಿತ್ರ ಬೈಜು ಬಾವ್ರಾದಲ್ಲಿ ಹೀರೋಗೆ ನೀಡುವಷ್ಟೇ ವೇತನ ತನಗೂ ನೀಡಬೇಕು ಎಂದು ಕೇಳಿದ್ದರಿಂದ ಆಕೆಯನ್ನು ಸಿನಿಮಾದಿಂದ ಕೈಬಿಡಲಾಗಿತ್ತು.  ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ, ಅದಕ್ಕಿಂತ ಜಾಸ್ತಿ ದುಡಿದರೂ ವೇತನ ಅವರಿಗಿಂತ ಕಡಿಮೆಯೇ.ಈ ಅಂತರವನ್ನು ಹೋಗಲಾಡಿಸಲು ಸಾಧ್ಯವೆ? ಭಾರತದಲ್ಲಿ ವೇತನ ತಾರತಮ್ಯದ ಮಟ್ಟ ಯಾವ ರೀತಿ ಇದೆ ಎಂಬುದರ ಬಗ್ಗೆ ಇಲ್ಲಿದೆ ವಿಶ್ಲೇಷಣೆ.

ಮಾರ್ಚ್ ತಿಂಗಳ ಆರಂಭದಲ್ಲಿ, ವಿಶ್ವಬ್ಯಾಂಕ್ ಗ್ರೂಪ್ ವರದಿಯು ಜಾಗತಿಕವಾಗಿ, ಪುರುಷರಿಗೆ 1 ಡಾಲರ್ ವೇತನವಾದರೆ ಅಲ್ಲಿ ಮಹಿಳೆಗೆ ಸಿಗುವುದು ಕೇವಲ 77 ಸೆಂಟ್ಸ್ ಎಂದು ಹೇಳಿದೆ. ಅಂದರೆ ಪುರುಷ ಮತ್ತು ಮಹಿಳೆಯ ವೇತನದಲ್ಲಿ 33 ಸೆಂಟ್ಸ್ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ” ವೇತನ ತಾರತಮ್ಯ”ದ ಉದಾಹರಣೆಯಾಗಿ ಈ ಹಿಂದೆ ಉಲ್ಲೇಖಿಸಲಾಗಿದೆ. ವಿವಿಧ ವರದಿಗಳಲ್ಲಿಯೂ ವಿವಿಧ ಅಂಕಿಅಂಶಗಳನ್ನು ಸಹ ನೀಡಲಾಗಿದೆ.  ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಲಿಂಗ ಆಧಾರಿತ ವೇತನದ ಅಂತರವನ್ನು ಮಹಿಳೆಯರು ಮತ್ತು ಪುರುಷರ ನಡುವಿನ ಅಸಮಾನತೆಯ “ಅಳೆಯಬಹುದಾದ ಸೂಚಕ” ಎಂದು ಹೇಳುತ್ತದೆ.

ವೇತನ ತಾರತಮ್ಯ: ಅಂತರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಪ್ರಕಾರ ವೇತನದ ಅಂತರವನ್ನು ಮಾಸಿಕ ಸಂಬಳ, ಗಂಟೆ ಅಥವಾ ದೈನಂದಿನ ವೇತನಕ್ಕಾಗಿ ಕಾರ್ಮಿಕ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರು ಮತ್ತು ಎಲ್ಲಾ ಪುರುಷರ ಸರಾಸರಿ ವೇತನ ಮಟ್ಟಗಳ ನಡುವಿನ ಅಂತರ ಎಂದು ವ್ಯಾಖ್ಯಾನಿಸಲಾಗಿದೆ. “ಈ ಅಂತರವು ಪುರುಷ ಮತ್ತು ಮಹಿಳೆಯ ನಡುವಿನ ವೇತನದ ಅಂತರವಲ್ಲ, ಒಟ್ಟಾರೆಯಾಗಿ, ವಿಧಾನದ ಕಾರಣದಿಂದಾಗಿ ಕೆಲವು ವ್ಯತ್ಯಾಸಗಳ ಹೊರತಾಗಿಯೂ, ಹೆಚ್ಚಿನ ದೇಶಗಳು ಮತ್ತು ಉದ್ಯಮಗಳಲ್ಲಿ ಕೆಲವು ರೀತಿಯ ವೇತನದ ಅಂತರವು ಅಸ್ತಿತ್ವದಲ್ಲಿದೆ” ಎಂದು ಇದು ಹೇಳುತ್ತದೆ. ಆದ್ದರಿಂದ, ಇದು “ಸಮಾನ ಕೆಲಸಕ್ಕೆ ಸಮಾನ ವೇತನ” ಎಂಬ ಪರಿಕಲ್ಪನೆಯಿಂದ ಭಿನ್ನವಾಗಿದೆ.
ಇದಲ್ಲದೆ, ಈ ಅಂತರವನ್ನು ಲೆಕ್ಕಾಚಾರ ಮಾಡಲು ಯಾವುದೇ ಒಪ್ಪಿತ ವಿಧಾನವಿಲ್ಲ. ಪ್ಯೂ ರಿಸರ್ಚ್ 2012 ರಲ್ಲಿ ಮಹಿಳೆಯರು ಅಮೆರಿಕದಲ್ಲಿ ಪುರುಷರು ಗಳಿಸಿದ ಶೇಕಡಾ 84 ರಷ್ಟು ಗಳಿಸಿದ್ದಾರೆ ಎಂದು ಕಂಡುಹಿಡಿದಿದೆ. ಆದರೆ ಯುಎಸ್ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಮಹಿಳೆಯರು 1 ಡಾಲರ್‌ಗೆ 81 ಸೆಂಟ್ ಗಳಿಸಿದ್ದಾರೆ ಎಂದು ವರದಿ ಮಾಡಿದೆ.

ಏಕೆ ಈ ಅಂತರ?

ಈ ಅಂತರವನ್ನು ಲೆಕ್ಕಾಚಾರ ಮಾಡಲು ಪ್ಯೂ ಗಂಟೆಯ ವೇತನವನ್ನು ಬಳಸಿದ್ದರೆ, ಲೇಬರ್ ಬ್ಯೂರೋ ವಾರದ ವೇತನವನ್ನು ಬಳಸಿದ್ದು, ಪೂರ್ಣ ಸಮಯದ ಕೆಲಸಗಾರರನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ (ಸಾಮಾನ್ಯವಾಗಿ ವಾರಕ್ಕೆ ಕನಿಷ್ಠ 35 ಗಂಟೆಗಳ ಕಾಲ ಕೆಲಸ ಮಾಡುವವರು). ಒಟ್ಟಾರೆಯಾಗಿ, ವಿಧಾನದ ಕಾರಣದಿಂದಾಗಿ ಕೆಲವು ವ್ಯತ್ಯಾಸಗಳ ಹೊರತಾಗಿಯೂ, ಹೆಚ್ಚಿನ ದೇಶಗಳು ಮತ್ತು ಉದ್ಯಮಗಳಲ್ಲಿ ಕೆಲವು ರೀತಿಯ ಲಿಂಗಾಧಾರಿತ ವೇತನದ ಅಂತರವು ಅಸ್ತಿತ್ವದಲ್ಲಿದೆ.

ಯಾವ ಯಾವ ವರ್ಗದಲ್ಲಿ ಯಾವ ರೀತಿ ಇದೆ ಅಂತರ?

ವೇತನದ ಅಂತರವನ್ನು ಯಾವ ರೀತಿ ವಿವರಿಸಬಹುದು?

ಮೊದಲನೆಯದು, ಪಾತ್ರಗಳ ಕುರಿತಾದ ಕಲ್ಪನೆಗಳ ಕಾರಣದಿಂದಾಗಿ ಮಹಿಳೆಯರು ಪುರುಷರಂತೆ ಪಾವತಿಸುವ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿಲ್ಲ. ಕಾರ್ಮಿಕ ವರ್ಗದಲ್ಲಿನ ಭಾಗವಹಿಸುವಿಕೆ ದರವು ಇದರ ಬಗ್ಗೆ ಒಂದು ಕಲ್ಪನೆಯನ್ನು ನೀಡುತ್ತದೆ. ಇದು ಕೆಲಸ ಹುಡುಕುತ್ತಿರುವ ಅಥವಾ ಈಗಾಗಲೇ ಕೆಲಸ ಮಾಡುತ್ತಿರುವ ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಜನರ ಸಂಖ್ಯೆಯನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದರೆ ಸಿಗುವ ಮೊತ್ತವಾಗಿದೆ. ಐಎಲ್​​​ಒ ಪ್ರಕಾರ, ಪ್ರಸ್ತುತ ಜಾಗತಿಕ ಕಾರ್ಮಿಕ ವರ್ಗದ ಭಾಗವಹಿಸುವಿಕೆಯಲ್ಲಿ ಮಹಿಳೆಯರ ಪ್ರಮಾಣವು ಕೇವಲ 47% ಕ್ಕಿಂತ ಕಡಿಮೆಯಾಗಿದೆ. ಅದೇ ವೇಳೆ ಪುರುಷರದ್ದು 72%. ಭಾರತದಲ್ಲಿ, 2011 ರ ಜನಗಣತಿಯ ಪ್ರಕಾರ, ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆಯ ಪ್ರಮಾಣವು 25.51% ಮತ್ತು ಪುರುಷರದ್ದು 53.26% ಆಗಿದೆ.

ಎರಡನೆಯ ಅಂಶವೆಂದರೆ, ಮಹಿಳೆಯರು ಉದ್ಯೋಗಗಳಿಗೆ ಸೇರಿದ ನಂತರ ಯಾವ ರೀತಿಯ ಉದ್ಯೋಗಗಳನ್ನು ಮಾಡುತ್ತಾರೆ ಎಂಬುದು.
ಐಎಲ್ಒ ವುಮೆನ್ ಇನ್ ಬಿಸಿನೆಸ್ ಅಂಡ್ ಮ್ಯಾನೇಜ್‌ಮೆಂಟ್ ವರದಿಯು “ಪುರುಷರಿಗಿಂತ ಕಡಿಮೆ ಮಹಿಳೆಯರು ಮ್ಯಾನೇಜ್‌ಮೆಂಟ್ ಮತ್ತು ನಾಯಕತ್ವದ ಸ್ಥಾನಗಳಲ್ಲಿದ್ದಾರೆ, ವಿಶೇಷವಾಗಿ ಉನ್ನತ ಮಟ್ಟದಲ್ಲಿದ್ದಾರೆ. ಮಹಿಳೆಯರು ನಿರ್ವಾಹಕರಾದಾಗ, ಅವರು ಹೆಚ್ಚು ಕಾರ್ಯತಂತ್ರದ ಪಾತ್ರಗಳಿಗಿಂತ ಮಾನವ ಸಂಪನ್ಮೂಲ ಮತ್ತು ಆರ್ಥಿಕ ಆಡಳಿತದಂತಹ ನಿರ್ವಹಣಾ ಬೆಂಬಲ ಕಾರ್ಯಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿರುತ್ತಾರೆ. ಇದು ಪುರುಷ ಮ್ಯಾನೇಜರ್‌ಗಳಿಗೆ ಹೋಲಿಸಿದರೆ ಮಹಿಳಾ ವ್ಯವಸ್ಥಾಪಕರ ಸರಾಸರಿ ವೇತನವನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತದೆ.

ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದ 2013 ರ ಸಮೀಕ್ಷೆಯು ಟಾಪ್ 10 ಹೆಚ್ಚು ಲಾಭದಾಯಕ ವೃತ್ತಿಗಳು ಅದರಲ್ಲೂ ಹೆಚ್ಚಾಗಿ ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್‌ನಲ್ಲಿ ಪುರುಷರ ಪ್ರಾಬಲ್ಯ ಹೆಚ್ಚು ಎಂದು ಹೇಳುತ್ತದೆ. ಆದರೆ 10 ಕಡಿಮೆ ಸಂಭಾವನೆ ನೀಡುವ ವೃತ್ತಿಗಳು ಎಂದು ಪರಿಗಣಿಸಲ್ಪಟ್ಟಿರುವ ಕಲೆ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಪ್ರಾಬಲ್ಯ ಹೊಂದಿದ್ದಾರೆ. ಇದಲ್ಲದೆ, 73 ದೇಶಗಳಲ್ಲಿ (2018 ರ ಡೇಟಾದ ಆಧಾರದ ಮೇಲೆ), ಅರೆಕಾಲಿಕ ಕೆಲಸಗಾರರಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. “ಪೂರ್ಣ ಸಮಯದ ಉದ್ಯೋಗಕ್ಕಾಗಿ ಮಹಿಳೆಯರ ಅವಕಾಶಗಳು ಪುರುಷರಿಗಿಂತ ಹೆಚ್ಚು ಸೀಮಿತವಾಗಿರಬಹುದು. ಇದರ ಪರಿಣಾಮವಾಗಿ ಮಹಿಳೆಯರು ಅರೆಕಾಲಿಕ ಉದ್ಯೋಗವನ್ನು ತೆಗೆದುಕೊಳ್ಳುತ್ತಾರೆ. ಅರೆಕಾಲಿಕ ಕೆಲಸವು ಯಾವಾಗಲೂ ಪೂರ್ಣ ಸಮಯದ ಕೆಲಸಕ್ಕೆ ಅನುಗುಣವಾಗಿ ಪ್ರಯೋಜನಗಳನ್ನು ಒದಗಿಸುವುದಿಲ್ಲ, ಇದು ಕಾಲಾನಂತರದಲ್ಲಿ ಸಂಭಾವನೆಯ ಪ್ಯಾಕೇಜ್‌ನ ಮೇಲೆ ಪರಿಣಾಮ ಬೀರಬಹುದು” ಎಂದು ಐಎಲ್ಒ ಹೇಳುತ್ತದೆ.

ವಯಸ್ಸಿನ ಆಧಾರದ ಮೇಲೆ ಉದ್ಯೋಗದ ಡೇಟಾವನ್ನು ನೋಡಿದಾಗ ಮಹಿಳೆಯರು ತಮ್ಮ 30 ಮತ್ತು 40 ರ ದಶಕದ ಮಧ್ಯಭಾಗವನ್ನು ತಲುಪಿದಾಗ, ಅದೇ ಸ್ಥಾನ ಮತ್ತು ವೃತ್ತಿಯಲ್ಲಿರುವ ಪುರುಷರಿಗೆ ಹೋಲಿಸಿದರೆ ಅವರ ಗಳಿಕೆಯು ಕುಸಿಯುತ್ತದೆ. 77 ಪ್ರತಿಶತ ಅಂಕಿಅಂಶವು ಮತ್ತೊಂದು ಆಸಕ್ತಿದಾಯಕ ಡೇಟಾವನ್ನು ಮರೆಮಾಡುತ್ತದೆ ಎಂದು ಕೆಲವು ವಿಮರ್ಶಕರು ಹೇಳುತ್ತಾರೆ. ಅದೇನೆಂದರೆ ಮದುವೆಯಾಗದ ಮಹಿಳೆಯರು ಪುರುಷ ಮಾಡುವ ಪ್ರತಿ ಡಾಲರ್‌ಗೆ 95 ಸೆಂಟ್ಸ್ ಅಥವಾ ಅದಕ್ಕಿಂತ ಹೆಚ್ಚಿನದನ್ನು ಗಳಿಸುತ್ತಾರೆ. ಇದನ್ನೇ ” motherhood penalty ” ಎಂದು ಕರೆಯಲಾಗುತ್ತದೆ. ಅಂದರೆ ಮಹಿಳೆಯರು ಮಕ್ಕಳನ್ನು ಹೊಂದಲು ಮತ್ತು ಕಾಳಜಿ ವಹಿಸಲು ವಿರಾಮಗಳನ್ನು ತೆಗೆದುಕೊಳ್ಳುವಾಗ ಅವರ ವೃತ್ತಿ ಬೆಳವಣಿಗೆಯು ಕುಸಿಯುತ್ತದೆ.

ಕಾರ್ಮಿಕ ಅರ್ಥಶಾಸ್ತ್ರಜ್ಞೆ, 2023ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಕ್ಲೌಡಿಯಾ ಗೋಲ್ಡಿನ್‌ ಅವರು ವೇತನ ಸಮಾನತೆಯ ವಿಷಯದ ಬಗ್ಗೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಈಕೆ ಕಳೆದ 200 ವರ್ಷಗಳಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಸ್ಥಿತಿ ಗತಿಗಳನ್ನು ಅಧ್ಯಯನ ಮಾಡಿದ್ದಾರೆ. ಕೆಲಸಕ್ಕೆ ಹೋಗದೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಹೆಂಗಸು ಮಾತ್ರವಲ್ಲ, ಮಗು ಇಡುವ ಹೆಜ್ಜೆಗಳನ್ನು ಸಂಭ್ರಮಿಸಲಾಗದೆ ಹೊರಗೆ ಮೆರೆಯುವ ಪುರುಷ ಕೂಡಾ ಏನೋ ಕಳೆದುಕೊಳ್ಳುತ್ತಿರುತ್ತಾನೆ ಅಂತಾರೆ ಕ್ಲೌಡಿಯಾ.

ಕಾರ್ಮಿಕರಲ್ಲಿನ ಅಂತರ

ಭಾರತದಲ್ಲಿ ಹೇಗಿದೆ ಸ್ಥಿತಿ?

ಕೋವಿಡ್-19 ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳು ವಿಶ್ವದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಸಾಮಾಜಿಕ-ಆರ್ಥಿಕ ಅಸಮಾನತೆಗಳು ಮತ್ತು ಮಾನಸಿಕ ಒತ್ತಡಗಳನ್ನೂ ಹೆಚ್ಚಿಸಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಯ ಅಂಕಿಅಂಶಗಳ ಪ್ರಕಾರ, 27% ಪುರುಷರಿಗೆ ಹೋಲಿಸಿದರೆ 37% ಮಹಿಳೆಯರು ಏಪ್ರಿಲ್ 2020 ಮತ್ತು ಏಪ್ರಿಲ್ 2021 ರ ನಡುವೆ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಮಹಿಳೆಯರ ಉದ್ಯೋಗ ಚೇತರಿಕೆಯು ನಿಧಾನವಾಗಿದೆ ಎಂದು ಗಮನಿಸಲಾಗಿದೆ.

CMIE ಯ ಅಂಕಿಅಂಶಗಳ ಪ್ರಕಾರ, ಜನವರಿ 2022, ಮಹಿಳೆಯರು ಉದ್ಯೋಗದಲ್ಲಿ ಭಾಗವಹಿಸುವಿಕೆಯು ಜನವರಿ 2020 ಕ್ಕಿಂತ 9.4% ಕಡಿಮೆಯಾಗಿದೆ.ಅದೇ ವೇಳೆ ಪುರುಷರದ್ದು 1.6%. ಉದ್ಯೋಗಸ್ಥ ಗ್ರಾಮೀಣ ಮಹಿಳೆಯರ ಸಂಖ್ಯೆಯು ಕಡಿದಾದ ಆರಂಭಿಕ ಕುಸಿತವನ್ನು ಅನುಭವಿಸಿದೆ, ಮಾರ್ಚ್ 2020 ರಲ್ಲಿ 29.8 ಮಿಲಿಯನ್‌ನಿಂದ ಏಪ್ರಿಲ್ 2020 ರಲ್ಲಿ 17.8 ಮಿಲಿಯನ್‌ಗೆ ಇದು ಕುಸಿದಿದೆ. ಗ್ರಾಮೀಣ ಪುರುಷರಿಗೆ 40.2% ರಷ್ಟು ಇದ್ದರೆ ಮಹಿಳೆಯರು 25.5%. ಏತನ್ಮಧ್ಯೆ, ನಗರ ಪ್ರದೇಶದ ಮಹಿಳಾ ಉದ್ಯೋಗವು ಮಾರ್ಚ್ 2020 ರಲ್ಲಿ 11.8 ಮಿಲಿಯನ್‌ನಿಂದ ಏಪ್ರಿಲ್ 2020 ರಲ್ಲಿ 8.3 ಮಿಲಿಯನ್‌ಗೆ ಇಳಿದಿದೆ. ಅಂದರೆ 32.4% ಪುರುಷರಿಗೆ ಹೋಲಿಸಿದರೆ ಮಹಿಳೆಯರದ್ದು 29.2%.

ಸಾಂಕ್ರಾಮಿಕ ರೋಗದ ನಂತರ ತಂತ್ರಜ್ಞಾನ, ಆರೋಗ್ಯ ಮತ್ತು ಹಣಕಾಸು ಸೇವಾ ಕ್ಷೇತ್ರಗಳಲ್ಲಿ ಲಿಂಗ ವೇತನದ ಅಸಮಾನತೆ ಹೆಚ್ಚಾಗಿದೆ. ಲಿಂಗ ವೇತನದ ಅಂತರವನ್ನು ಕಡಿಮೆ ಮಾಡಲು ವರ್ಷಗಳಲ್ಲಿ ಮಾಡಿದ ಪ್ರಯತ್ನಗಳ ಹೊರತಾಗಿಯೂ, 2018-29 ರಲ್ಲಿ ಭಾರತದಲ್ಲಿ ಮಹಿಳೆಯರು ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ 28% ಕಡಿಮೆ ಗಳಿಸುತ್ತಾರೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ತಿಳಿಸಿದೆ. 1993-94ರಲ್ಲಿ ಈ ಅಂತರ 48% ಇತ್ತು. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಅಂದಾಜಿನ ಪ್ರಕಾರ ಮಹಿಳೆಯರು ವಿಶ್ವಾದ್ಯಂತ ಪುರುಷರಿಗಿಂತ 20% ಕಡಿಮೆ ಗಳಿಸುತ್ತಿದ್ದಾರೆ.

ವೇತನದಲ್ಲಿನ ವ್ಯತ್ಯಾಸ ಮತ್ತು ಪ್ರಗತಿಯು ಮಹಿಳೆಯ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಡೇಟಾ ತೋರಿಸುತ್ತದೆ.  ಭಾರತದಲ್ಲಿ ಲಿಂಗ ಆಧಾರಿತ ವೇತನದ ಅಂತರಕ್ಕೆ ಸಾಮಾನ್ಯ ಕಾರಣಗಳೆಂದರೆ ಸಂಬಳವಿಲ್ಲದೆ ಮನೆಕೆಲಸದ ಹೊರೆ, ಉಲ್ಬಣಗೊಂಡ ಲಿಂಗ ಆಧಾರಿತ ಕೌಶಲ್ಯ ಮತ್ತು ಶೈಕ್ಷಣಿಕ ಅಂತರಗಳು, ಡಿಜಿಟಲ್ ಅನಕ್ಷರತೆ, ಪ್ರಯಾಣದ ನಿರ್ಬಂಧಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸಾಂಸ್ಥಿಕ ಬೆಂಬಲದ ಕೊರತೆ ಎಂದು ದಿ ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರಿ ಹೊಂದಿಸಲು ಸಾಧ್ಯವೆ? ಅದಕ್ಕೇನು ಮಾಡಬೇಕು?

ಮೊದಲನೆಯದಾಗಿ, ನೀತಿ ನಿರೂಪಕರು ಸಮಾನ ವೇತನ ನೀತಿಗಳು, ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳು, ಮಹಿಳೆಯರಿಗೆ ತರಬೇತಿ ಮತ್ತು ಅಭಿವೃದ್ಧಿ ಅವಕಾಶಗಳನ್ನು ಒದಗಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸಬೇಕು. ಸರ್ಕಾರವು ಮಹಿಳೆಯರಿಗೆ ಸೇವೆ ಸಲ್ಲಿಸುವ ಉದ್ಯೋಗಗಳನ್ನು ಸೃಷ್ಟಿಸಬಹುದು. ಸಣ್ಣ, ಮಧ್ಯಮ ಉದ್ಯಮಗಳಲ್ಲಿ ತಮ್ಮ ಪಾತ್ರವನ್ನು ವಿಸ್ತರಿಸಬಹುದು ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಬಹುದು. ನಾಯಕತ್ವದ ಜವಾಬ್ದಾರಿಯನ್ನೂ ಮಹಿಳೆಗೆ ನೀಡಬೇಕು.

Published On - 2:37 pm, Sat, 6 April 24