ತಮಿಳುನಾಡು ಸರ್ಕಾರದ ಬಳಿಕ ಇದೀಗ ಆಂಧ್ರ ಪ್ರದೇಶದಲ್ಲೂ ಆನ್ಲೈನ್ ಜೂಜಿನ ವಿರುದ್ಧ ಮಸೂದೆ ಅಂಗೀಕಾರವಾಗಿದೆ. ಆಂಧ್ರ ಪ್ರದೇಶ ಗೇಮಿಂಗ್ ಬಿಲ್ 2020ಯನ್ನು ಜಾರಿಗೊಳಿಸಲು ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.
ಈ ಹಿಂದೆ ಆಂಧ್ರದಲ್ಲಿ, ಆನ್ಲೈನ್ ಜೂಜಿನ ಸಾಲ ತೀರಿಸಲಾಗದೆ ಕೆಲವು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಗಳ ಬೆನ್ನಲ್ಲೇ ಸರ್ಕಾರ ಆನ್ಲೈನ್ ಜೂಜಾಟಗಳಿಗೆ ನಿರ್ಬಂಧ ಹೇರುವ ಮನಮಾಡಿದೆ.
ಕರ್ನಾಟಕದಲ್ಲಿ ಯಾವಾಗ?
ಆನ್ಲೈನ್ ಜೂಜಾಟಗಳನ್ನು ಬ್ಯಾನ್ ಮಾಡುವ ಬಗ್ಗೆ ಕರ್ನಾಟಕ ಸರ್ಕಾರವು ಹೇಳಿಕೆ ನೀಡುತ್ತಲೇ ಬಂದಿದ್ದು, ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೂಜಿನಲ್ಲಿ ಪಾಲ್ಗೊಳ್ಳುವ ಯುವಕರಿಂದ ಅವರ ಮನೆಯವರೂ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಮಿಳುನಾಡು, ಆಂಧ್ರದ ಬಳಿಕ ಕರ್ನಾಟಕದಲ್ಲೂ ಆನ್ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಮಸೂದೆ ರಚಿಸಬೇಕು ಎಂಬ ಕೂಗು ಜೋರಾಗುತ್ತಿದೆ.
ಇದನ್ನೂ ಓದಿ: ಆನ್ಲೈನ್ ಗ್ಯಾಂಬ್ಲಿಂಗ್ ಚಟದಿಂದ ಹೊರಬರಲು ಇದು ಸಕಾಲ..
ಸರ್ಕಾರ ಪಾರದರ್ಶಿಕವಾಗಿ ವ್ಯವಹರಿಸಲಿದೆ
ಮಸೂದೆಯ ಬಗ್ಗೆ ಮಾತನಾಡಿದ ಆಂಧ್ರ ಸಿಎಂ ವೈ.ಎಸ್. ಜಗನ್ಮೋಹನ್ ರೆಡ್ಡಿ, ಆನ್ಲೈನ್ ಜೂಜಿನಲ್ಲಿ ತೊಡಗಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅವರ ಸಾಮಾಜಿಕ ಸ್ಥಾನಮಾನಗಳನ್ನು ಬದಿಗಿರಿಸಿ ವ್ಯವಹರಿಸಲಾಗುವುದು. ಈ ವಿಚಾರದಲ್ಲಿ ಸರ್ಕಾರ ಪಾರದರ್ಶಿಕವಾಗಿ ವ್ಯವಹರಿಸಲಿದೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ಮಂತ್ರಿಯೊಬ್ಬರ ದೂರ ಸಂಬಂಧಿ ಆನ್ಲೈನ್ ಜೂಜಿನಲ್ಲಿ ತೊಡಗಿಕೊಂಡಿದ್ದು ತಿಳಿದುಬಂದಿತ್ತು. ಅವರ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಆನ್ಲೈನ್ ಆಟಗಳಿಂದಾಗಿ ವಂಚನೆ, ಕಳ್ಳತನ ಮುಂತಾದ ಅಪರಾಧ ಕೃತ್ಯಗಳೂ ಹೆಚ್ಚುತ್ತವೆ ಎಂದು ಆಂಧ್ರ ಗೃಹ ಸಚಿವೆ ಎಮ್. ಸುಚರಿತಾ ಅಭಿಪ್ರಾಯಪಟ್ಟಿದ್ದಾರೆ.
ಅಪರಾಧಿಗಳಿಗೆ ಏನು ಶಿಕ್ಷೆ
ಅಪರಾಧಿಗಳಿಗೆ 5 ಸಾವಿರ ದಂಡ ಮತ್ತು ಒಂದು ವರ್ಷದ ಜೈಲು ಶಿಕ್ಷೆಯನ್ನು ನಿಗಧಿಪಡಿಸಲಾಗಿದ್ದು, ಅಪರಾಧ ಮರುಕಳಿಸಿದರೆ ಅಂಥವರಿಗೆ 10 ಸಾವಿರ ದಂಡ ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ. ಜಾಮೀನು ರಹಿತ ಶಿಕ್ಷೆ ಇದಾಗಿದೆ.
ಆನ್ಲೈನ್ ಗ್ಯಾಬ್ಲಿಂಗ್ ಜಾಹಿರಾತು: ನಟ ಸುದೀಪ್ಗೆ ಮದ್ರಾಸ್ ಹೈಕೋರ್ಟ್ನಿಂದ ನೋಟಿಸ್
ಇದನ್ನೂ ಓದಿ: OTT Platforms ‘ಮುಚ್ಚುಮರೆ ಇಲ್ಲದ’ ಆನ್ಲೈನ್ ವೇದಿಕೆಗಳಿಗೆ ಮೂಗುದಾರ ಹಾಕಬೇಕಾ?!
Published On - 11:14 am, Wed, 2 December 20