ಸುಟ್ಟು ಕರಕಲಾದ ಬಸ್
ಕರ್ನೂಲ್, ಅಕ್ಟೋಬರ್ 24: ಕರ್ನೂಲ್ನಲ್ಲಿ ಬೆಂಕಿಗಾಹುತಿಯಾದ ಕಾವೇರಿ ಟ್ರಾವೆಲ್ಸ್ಗೆ ಸೇರಿದ ವೋಲ್ವೋ ಬಸ್(
Volvo Bus) ವಿರುದ್ಧ ಸಾಕಷ್ಟು ದೂರುಗಳಿದ್ದವು. ಅತಿವೇಗ, ಅಪಾಯಕಾರಿ ಚಾಲನೆಗಾಗಿ 23 ಸಾವಿರ ದಂಡವೂ ಬಿದ್ದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಹೈದರಾಬಾದ್ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಕರ್ನೂಲ್ ಬಳಿ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ನಿಲ್ಲಿಸದೆ ಮುಂದೆ ಸಾಗಿದ ಪರಿಣಾಮ ಬೈಕ್ನಿಂದಾಗಿ ಬೆಂಕಿ ತಗುಲಿತ್ತು.
ಬಸ್ ಸುಟ್ಟು ಕರಕಲಾಗಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಅಪಘಾತಕ್ಕೆ ಕಾರಣವಾದ ಖಾಸಗಿ ಬಸ್ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನೋಂದಣಿಯಾಗಿದ್ದು, ತೆಲಂಗಾಣದಲ್ಲಿ ಅಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ವಾಹನದ ಫಿಟ್‌ನೆಸ್ ಮತ್ತು ಪರ್ಮಿಟ್‌ಗೆ ಸಂಬಂಧಿಸಿದ ಸಮಸ್ಯೆಗಳು ಒಡಿಶಾದ ವ್ಯಾಪ್ತಿಗೆ ಬರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಬಸ್ ತೆಲಂಗಾಣದಲ್ಲಿ ಅತಿ ವೇಗ, ತಪ್ಪು ಬದಿಯ ಚಾಲನೆ, ಅಪಾಯಕಾರಿ ಚಾಲನೆಗಾಗಿ ಸುಮಾರು 23,000 ರೂ.ಗಳ ಬಹು ಇ-ಚಲನ್‌ಗಳನ್ನು ನೀಡಲಾಗಿತ್ತು ಎಂಬುದು ದಾಖಲೆಗಳಿಂದ ತಿಳಿದುಬಂದಿದೆ. ಈ ಕುರಿತು ಇಂಡಿಯಾ ಟುಡೆ ಮಾಹಿತಿ ಪ್ರಕಟಿಸಿದೆ. ಹನ್ನೆರಡು ಪ್ರಯಾಣಿಕರು ತುರ್ತು ನಿರ್ಗಮನದ ಮೂಲಕ ಪಾರಾಗಿದ್ದಾರೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ ಬಸ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಬೆಂಕಿ ಎಷ್ಟು ಬೇಗನೆ ಹರಡಿತೆಂದರೆ, ಹೆಚ್ಚಿನ ಪ್ರಯಾಣಿಕರು ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮೊದಲೇ ಬೆಂಕಿಯಲ್ಲಿ ಬೆಂದುಹೋದರು. ಕೆಲವರು ಸುಟ್ಟಗಾಯಗಳೊಂದಿಗೆ ಸಾವನ್ನಪ್ಪಿದ್ದಾರೆ, ಇನ್ನು ಕೆಲವರು ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ಇದೆ.