ಸಿನಿಮಾದಲ್ಲಿ ಪ್ರಾಣಿ ಬಳಕೆ ಮಾಡುವುದು ಇನ್ಮುಂದೆ ಕಷ್ಟ.. ಸಿಕ್ಕಾಪಟ್ಟೆ ಶುಲ್ಕ ವಿಧಿಸಿದ ಭಾರತೀಯ ಪಶು ಕಲ್ಯಾಣ ಮಂಡಳಿ

|

Updated on: Dec 24, 2020 | 7:18 PM

ಚಿತ್ರೀಕರಣಕ್ಕೂ ಮುನ್ನ ಅನುಮತಿ ಪತ್ರ ಪಡೆಯಲು ಈ ಮೊದಲು ಶುಲ್ಕ ಇರಲಿಲ್ಲ. ಆದರೆ ಈಗ ಒಮ್ಮೆಲೆ ₹ 25 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಚಿತ್ರೀಕರಣ ಆರಂಭಿಸುವ ಮೊದಲು ಅನುಮತಿ ಪಡೆಯದೆ, ಕೊನೆಯಲ್ಲಿ ನೇರವಾಗಿ ಕ್ಲಿಯರೆನ್ಸ್ ಪಡೆಯುವುದಾದರೆ ₹ 30 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ.

ಸಿನಿಮಾದಲ್ಲಿ ಪ್ರಾಣಿ ಬಳಕೆ ಮಾಡುವುದು ಇನ್ಮುಂದೆ ಕಷ್ಟ.. ಸಿಕ್ಕಾಪಟ್ಟೆ ಶುಲ್ಕ ವಿಧಿಸಿದ ಭಾರತೀಯ ಪಶು ಕಲ್ಯಾಣ ಮಂಡಳಿ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾ ನಿಮಿತ್ತ ಬಹುತೇಕ ಸ್ತಬ್ಧಗೊಂಡು ಈಗ ಚಿಗುರುವ ಹಂತಕ್ಕೆ ಬಂದಿದ್ದ ಚಿತ್ರರಂಗಕ್ಕೆ ಹೊಸ ಆಘಾತ ಎದುರಾಗಿದೆ. ಭಾರತೀಯ ಪಶು ಕಲ್ಯಾಣ ಮಂಡಳಿ ಹೊಸದಾಗಿ ಚಿತ್ರೀಕರಣ ಮಾಡುವವರಿಗೆ ಶಾಕ್​ ನೀಡಿದೆ. ಹೊಸ ನಿಯಮದ ಪ್ರಕಾರ ಚಿತ್ರೀಕರಣ ವೇಳೆ ಪ್ರಾಣಿಗಳನ್ನು ಬಳಸಿಕೊಳ್ಳಲು ತೆಗೆದುಕೊಳ್ಳಬೇಕಾದ ಅನುಮತಿ ಪತ್ರಕ್ಕೆ ದೊಡ್ಡ ಮೊತ್ತವನ್ನು ವ್ಯಯಿಸಬೇಕಾಗಿದ್ದು ಇದು ಸಿನಿಮಾ ತಂಡಕ್ಕೆ ಹೊರೆಯಾಗಲಿದೆ.

ಪ್ರಾಣಿಹಿಂಸೆ ತಡೆಗಟ್ಟುವ ಸಲುವಾಗಿ 1962ರಲ್ಲಿ ಸ್ಥಾಪನೆಯಾದ ಭಾರತೀಯ ಪಶು ಕಲ್ಯಾಣ ಮಂಡಳಿ ಪ್ರಸ್ತುತ ಕೇಂದ್ರ ಸರ್ಕಾರದ ಮೀನುಗಾರಿಕೆ ಹಾಗೂ ಪಶುಸಂಗೋಪನಾ ಮತ್ತು ಹೈನುಗಾರಿಕೆ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸದರಿ ಮಂಡಳಿಯು ಈ ಬಾರಿಯ 50ನೇ ವಾರ್ಷಿಕ ಸಭೆಯಲ್ಲಿ ತನ್ನ ಕೆಲ ನಿಯಮಾವಳಿಗೆ ಸಂಬಂಧಿಸಿದಂತೆ ಶುಲ್ಕ ಪರಿಷ್ಕರಣೆ ಮಾಡುವ ಕುರಿತು ಪ್ರಸ್ತಾಪಿಸಿತ್ತು. ಇದೀಗ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು ಶುಲ್ಕ ಪರಿಷ್ಕರಣಾ ಪಟ್ಟಿ ಪ್ರಕಟವಾಗಿದೆ.

ಪರಿಷ್ಕೃತ ಪಟ್ಟಿಯಲ್ಲಿ ಬಹುಮುಖ್ಯವಾಗಿ ಸಿನಿಮಾ ಚಿತ್ರೀಕರಣದ ವೇಳೆ ಪ್ರಾಣಿ ಬಳಕೆ ಮಾಡಲು ದೊಡ್ಡ ಮೊತ್ತದ ಶುಲ್ಕ ನಿಗದಿ ಮಾಡಲಾಗಿದೆ. ಚಿತ್ರೀಕರಣಕ್ಕೂ ಮುನ್ನ ಅನುಮತಿ ಪತ್ರ ಪಡೆಯಲು ಈ ಮೊದಲು ಶುಲ್ಕ ಇರಲಿಲ್ಲ. ಆದರೆ ಈಗ ಒಮ್ಮೆಲೆ ₹ 25 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಚಿತ್ರೀಕರಣ ಆರಂಭಿಸುವ ಮೊದಲು ಅನುಮತಿ ಪಡೆಯದೆ, ಕೊನೆಯಲ್ಲಿ ನೇರವಾಗಿ ಕ್ಲಿಯರೆನ್ಸ್ ಪಡೆಯುವುದಾದರೆ ₹ 30 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ.

ಇಷ್ಟೇ ಅಲ್ಲದೇ ಪ್ರಾಣಿಗಳನ್ನು ನೋಂದಣಿ ಮಾಡಿಸಲು, ಕುದುರೆ ರೇಸ್​ ನಡೆಸಲು, ಪಶು ಕಲ್ಯಾಣ ಅಧಿಕಾರಿಗಳಾಗಿ ಅನುಮತಿ ಪಡೆಯಲು ಸಹ ಶುಲ್ಕ ಪರಿಷ್ಕರಣೆಯ ಬಿಸಿ ತಾಗಲಿದೆ. ಶುಲ್ಕ ಪರಿಷ್ಕರಣೆಯು ಈ ತಿಂಗಳಿನಿಂದಲೇ ಜಾರಿಗೆ ಬಂದಿದ್ದು ಸಿನಿಮಾ ತಂಡದವರಿಗೆ ಮಾತ್ರ ಎಲ್ಲರಿಗಿಂತ ದೊಡ್ಡ ಮಟ್ಟದ ಹೊಡೆತ ತಾಗಿದೆ.


ಉಸಿರುಗಟ್ಟಿಸುವಷ್ಟು ಏರಿಕೆ: ಚಿತ್ರರಂಗದ ಆಕ್ಷೇಪ
ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸುವುದಕ್ಕೆ ತೆಗೆದುಕೊಳ್ಳುವ NOC ಶುಲ್ಕವನ್ನು ₹ 500ರಿಂದ ₹ 30 ಸಾವಿರಕ್ಕೆ, ಅಂದರೆ 60 ಪಟ್ಟು ಹೆಚ್ಚಿಸಲಾಗಿದೆ. ಅರ್ಜಿ ಸಲ್ಲಿಸಲು ₹ 1100 ಇದ್ದದ್ದು ₹ 5000 ಆಗಿದೆ. ನಾಯಿ, ಹಸು, ಇತರೆ ಯಾವುದೇ ಪ್ರಾಣಿಗಳ ಪರ್ಫಾರ್ಮಿಂಗ್ ಅನಿಮಲ್ ಚಾರ್ಜಸ್ ₹ 500 ಇದ್ದದ್ದು ₹ 5,000 ಆಗಿದೆ ಇದು ಸಿನಿಮಾ ತಂಡಕ್ಕೆ ಭಾರೀ ಹೊಡೆತ ಎನ್ನುತ್ತಾರೆ ಸಿನಿಮಾ ಬರಹಗಾರ ಮತ್ತು ತಂತ್ರಜ್ಞ ವೀರೇಂದ್ರ ಮಲ್ಲಣ್ಣ.

ಪ್ರಾಣಿ ಕಲ್ಯಾಣ ಮಂಡಳಿಯಿಂದ ಅನುಮತಿ ಪಡೆಯದೇ, ಚಿತ್ರೀಕರಣ ಮುಗಿದ ನಂತರ ಕ್ಲಿಯರೆನ್ಸ್​ ಸರ್ಟಿಫಿಕೇಟ್ ಪಡೆಯಲು ಹೋದರೆ ಸಮಸ್ಯೆಗಳೇ ಹೆಚ್ಚಾಗುವ ಸಂಭವವಿದೆ. ಪ್ರಯಾಣ ವೆಚ್ಚ ಸೇರಿ ಈ ಮೊದಲು ಒಟ್ಟಾರೆ ಕೆಲವು ಸಾವಿರದಲ್ಲಿ ಕೆಲಸ ಮುಗಿಯುತ್ತಿತ್ತು. ಆದರೆ ಈಗ ಲಕ್ಷದಷ್ಟು ಖರ್ಚಾಗುತ್ತದೆ. ವರ್ಷಕ್ಕೆ ಸುಮಾರು 800 ಸಿನಿಮಾಗಳು ಹಾಗೂ ಸಾವಿರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಪ್ರಾಣಿಗಳನ್ನು ಬಳಸಲಾಗುತ್ತದೆ. ಒಂದು ಸಿನಿಮಾಗೆ ಸರಿಸುಮಾರು ₹ 70,000 ಅಂದರೂ ಒಟ್ಟು ಮೊತ್ತ ಸುಮಾರು ₹ 10 ಕೋಟಿ ಆಗಬಹುದು. ಈ ಕಾರಣಕ್ಕಾಗಿಯೇ ದರ ಏರಿಕೆ ಮಾಡಿದ್ದಾರೋ? ಏನೋ? ಗೊತ್ತಿಲ್ಲ.

ದೊಡ್ಡ ಸಿನಿಮಾ ಮಾಡುವವರಿಗೆ ಲಕ್ಷವೆಂಬುದು ಸಮಸ್ಯೆಯಾಗುವುದಿಲ್ಲ. ಆದರೆ ಕೆಲವು ಲಕ್ಷಗಳಲ್ಲಿ ಸಿನಿಮಾ ಮಾಡುವ ಹೊಸಬರಿಗೆ ಇದು ದೊಡ್ಡ ಬರೆ. ರೇಟು ಜಾಸ್ತಿ ಮಾಡಬಾರದು ಅಂತಲ್ಲ, ಕಾಲಕಾಲಕ್ಕೆ ದರಗಳನ್ನು ಹೆಚ್ಚಿಸಲೇಬೇಕು, ಆ ವಿಭಾಗದಲ್ಲಿ‌ ಕೆಲಸ ಮಾಡುವ ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಕೊಡಲೇಬೇಕು. ಆದ್ರೆ ಈ ಪರಿ ಉಸಿರುಗಟ್ಟುವಂತಹ ಏರಿಕೆ ಮಾಡುವುದು ಸರಿಯಲ್ಲ ಎನ್ನುವುದು ವೀರೇಂದ್ರ ಅವರ ಮಾತು.

ಓಡಾಟವೇ ಕಷ್ಟ
ಈ ಹಿಂದೆ ಚೆನ್ನೈನಲ್ಲಿ ಇದ್ದ ಅನಿಮಲ್ ಬೋರ್ಡ್ ಕಚೇರಿಯನ್ನು ಉತ್ತರ ಭಾರತಕ್ಕೆ ಶಿಫ್ಟ್ ಮಾಡಲಾಗಿದೆ. ಅಲ್ಲಿನ ಅರ್ಜಿಗಳು, ರೂಲ್ಸು, ಕ್ಲಾಸು ಹಾಗೂ ಪ್ರೊಸೀಜರುಗಳು ಪ್ರಚಂಡ ಸಿನಿಮಾ ನಿರ್ದೇಶಕರಿಗೂ ಸಹ ಅರ್ಥವಾಗುವುದಿಲ್ಲ. ಈಗ ರೇಟ್ ಕಾರ್ಡ್ ಬೇರೆ ಜಾಸ್ತಿ ಮಾಡಿದ್ದಾರೆ.

ಭಾರತದ ಸಿನಿರಂಗಕ್ಕೆ ದಕ್ಷಿಣ ಭಾಷೆಗಳ ಕೊಡುಗೆ ದೊಡ್ಡದಿದೆ. ಇದನ್ನು ಪರಿಗಣಿಸಿ ದಕ್ಷಿಣ ಭಾರತದಲ್ಲಿ ಅನಿಮಲ್​ ಬೋರ್ಡ್​ ಉಳಿಸಬೇಕಿತ್ತು. ಈಗಲೂ ಸಿನಿಮಾ ಮಂದಿ ಎಲ್ಲರೂ ಒಂದಾಗಿ ಆಗ್ರಹಿಸುವ ಅವಶ್ಯಕತೆ ಇದೆ. ಆಗ ಓಡಾಟದ ಶ್ರಮ ಮತ್ತು ಖರ್ಚಾದರೂ ಉಳಿಯುತ್ತದೆ ಮತ್ತು ಮುಖ್ಯವಾಗಿ ಉತ್ತರ ಭಾರತದವರ ಜೊತೆ ವ್ಯವಹರಿಸುವಾಗ ಆಗುವ ಭಾಷಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವುದು ವೀರೇಂದ್ರ ಅವರ ಅಭಿಪ್ರಾಯ.