ಕೊರೊನಾ ವೈರಸ್ ಸಾಂಕ್ರಾಮಿಕ ಪರಿಣಾಮದಿಂದ ಕುಸಿದು ಹೋಗಿರುವ 2020- 21ವರ್ಷದ ಆರ್ಥಿಕತೆ ಮತ್ತೆ ಚೇತರಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆಯೊಂದಿಗೆ ದೇಶದ ಜನರು ಮುಂದಿನ ಬಜೆಟ್ ಕೇಂದ್ರ ಬಜೆಟ್ ಎದುರು ನೋಡುತ್ತಿದ್ದಾರೆ.
2021-22ರ ಎಲ್ಲ ವಾರ್ಷಿಕ ಬಜೆಟ್ಗಾಗಿ ಸರ್ಕಾರವು ಈಗಾಗಲೇ ಸಲಹೆಗಾರರು ಮತ್ತು ಉದ್ಯಮ ತಜ್ಞರನ್ನು ಸಂಪರ್ಕಿಸಲು ಪ್ರಾರಂಭಿಸಿದೆ. ಮುಂದಿನ ಹಣಕಾಸು ವರ್ಷದ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2021 ರಂದು ಮಂಡಿಸಲಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು ಖರ್ಚಿಗೆ ಆದ್ಯತೆ ನೀಡುವ ಮತ್ತು ಅಭಿವೃದ್ಧಿ ವಲಯಗಳಲ್ಲಿ ಸುಗಮ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. ಅದ್ಧೂರಿ ಬಜೆಟ್ ನಿರೀಕ್ಷಿಸುವುದು ದೂರದ ಮಾತಾದರೂ ಈ ಹೊತ್ತಲ್ಲಿ ಸರ್ಕಾರದ ಆರ್ಥಿಕತೆ ವಿಸ್ತರಣೆ ಸಾಧ್ಯತೆ ಇದೆ.
ಕೆಲವು ದಿನಗಳ ಹಿಂದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿಂದೆಂದೂ ಕಂಡರಿಯದ ಬಜೆಟ್ ಇದು ಎಂದು ಭರವಸೆ ನೀಡಿದ್ದರು. ಹಾಗಾಗಿ ಕುಂಠಿತಗೊಂಡಿರುವ ಆರ್ಥಿಕತೆಯನ್ನು ಹೆಚ್ಚಿಸಲು ಅಗತ್ಯವಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಸಜ್ಜಾಗಿದೆ ಎಂದು ಊಹಿಸಬಹುದು. ಈ ಸಮಯದಲ್ಲಿ ಎಲ್ಲರೂ ಕುಸಿದಿರುವ ಜಿಡಿಪಿ ಬಗ್ಗೆ ಕಣ್ಣು ನೆಟ್ಟಿದ್ದಾರೆ.
ಆರ್ಥಿಕ ಬೆಳವಣಿಗೆ ಮತ್ತು ಚೇತರಿಕೆ
ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುವುದು, ಸಾಂಕ್ರಾಮಿಕದಿಂದ ದುರ್ಬಲವಾಗಿರುವ ಕ್ಷೇತ್ರಗಳಿಗೆ ಬೆಂಬಲವನ್ನು ನೀಡುವುದು ಮತ್ತು 2020 ರಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ವಲಯಗಳಿಗೆ ಸರ್ಕಾರ ಪ್ರಮುಖ ಆದ್ಯತೆ ನೀಡಲಿದೆ. ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕವಾಗಿ ಕುಸಿದಿರುವ ವಲಯಗಳತ್ತ ಸರ್ಕಾರ ಗಮನ ಹರಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಅಭಿವೃದ್ಧಿ ಮತ್ತು ಚೇತರಿಕೆ ಈ ಬಾರಿಯ ಬಜೆಟ್ ನ ಮುಖ್ಯ ಉದ್ದೇಶವಾಗಿದ್ದು, ಸ್ಥಳೀಯ ಮೂಲ ಸೌಕರ್ಯ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುವ ಕೌಶಲಾಭಿವೃದ್ಧಿ ಮತ್ತು ನಿರ್ಮಾಣ ವಲಯಕ್ಕೆ ಹೆಚ್ಚಿನ ಹಣ ನೀಡುವ ನಿರೀಕ್ಷೆ ಇದೆ.
ಕೃಷಿಯೆಡೆಗೆ ಗಮನ
ಸರ್ಕಾರ ಈ ಹೊತ್ತಲ್ಲಿ ಕೃಷಿ ವಲಯದತ್ತ ಗಮನ ಹರಿಸಲು ಸಾಕಷ್ಟು ಕಾರಣಗಳಿವೆ. ಸಾಂಕ್ರಾಮಿಕದ ಹೊತ್ತಲ್ಲಿ ಚೆನ್ನಾಗಿ ಕಾರ್ಯ ನಿರ್ವಹಿಸಿದ ಕೆಲವು ವಲಯಗಳಲ್ಲಿ ಕೃಷಿ ವಲಯವೂ ಒಂದು. ನವದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಈ ಹೊತ್ತಲ್ಲಿ ಸರ್ಕಾರವು ದೇಶದಲ್ಲಿರುವ ರೈತರಿಗೆ ಧನಾತ್ಮಕ ಸಂದೇಶವನ್ನು ನೀಡುವ ನಿರೀಕ್ಷೆಯಿದೆ. ಹಾಗಾಗಿ ರೈತರ ಶ್ರೇಯಾಭಿವೃದ್ಧಿಯು ಕೂಡಾ ಕೇಂದ್ರ ಬಜೆಟ್ನ ಮುಖ್ಯ ವಿಷಯ ಆಗಲಿದೆ,
2022 ಆಗುವಾಗ ರೈತರ ಆದಾಯ ದುಪ್ಪಟ್ಟು ಆಗಲಿದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಸರ್ಕಾರ ಅಧಿಕಾರಿಗಳು ಇದನ್ನು ಪದೇ ಪದೇ ಹೇಳುತ್ತಿದ್ದರು. ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದಲೇ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರ ಹೇಳಿತ್ತು. ಆದರೆ ರೈತರು ಈ ಕಾನೂನನ್ನು ವಿರೋಧಿಸಿ ಪ್ರತಿಭಟನೆ ಮುಂದುವರಿಸಿರುವುದರಿಂದ ಸರ್ಕಾರ ರೈತರ ಬಗ್ಗೆ ಯೋಚಿಸುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಗೋದಾಮುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಕೋಲ್ಡ್ ಸ್ಟೋರೇಜ್ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಸರ್ಕಾರ ರೈತರಿಗೆ ಸಹಾಯ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅದೇ ವೇಳೆ ಕೆಲವು ತಜ್ಞರು ಬೆಳೆಗಳಿಗಾಗಿ ಬಳಸುವ ಗೊಬ್ಬರದ ಬೆಲೆ ಮತ್ತು ರಾಸಾಯನಿಕದ ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬಡ ರೈತರಿಗೆ ತಮ್ಮ ಸರಕುಗಳನ್ನು ಸಾಗಿಸಲು ಬೇಕಾಗಿರುವ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದರೆ ಒಳ್ಳೆಯದು ಎಂದು ಕೆಲವರು ಸಲಹೆ ನೀಡಿದ್ದಾರೆ.
ಆದಾಗ್ಯೂ, ರೈತರು ತಮ್ಮ ಬೇಡಿಕೆ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ಮತ್ತು ನೂತನ ಕೃಷಿ ಕಾನೂನನ್ನು ವಾಪಸ್ ಪಡೆಯಬೇಕು ಎಂಬುದು ರೈತರ ಬೇಡಿಕೆಯಾಗಿದೆ. ದೇಶದ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ನಿರತರಾಗಿದ್ದು, ರೈತರ ಪ್ರತಿಭಟನೆ ನಿಲ್ಲಿಸಲು ಸರ್ಕಾರ ಯಾವುದಾದರೂ ಯೋಜನೆ ಮಾಡಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಆರೋಗ್ಯ ವಲಯಕ್ಕೆ ಬೇಕು ಉತ್ತೇಜನ
ಭಾರತದ ಆರೋಗ್ಯ ವ್ಯವಸ್ಥೆಯ ಲೋಪದೋಷಗಳು ಸ್ಪಷ್ಟವಾಗಿ ಕಂಡದ್ದು ಕೊರೊನಾವೈರಸ್ ಸೋಂಕು ವ್ಯಾಪಿಸಿಕೊಂಡಾಗ. ದೇಶದಲ್ಲಿ ಕೊವಿಡ್ನಿಂದಾಗಿ 1.5 ಲಕ್ಷಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಹಲವು ರೋಗಿಗಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಹೊತ್ತಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ವೆಂಟಿಲೇಟರ್ ಕೊರತೆ ಇರುವುದು ಪ್ರಮುಖ ಸುದ್ದಿಯಾಗಿತ್ತು. ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಗಮನ ನೀಡಬಹುದು ಎಂಬ ನಿರೀಕ್ಷೆ ಇದೆ.
ಅನೇಕ ತಜ್ಞರು ಈ ವರ್ಷದ ಬಜೆಟ್‌ನಲ್ಲಿ ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಏರಿಕೆಯನ್ನು ಕೋರಿದ್ದಾರೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಉದ್ಯಮದ ಸ್ಥಾನಮಾನವನ್ನೂ ನೀಡಿದ್ದಾರೆ. ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಫಾರ್ಮಾ ಅಧ್ಯಯನ ಮತ್ತು ರೋಗಗಳ ಕಣ್ಗಾವಲುಗಾಗಿ ಹೆಚ್ಚಿನ ಖರ್ಚು ಮಾಡುವ ನಿರೀಕ್ಷೆಯಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಜೆಟ್ 2021-22 ಮುಖ್ಯವಾಗಿ ಆರೋಗ್ಯ ಮತ್ತು ಕೃಷಿಯಂತಹ ಪ್ರಮುಖ ಕ್ಷೇತ್ರಗಳನ್ನು ಬಲಪಡಿಸುವುದರ ಜೊತೆಗೆ ಬೆಳವಣಿಗೆ ಮತ್ತು ಚೇತರಿಕೆಯತ್ತ ಗಮನ ಹರಿಸುತ್ತದೆ. 2020 ರಲ್ಲಿ ಕಡಿಮೆ ಆದಾಯ ಸಂಗ್ರಹದ ಮಧ್ಯೆ ಸರ್ಕಾರವು ಆದಾಯ ತೆರಿಗೆಗೆ ಯಾವುದೇ ಪ್ರಯೋಜನಗಳನ್ನು ನೀಡುವ ಸಾಧ್ಯತೆಯಿಲ್ಲ.
Budget 2021 ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ; ಬಜೆಟ್ ಅಧಿವೇಶನ ದೈನಂದಿನ ಕಲಾಪ ಅವಧಿ ಮೊಟಕು
Published On - 7:00 am, Mon, 11 January 21