
ನವದೆಹಲಿ, ಏಪ್ರಿಲ್ 22: ತನ್ನ ಕುಟುಂಬ ವೈದ್ಯರ ಜೊತೆ ನಿತ್ಯವೂ ವಿಡಿಯೋ ಕಾಲ್ (video consultation) ಮೂಲಕ ಸಮಾಲೋಚನೆ ನಡೆಸಲು ಅವಕಾಶ ಕೊಡಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ, ಕೇಜ್ರಿವಾಲ್ ಅವರಿಗೆ ಅಗತ್ಯ ಇರುವ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಎಂದು ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ (Kaveri Baweja) ಅವರು ಏಮ್ಸ್ ಆಸ್ಪತ್ರೆಗೆ (AIIMS hospital) ಆದೇಶಿಸಿದ್ದಾರೆ. ದೆಹಲಿ ಮುಖ್ಯಮಂತ್ರಿಗಳ ಬ್ಲಡ್ ಶುಗರ್ ಮಟ್ಟ ಕಡಿಮೆ ಮಾಡಲು ಇನ್ಸುಲಿನ್ ಅಗತ್ಯ ಇದೆಯಾ ಎಂಬುದು ಅವಲೋಕಿಸಲು ಮತ್ತು ಅವರ ಇತರ ವೈದ್ಯಕೀಯ ಸಮಸ್ಯೆಗಳಿಗೆ ಯಾವ ಚಿಕಿತ್ಸೆ ಕೊಡಬಹುದು ಎಂಬುದನ್ನು ನಿರ್ಧರಿಸಲು ದೆಹಲಿಯ ಏಮ್ಸ್ ಆಸ್ಪತ್ರೆಯು ಒಂದು ವೈದ್ಯಕೀಯ ಮಂಡಳಿಯನ್ನು ರಚಿಸಬೇಕು ಎಂದು ಜಡ್ಜ್ ತಿಳಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮದ್ಯ ನೀತಿ ಹಗರಣ ಸಂಬಂಧ ಇಡಿಯಿಂದ ಬಂಧಿತರಾಗಿ ಏಪ್ರಿಲ್ 1ರಿಂದ ತಿಹಾರ್ ಜೈಲಿನಲ್ಲಿದ್ದಾರೆ. ಇಲ್ಲಿ ಅವರಿಗೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. ಅವರನ್ನು ಕೊಲ್ಲುವ ಹುನ್ನಾರ ನಡೆದಿದೆ ಎಂಬುದು ಎಎಪಿ ಪಕ್ಷ ಮಾಡುತ್ತಿರುವ ಆರೋಪ.
ಇದನ್ನೂ ಓದಿ: ಸೂರತ್ನಲ್ಲಿ ಚುನಾವಣೆಗೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ
ಅರವಿಂದ್ ಕೇಜ್ರಿವಾಲ್ ಅವರು ಮಧುಮೇಹ ರೋಗಿ. ಜೈಲಿನಲ್ಲಿ ತಮ್ಮ ಶುಗರ್ ಲೆವೆಲ್ ಆತಂಕಕಾರಿ ಎನಿಸುವಷ್ಟು ಹೆಚ್ಚುತ್ತಿದೆ. ಫ್ಯಾಮಿಲಿ ಡಾಕ್ಟರ್ ಜೊತೆ ಸಮಾಲೋಚನೆಗೂ ಅನುಮತಿ ನೀಡುತ್ತಿಲ್ಲ. ಇನ್ಸುಲಿನ್ ಕೊಡುತ್ತಲೂ ಇಲ್ಲ ಎಂಬುದು ಕೇಜ್ರಿವಾಲ್ ಅವರ ದೂರಾಗಿದೆ.
ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಮಾವಿನ ಹಣ್ಣು ತಿಂದು ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದು ಜಾಮೀನು ಪಡೆಯಲು ಅವರು ಮಾಡುತ್ತಿರುವ ತಂತ್ರ ಎಂದು ಕಳೆದ ವಾರ ಕೋರ್ಟ್ ವಿಚಾರಣೆ ವೇಳೆ ಇಡಿ ವಾದಿಸಿತ್ತು.
ಇದನ್ನೂ ಓದಿ: ನಿಮ್ಮ ಆಸ್ತಿಪಾಸ್ತಿ ಕಬಳಿಸ್ತಾರೆ ಹುಷಾರ್..! ಕಾಂಗ್ರೆಸ್ನ ಸಂಪತ್ತು ಮರುಹಂಚಿಕೆ ಯೋಜನೆ ವಿರುದ್ಧ ಪ್ರಧಾನಿ ಗುಡುಗು
ಅರವಿಂದ್ ಕೇಜ್ರಿವಾಲ್ ಬಂಧಿಯಾಗಿರುವ ತಿಹಾರ್ ಜೈಲಿನಲ್ಲಿ ಅವರಿಗೆ ಏಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ಅವಕಾಶ ಕೊಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಂವಾದದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಇನ್ಸುಲಿನ್ ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ. ಅಥವಾ ವೈದ್ಯರೂ ಕೂಡ ಇದರ ಅಗತ್ಯ ಇದೆ ಎಂದು ಹೇಳಲಿಲ್ಲ ಎಂಬುದು ತಿಹಾರ್ ಜೈಲಧಿಕಾರಿಗಳು ಹೇಳುತ್ತಿರುವ ಮಾತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ