ನಾವೆಲ್ಲ ಒಂದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವವರು: ಆಸಿಯಾನ್ ಸಮುದಾಯಗಳಿಗೆ ಪ್ರಧಾನಿ ಮೋದಿ ಕರೆ

47th ASEAN Summit at Kaulalumpur: ಮಲೇಷ್ಯಾದಲ್ಲಿ ನಡೆಯುತ್ತಿರುವ 47ನೇ ಆಸಿಯಾನ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಭಾರತ ಹಾಗೂ ಆಸಿಯಾನ್ ಸೇರಿಸಿದರೆ ಜನಸಂಖ್ಯೆ ವಿಶ್ವದ ಕಾಲುಭಾಗದಷ್ಟಾಗುತ್ತದೆ ಎಂದು ಮೋದಿ ಹೇಳಿದರು. ಭಾರತ ಹಾಗು ಆಸಿಯಾನ್ ದೇಶಗಳು ಭೌಗೋಳಿಕವಾಗಿ ಹತ್ತಿರ ಇರುವುದರ ಜೊತೆಗೆ ಐತಿಹಾಸಿಕ ಮತ್ತು ಮೌಲ್ಯಗಳ ಸಂಬಂಧ ಇದೆ ಎಂದರು.

ನಾವೆಲ್ಲ ಒಂದೇ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವವರು: ಆಸಿಯಾನ್ ಸಮುದಾಯಗಳಿಗೆ ಪ್ರಧಾನಿ ಮೋದಿ ಕರೆ
ASEAN ಸಭೆ ಉದ್ದೇಶಿಸಿ ಮಾತನಾಡಿದ ಮೋದಿ

Updated on: Oct 26, 2025 | 6:54 PM

ನವದೆಹಲಿ, ಅಕ್ಟೋಬರ್ 26: ಮಲೇಷ್ಯಾದ ಕೌಲಾಲಂಪುರ್​ನಲ್ಲಿ ನಡೆಯುತ್ತಿರುವ 47ನೇ ಆಸಿಯನ್ ಶೃಂಗಸಭೆಯನ್ನು (ASEAN Summit) ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಷಣ ಮಾಡಿದರು. ಈ ವೇಳೆ, ಸಮಿಟ್ ಆಯೋಜಿಸಿದ್ದಕ್ಕೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಹಾಗೂ ಆಸಿಯಾನ್ ಸಂಘಟನೆಯ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ.

‘ಭಾರತ ಮತ್ತು ಆಸಿಯಾನ್ ಜನಸಂಖ್ಯೆ ಒಟ್ಟು ಸೇರಿಸಿದರೆ ವಿಶ್ವದ ಕಾಲುಭಾಗದಷ್ಟಾಗುತ್ತದೆ. ನಾವು ಭೌಗೋಳಿಕವಾಗಿ ಮಾತ್ರ ಹತ್ತಿರ ಇಲ್ಲ, ಐತಿಹಾಸಿಕ ಹಾಗೂ ಮೌಲ್ಯಗಳ ಸಂಬಂಧ ಇದೆ. ಅಭಿವೃದ್ಧಿಶೀಲ ಜಗತ್ತಿನಲ್ಲಿ ನಾವೆಲ್ಲರೂ ಸಹವರ್ತಿಗಳಾಗಿದ್ದೇವೆ’ ಎಂದು 47ನೇ ಆಸಿಯನ್ ಸಮಿಟ್​ ಉದ್ದೇಶಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ದೂರಗಾಮಿ ಯೋಜನೆ; 5ಜಿಗಿಂತ 1,000 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ನೀಡುವ 6ಜಿ ಅಭಿವೃದ್ಧಿಗೆ ಹೆಜ್ಜೆ

21ನೇ ಶತಮಾನ ನಮಗೆ ಸೇರಿದ್ದು ಎಂದ ಮೋದಿ

‘ಈ 21ನೇ ಶತಮಾನವು ನಮ್ಮ ಶತಮಾನವಾಗಿದೆ. ಇದು ಭಾರತ ಹಾಗೂ ಆಸಿಯನ್​ನ ಶತಮಾನವಾಗಿದೆ. ಆಸಿಯನ್ ಸಮುದಾಯದ ಗುರಿ 2045 ಮತ್ತು ವಿಕಸಿತ ಭಾರತ್ 2047 ಯೋಜನೆಗಳು ಇಡೀ ಮಾನವಕುಲದ ಒಳಿತಿಗೆ ಪೂರಕವಾಗಲಿವೆ’ ಎಂದು ಪ್ರಧಾನಿಗಳು ಹೇಳಿದ್ದಾರೆ.

‘ಪ್ರತಿಯೊಂದು ಬಿಕ್ಕಟ್ಟಿನಲ್ಲೂ ಆಸಿಯನ್ ಹಾಗೂ ಅದರ ಮೈತ್ರಿದೇಶಗಳೊಂದಿಗೆ ಭಾರತ ದೃಢವಾಗಿ ನಿಂತಿದೆ. ಸಾಗರ ಆರ್ಥಿಕತೆ, ಸಾಗರ ಭದ್ರತೆ ಇತ್ಯಾದಿಯಲ್ಲಿ ಪರಸ್ಪರ ಸಹಕಾರ ಹೆಚ್ಚುತ್ತಿದೆ. ಶಿಕ್ಷಣ, ಪ್ರವಾಸೋದ್ಯಮ, ವಿಜ್ಞಾನ ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ, ಸೈಬರ್ ಸೆಕ್ಯೂರಿಟಿ ವಿಚಾರದಲ್ಲಿ ಸಹಕಾರ ಬಲಪಡಿಸುವ ಕೆಲಸ ಆಗುತ್ತಿದೆ’ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: Mann Ki Baat: ಪ್ಲಾಸ್ಟಿಕ್ ತಂದುಕೊಡಿ, ಹೊಟ್ಟೆ ತುಂಬಾ ಊಟ ಮಾಡಿ, ಛತ್ತೀಸ್​ಗಢದ ವಿಶೇಷ ಕೆಫೆ ಬಗ್ಗೆ ಮೋದಿ ಪ್ರಸ್ತಾಪ

ಭಾರತದ ರಾಷ್ಟ್ರ ಸಮನ್ವಯತೆಯ ಪಾತ್ರವನ್ನು ನಿಭಾಯಿಸಿದ್ದಕ್ಕೆ ಫಿಲಿಪ್ಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಅವರನ್ನು ಪ್ರಧಾನಿಗಳು ಇದೇ ವೇಳೆ ಪ್ರಶಂಸಿಸಿದ್ದಅರೆ. ಹಾಗೆಯೇ, ಆಸಿಯಾನ್​ನ ಹೊಸ ಸದಸ್ಯನಾದ ಈಸ್ಟ್ ಟೈಮೂರ್ ಅನ್ನು ಸ್ವಾಗತಿಸಿದರು. ಅದೇ ವೇಳೆ, ಥಾಯ್ಲೆಂಡ್​ನ ರಾಜಆತೆ ಸಿರಿಕೀತ್ ಅವರ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Sun, 26 October 25