ಗುವಾಹಟಿ: ಅಸ್ಸಾಂ ಕಾಂಗ್ರೆಸ್ ಘಟಕವು ಗುರುವಾರ ‘5 ಗ್ಯಾರಂಟಿ’ ಯಾತ್ರೆಗೆ ಚಾಲನೆ ನೀಡಿದೆ. ಬಿಜೆಪಿಯ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಹಿಂದುತ್ವ ಅಜೆಂಡಾದಿಂದ ಅಸ್ಸಾಂನ್ನು ರಕ್ಷಿಸಿ ಎಂಬ ಧ್ಯೇಯದೊಂದಿಗೆ ಬಸ್ ಪ್ರವಾಸ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಈ ಯಾತ್ರೆಗೆ ಚಾಲನೆ ನೀಡಿದೆ. ಕಾಂಗ್ರೆಸ್ ನೇತೃತ್ವದ ಎಂಟು ಪಕ್ಷಗಳ ಮಹಾಮೈತ್ರಿ ಅಧಿಕಾರಕ್ಕೇರಿದರೆ 5 ಪ್ರಮುಖ ಕಾರ್ಯಗಳನ್ನು ಮಾಡುವ ಭರವಸೆ ನೀಡುತ್ತೇವೆ ಎಂದು ಮಾರ್ಚ್ 2ರಂದು ಉತ್ತರ ಅಸ್ಸಾಂನಲ್ಲಿ ನಡೆದ ಚುನವಣಾ ರ‍್ಯಾಲಿಯಲ್ಲಿ ಕಾಂಗ್ರೆಸ್ ಹೇಳಿತ್ತು.
5 ಭರವಸೆಗಳು ಏನೇನು?
ಅಸ್ಸಾಂನಲ್ಲಿ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಮತ್ತು ಪೌರತ್ವ ನೋಂದಣಿ ಜಾರಿಯಾಗದಂತೆ ತಡೆ, 5 ಲಕ್ಷ ಸರ್ಕಾರ ಉದ್ಯೋಗ, ಅಧಿಕಾರಕ್ಕೇರಿದ ಮೂವತ್ತೇ ದಿನಗಳಲ್ಲಿ ಚಹಾ ತೋಟದ ದಿನಗೂಲಿ ಸಂಬಳವನ್ನು ಏರಿಸುವುದು, ಪ್ರತಿಮನೆಗೂ 200 ಯುನಿಟ್ ಉಚಿತ ವಿದ್ಯುತ್ , ಎಲ್ಲ ಗೃಹಿಣಿಯರಿಗೆ 2,000 ತಿಂಗಳ ವೇತನ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ
ಮಧ್ಯ ಅಸ್ಸಾಂನ ನಾಗೋನ್ ಮತ್ತು ಉತ್ತರ ಅಸ್ಸಾಂನ ತೇಜ್ ಪುರ್ನಲ್ಲಿ ಏಕಕಾಲಕ್ಕೆ ಈ ಯಾತ್ರೆಗೆ ಚಾಲನೆ ನೀಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕಿ ಬೊಬಿತಾ ಶರ್ಮಾ ಹೇಳಿದ್ದಾರೆ. 5 ಗ್ಯಾರಂಟಿ ಯಾತ್ರೆಯು ಅಸ್ಸಾಂನ ಮೂಲೆ ಮೂಲೆಗೂ ತಲುಪಲಿದೆ ಎಂದು ಅವರು ಹೇಳಿದ್ದಾರೆ. ಅಸ್ಸಾಂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯ ಉಸ್ತುವಾರಿ ವಹಿಸಿರುವ ಜಿತೇಂದ್ರ ಸಿಂಗ್ ಯಾತ್ರೆಗೆ ಚಾಲನೆ ನೀಡಿದ್ದು ಇದು ಸಂಭವನೀಯ ಭರವಸೆ ಎಂದು ಹೇಳಿದ್ದಾರೆ.
Live from #Congressor5Guarantee Yatra https://t.co/xZMfD2ywnc
— Congressor 5 Guarantee (@5Guarantee) March 11, 2021
ಬಜೆಟ್ ನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿ, ಅಸ್ಸಾಂನ ಸಾಮರ್ಥ್ಯವನ್ನು ಮನಗಂಡು ಈ ಭರವಸೆಗಳನ್ನು ಪಟ್ಟಿಮಾಡಲಾಗಿದೆ ಎದು ನಾಗೋನ್ ಸಂಸದ, ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರದ್ಯುತ್ ಬರದೊಯಿ ಹೇಳಿದ್ದಾರೆ.
ಚಹಾ ತೋಟದ ಕಾರ್ಮಿಕರ ದಿನಗೂಲಿ ಏರಿಕೆಗೆ ತಡೆ ನೀಡಿದ ಹೈಕೋರ್ಟ್
ಚಹಾ ತೋಟದ ಕಾರ್ಮಿಕ ದಿನಗೂಲಿ ಏರಿಕೆ ಮಾಡುವುದಕ್ಕೆ ಗುವಾಹಟಿ ಹೈಕೋರ್ಟಿ ಗುರುವಾರ ತಡೆ ನೀಡಿದೆ
ಫೆಬ್ರವರಿ 23ರಂದು ಬಿಜೆಪಿ ಸರ್ಕಾರ ಕಾರ್ಮಿಕರ ದಿನಗೂಲಿ 50 ರೂಪಾಯಿ ಏರಿಕೆ ಮಾಡಿತ್ತು. ಹಾಗಾಗಿ 167 ಇದ್ದ ದಿನಗೂಲಿ 217 ರೂಪಾಯಿಗೆ ಏರಿತ್ತು.
ಏತನ್ಮಧ್ಯೆ, ಗುವಾಹಟಿ ಹೈಕೋರ್ಟ್ ಸೋಮವಾರ ವೇತನ ಏರಿಕೆ ಬಗ್ಗೆ ಅಸ್ಸಾಂ ಕಾರ್ಮಿಕ ಇಲಾಖೆ ಅಧಿಸೂಚನೆಯನ್ನು ಪ್ರಶ್ನಿಸಿದ್ದ ಭಾರತೀಯ ಟೀ ಅಸೋಸಿಯೇಷನ್ ಮತ್ತು ರಾಜ್ಯದ 800 ಕ್ಕೂ ಹೆಚ್ಚು ಉದ್ಯಾನಗಳಲ್ಲಿ 90% ನಷ್ಟು ಭಾಗವನ್ನು ಹೊಂದಿರುವ 17 ಚಹಾ ಕಂಪನಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸರ್ಕಾರಕ್ಕೆ ಆದೇಶಿಸಿತ್ತು.
ನ್ಯಾಯಾಲಯದ ಆದೇಶವನ್ನು ಲಾಭ ಪಡೆಯಲು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿದ್ದು ವೇತನ ಹೆಚ್ಚಳವನ್ನು ‘ಚುನಾವಣಾ ಗಿಮಿಕ್’ ಎಂದು ಕಾಂಗ್ರೆಸ್ ಬಣ್ಣಿಸಿದೆ.
ಆದೇಶದಲ್ಲಿ ಉಲ್ಲೇಖಿಸಲಾದ ದಿನಗೂಲಿ ಕಾಯ್ದೆಯ ಪ್ರಕಾರ ಚಹಾ ಕಾರ್ಮಿಕರ ದೈನಂದಿನ ವೇತನವನ್ನು ಹೆಚ್ಚಿಸಲು ಅಗತ್ಯವಾದ ಸರಿಯಾದ ಅಧಿಕೃತ ವಿಧಾನವನ್ನು ಬಿಜೆಪಿ ಅನುಸರಿಸಲಿಲ್ಲ. ಇದಕ್ಕಾಗಿ ಯಾವುದೇ ಸಮಿತಿಗಳು ಅಥವಾ ಉಪಸಮಿತಿಗಳನ್ನು ರಚಿಸಲಾಗಿಲ್ಲ. ಇದನ್ನು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸಬೇಕೆಂದಿದ್ದರೆ ಅಧಿಸೂಚನೆಯನ್ನು ಹೊರತರುವುದಷ್ಟೇ ಸಾಲದು. ಅನುಷ್ಠಾನಕ್ಕೆ ಬೇಕಾದ ಎಲ್ಲಾ ಸರಿಯಾದ ಕಾರ್ಯವಿಧಾನಗಳನ್ನು ಅವರು ಅನುಸರಿಸಬೇಕಾಗಿತ್ತು ಎಂದು ಕಾಂಗ್ರೆಸ್ ನಾಯಕಿ ಬೊಬಿತಾ ಶರ್ಮಾ ಹೇಳಿದ್ದಾರೆ. ಕಾರ್ಮಿಕರನ್ನು ಬಿಜೆಪಿ ಮೋಸಗೊಳಿಸುತ್ತದೆ ಎಂದು ಅಸೋಮ್ ಜಾತಿಯ ಪರಿಷತ್ (ಎಜೆಪಿ) ಆರೋಪಿಸಿದೆ.
ಚುನಾವಣೆ ಕಾವು ಏರುತ್ತಿದ್ದಂತೆ ರಾಜಕೀಯ ಪಕ್ಷಗಳು ಚಹಾ ತೋಟದ ಕಾರ್ಮಿಕರ ಮತ ಸೆಳೆಯಲು ಪ್ರಯತ್ನ ಮಾಡುತ್ತಿವೆ. ಅಸ್ಸಾಂನಲ್ಲಿ 126 ವಿಧಾನಸಭೆ ಸೀಟುಗಳಿಗೆ ಮೂರು ಹಂತಗಳಾಗಿ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ.2ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: Assam Assembly Elections 2021: ಅಸ್ಸಾಂನ 40 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಘೋಷಿಸಿದ ಕಾಂಗ್ರೆಸ್