Dandi March: 21 ದಿನಗಳ ದಂಡಿಯಾತ್ರೆಗೆ ಮಾರ್ಚ್​ 12ರಂದು ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ಭಾರತಕ್ಕೆ ಸ್ವಾತಂತ್ರ್ಯ ಬಂದು 2022 ಕ್ಕೆ ಸರಿಯಾಗಿ 75 ವರ್ಷ ತುಂಬಲಿದೆ. ಹೀಗಾಗಿ ಕೇಂದ್ರ ಸರ್ಕಾರವು ಅಮೃತ ಮಹೋತ್ಸವವನ್ನು ನಡೆಸಲು ತೀರ್ಮಾನಿಸಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12 ರಂದು ದಂಡಿ ಮಾರ್ಚ್​ಗೆ ಚಾಲನೆ ನೀಡಲಿದ್ದಾರೆ.

Dandi March: 21 ದಿನಗಳ ದಂಡಿಯಾತ್ರೆಗೆ ಮಾರ್ಚ್​ 12ರಂದು ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
ಪೃಥ್ವಿಶಂಕರ
|

Updated on: Mar 11, 2021 | 6:16 PM

ಅಹಮದಾಬಾದ್: ಭಾರತಕ್ಕೆ ಸ್ವಾತಂತ್ರ್ಯ ಬಂದು 2022 ಕ್ಕೆ ಸರಿಯಾಗಿ 75 ವರ್ಷ ತುಂಬಲಿದೆ. ಹೀಗಾಗಿ ಕೇಂದ್ರ ಸರ್ಕಾರವು ಅಮೃತ ಮಹೋತ್ಸವವನ್ನು ನಡೆಸಲು ತೀರ್ಮಾನಿಸಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12 ರಂದು ದಂಡಿ ಮಾರ್ಚ್​ಗೆ ಚಾಲನೆ ನೀಡಲಿದ್ದಾರೆ. ಸಬರಮತಿ ಆಶ್ರಮದ ಬಳಿಯ ದಿವಂಗತ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ವಿಶ್ರಾಂತಿ ಸ್ಥಳವಾದ ಅಭಯ್ ಘಾಟ್ ಪಕ್ಕದ ಮೈದಾನದಿಂದ ಆರಂಭವಾಗುವ 21 ದಿನಗಳ ಸುದೀರ್ಘವಾದ ದಂಡಿ ಮಾರ್ಚ್​ಗೆ ಪ್ರಧಾನಿ ಮೋದಿ ನಾಳೆ ಚಾಲನೆ ನೀಡಲಿದ್ದಾರೆ. ಶುಕ್ರವಾರ ಆರಂಭವಾಗುವ ಈ ದಂಡಿ ಮಾರ್ಚ್​ನಲ್ಲಿ 81 ಮಂದಿ ಪಾದಯಾತ್ರೆ ಆರಂಭಿಸಲಿದ್ದಾರೆ.

ದಂಡಿ ಮಾರ್ಚ್ ಎಂದರೇನು? ಉಪ್ಪಿನ ಉತ್ಪಾದನೆಯಲ್ಲಿ ಬ್ರಿಟಿಷ್ ಏಕಸ್ವಾಮ್ಯದ ವಿರುದ್ಧ ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಪ್ರತಿಭಟನೆಯ ಭಾಗವಾಗಿತ್ತು ದಂಡಿ ಮಾರ್ಚ್ ಅಥವಾ ಸಾಲ್ಟ್ ಮಾರ್ಚ್. ಗಾಂಧಿಯವರ ನೇತೃತ್ವದಲ್ಲಿ, 78 ಜನರು ಮಾರ್ಚ್ 12 ರಂದು 24 ದಿನಗಳ ಮೆರವಣಿಗೆಯನ್ನು ಪ್ರಾರಂಭಿಸಿ, ಏಪ್ರಿಲ್ 5, 1930 ರಂದು ದಂಡಿ ತಲುಪಿದರು. ದಂಡಿಯಲ್ಲಿ ಉಪ್ಪು ತಯಾರಿಸಿದರು. ಆನಂತರ ಗಾಂಧಿ ದಕ್ಷಿಣಕ್ಕೆ 40 ಕಿ.ಮೀ ದೂರದಲ್ಲಿರುವ ಧರಸಾನ ಸಾಲ್ಟ್ ವರ್ಕ್ಸ್‌ಗೆ ತೆರಳಿದರು. ಆದರೆ ಮೇ 5 ರಂದು ಅವರನ್ನು ಬಂಧಿಸಲಾಯಿತು.

2021 ದಂಡಿ ಮಾರ್ಚ್‌ನಲ್ಲಿ ಯಾರು ಭಾಗವಹಿಸುತ್ತಾರೆ? ಗುಜರಾತ್​ನ ರಾಜ್ಯ ಕ್ರೀಡಾ ಸಚಿವ ಈಶ್ವರ್​ ಸಿನ್ಹ ಅವರ ಪ್ರಕಾರ, 1930 ರಲ್ಲಿ ಗಾಂಧಿಯವರೊಂದಿಗೆ ದಂಡಿಯಾತ್ರೆಯಲ್ಲಿ ಭಾಗವಹಿಸಿದ್ದವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಆದರೆ ಅವರಿಗೆ ವಯಸ್ಸಾಗಿರುವ ಕಾರಣ ಅವರು ಈ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಇನ್ನೂಳಿದಂತೆ ಗಾಂಧಿಯವರೊಂದಿಗೆ ಯಾತ್ರೆಯಲ್ಲಿ ಭಾಗವಹಿಸಿದ್ದ 78 ಜನರ ಸವಿನೆನಪಿಗಾಗಿ ಅಹಮದಾಬಾದ್​ನಿಂದ ದಂಡಿವರೆಗಿನ ಸುಮಾರು 386 ಕಿ. ಮೀ ಪಾದಯಾತ್ರೆಯಲ್ಲಿ 81 ಜನರು ಭಾಗಿಯಾಗಲಿದ್ದಾರೆ. ಅಲ್ಲದೆ ಇನ್ನೂ ಇಬ್ಬರು ಮಾರ್ಗ ಮಧ್ಯದಲ್ಲಿ ಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ ಎಂದರು.

ಈ ಪಾದಯಾತ್ರೆಯಲ್ಲಿ ಗಾಂಧಿಯವರೊಂದಿಗೆ ಸಂಬಂಧ ಹೊಂದಿರುವ 6 ಸ್ಥಳಗಳಾದ ಎಂ.ಕೆ.ಗಾಂಧಿಯವರ ಜನ್ಮಸ್ಥಳ ಪೊರ್ಬಂದರ್, ರಾಜ್‌ಕೋಟ್, ವಡೋದರಾ, ಬಾರ್ಡೋಲಿ (ಸೂರತ್), ಮಾಂಡ್ವಿ (ಕಚ್) ಮತ್ತು ದಂಡಿ (ನವಸಾರಿ) ಬೃಹತ್​ ಕಾರ್ಯಕ್ರಮವನ್ನು ಆಯೋಜಿಸಲು ಚಿಂತಿಸಲಾಗುತ್ತಿದೆ. ಅಲ್ಲದೆ ಗಾಂಧಿ ದಂಡಿಯಾತ್ರೆ ನಡೆಸಿದ ಸಲುವಾಗಿ ದೇಶದ ಇತರ ಭಾಗಗಳಿಂದ ಗಾಂಧಿಯವರ ಯಾತ್ರೆಗೆ ಬೆಂಬಲವಾಗಿ ಯಾತ್ರೆ ನಡೆಸಿದ ಪ್ರಮುಖ 75 ಸ್ಥಳಗಳಲ್ಲಿ ದೇಶಭಕ್ತಿಯನ್ನು ಬೆಳೆಸುವ ಏಕಕಾಲಿಕ ಕಾರ್ಯಕ್ರಮಗಳು ಮಾರ್ಚ್ 12 ರಂದು ನಡೆಯಲ್ಲಿವೆ. ಅಲ್ಲದೆ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವವರು ರಾತ್ರಿ ವೇಳೆ ತಂಗುವ 21 ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸಲಾಗುತ್ತದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದರು. ಹಾಗೆಯೇ ಈ 21 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿ ದಿನ ರಾಜಕೀಯ ನಾಯಕರು ಹಾಜರಾಗಲಿದ್ದಾರೆ.

ಮೆರವಣಿಗೆಯನ್ನು ಕಾಂಗ್ರೆಸ್ ಈ ಹಿಂದೆ ಸ್ಮರಿಸಿತ್ತು.. 2005 ರಲ್ಲಿ ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ದಂಡಿ ಮಾರ್ಚ್‌ನ 75 ವರ್ಷಗಳ ನೆನಪಿಗಾಗಿ ಇದೇ ರೀತಿಯ ಪಾದಯಾತ್ರೆಯನ್ನು ಪ್ರಾರಂಭಿಸಿತ್ತು. ಆಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾರ್ಚ್ 12 ರಂದು ಸಬರಮತಿ ಆಶ್ರಮದಿಂದ ಮೆರವಣಿಗೆಗೆ ಚಾಲನೆ ನೀಡಿದ್ದರು. ಅಲ್ಲದೆ ಕೊನೆಯ ಹಂತದ ಮೆರವಣಿಗೆಯಲ್ಲಿ ಸೋನಿಯಾ ಗಾಂಧಿ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ದಂಡಿಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಅಂದಿನ ಮೆರವಣಿಗೆಯನ್ನು ಕಾಂಗ್ರೆಸ್ ಪಕ್ಷ ಮತ್ತು ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ನಡೆಸುತ್ತಿದ್ದ ಮಹಾತ್ಮ ಗಾಂಧಿ ಫೌಂಡೇಶನ್ ಜಂಟಿಯಾಗಿ ಆಯೋಜಿಸಿತ್ತು. ಅಲ್ಲದೆ ತುಷಾರ್ ಗಾಂಧಿ ಅವರು ಇಡೀ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆ ಕಾಲದ ಕಾಂಗ್ರೆಸ್ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಇತರ ರಾಜಕೀಯ ನಾಯಕರಾದ ಅಹ್ಮದ್ ಪಟೇಲ್, ಸಲ್ಮಾನ್ ಖುರ್ಷಿದ್ ಮತ್ತು ರಾಹುಲ್ ಗಾಂಧಿ ಕೂಡ ವಿವಿಧ ಭಾಗಗಳಲ್ಲಿ ಪಾದಯಾತ್ರೆ ನಡೆಸಿದ್ದರು.

ಚಾರಣ-ಸ್ನೇಹಿ ಮಾರ್ಗವೆಂದು ಘೋಷಿಸಿದರು.. ಏಪ್ರಿಲ್ 6, 2005 ರಂದು ನಡೆದ ಮೆರವಣಿಗೆಯ ಮುಕ್ತಾಯದ ಅಧ್ಯಕ್ಷತೆ ವಹಿಸಿದ್ದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಈ 386 ಕಿ.ಮೀ ಮಾರ್ಗವನ್ನು ಪಾರಂಪರಿಕ ಮಾರ್ಗ ಎಂದು ಗೊತ್ತುಪಡಿಸಿದ್ದರು. ಅಲ್ಲದೆ ಈ ಮಾರ್ಗವನ್ನು ಚಾರಣ-ಸ್ನೇಹಿ ಮಾರ್ಗವೆಂದು ಘೋಷಿಸಿದರು. ಗಾಂಧಿ ತಂಗಿದ್ದ ಎಲ್ಲಾ ತಾಣಗಳನ್ನು ಪಾರಂಪರಿಕ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಿಂಗ್ ಹೇಳಿದ್ದರು. ಜೊತೆಗೆ ಸಬರಮತಿ ಆಶ್ರಮದ ಅಭಿವೃದ್ಧಿಗಾಗಿ 10 ಕೋಟಿ ರೂ ಬಿಡುಗಡೆ ಮಾಡಿದ್ದರು. ಅಂದಿನ ಯುಪಿಎ ಸರ್ಕಾರವು ದಂಡಿಯಲ್ಲಿ ಗಾಂಧಿ ಅಧ್ಯಯನಕ್ಕೆ ಮೀಸಲಾಗಿರುವ ಗ್ರಂಥಾಲಯವನ್ನು ಸ್ಥಾಪಿಸಿ, 81 ಮೆರವಣಿಗೆದಾರರ ಪ್ರತಿಮೆಗಳನ್ನು ಅಲ್ಲಿ ನಿರ್ಮಿಸಿತ್ತು. ರಾಷ್ಟ್ರೀಯ ಉಪ್ಪು ಸತ್ಯಾಗ್ರಹ ಸ್ಮಾರಕ ಎಂದು ಕರೆಯಲ್ಪಡುವ ಈ ಯೋಜನೆಯು ಈಗ ಬಹುತೇಕ ಪೂರ್ಣಗೊಂಡಿದೆ.

ಆ ದಿನದಂದು ಪ್ರಧಾನಮಂತ್ರಿಯ ದಿನಚರಿ .. ಆಶ್ರಮದ ಮೂಲಗಳ ಪ್ರಕಾರ ಅಂದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಬರಮತಿ ಆಶ್ರಮದಲ್ಲಿರುವ ಸಬರಮತಿ ಆಶ್ರಮ ಸಂರಕ್ಷಣೆ ಮತ್ತು ಸ್ಮಾರಕ ಟ್ರಸ್ಟ್ (ಎಸ್‌ಎಪಿಎಂಟಿ) ನಿರ್ವಹಣೆ ಮಾಡುತ್ತಿರುವ ಹೃದಯ ಕುಂಜ್ ಸ್ಥಳಕ್ಕೆ ಬೆಳಿಗ್ಗೆ 10: 30 ಕ್ಕೆ ಭೇಟಿ ನೀಡಲಿದ್ದಾರೆ. ಹೃದಯ ಕುಂಜ್ ಭೇಟಿಯ ನಂತರ, ಪ್ರಧಾನಮಂತ್ರಿ ಅಭಯ್ ಘಾಟ್ ಪಕ್ಕದ ಮೈದಾನದಲ್ಲಿ ಸಭೆ ಉದ್ದೇಶಿಸಿ ಮಾತಾನಾಡುವ ನಿರೀಕ್ಷೆಯಿದೆ.