VIDEO: ಮೈದಾನದಲ್ಲೇ ಸಹ ಆಟಗಾರನಿಗೆ ಏಟು: ಕುಸಿದು ಬಿದ್ದ ವಿಕೆಟ್ ಕೀಪರ್..!
PSL 2025 MS vs LHQ: ಪಾಕಿಸ್ತಾನ್ ಸೂಪರ್ ಲೀಗ್ನ 12ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ಸ್ ತಂಡವು 20 ಓವರ್ಗಳಲ್ಲಿ 228 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಲಾಹೋರ್ ಖಲಂದರ್ಸ್ ತಂಡವು 20 ಓವರ್ಗಳಲ್ಲಿ 195 ರನ್ಗಳಿಸಿ 33 ರನ್ಗಳಿಂದ ಸೋಲೊಪ್ಪಿಕೊಂಡಿದೆ.
PSL 2025: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಮುಲ್ತಾನ್ನಲ್ಲಿ ಪಿಎಸ್ಎಲ್ನ 12ನೇ ಪಂದ್ಯದಲ್ಲಿ ಲಾಹೋರ್ ಖಲಂದರ್ಸ್ ಹಾಗೂ ಮುಲ್ತಾನ್ ಸುಲ್ತಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಲ್ತಾನ್ ಸುಲ್ತಾನ್ಸ್ 20 ಓವರ್ಗಳಲ್ಲಿ 228 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಲಾಹೋರ್ ಖಲಂದರ್ಸ್ ವಿರುದ್ಧ ಮುಲ್ತಾನ್ ಸುಲ್ತಾನ್ಸ್ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದ್ದರು. ಅದರಲ್ಲೂ ಯುವ ವೇಗಿ ಉಬೈದ್ ಶಾ 3 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಸ್ಯಾಮ್ ಬಿಲ್ಲಿಂಗ್ಸ್ ವಿಕೆಟ್ ಪಡೆದ ಬಳಿಕ ಉಬೈದ್ ಶಾ ಮಾಡಿಕೊಂಡ ಎಡವಟ್ಟಿನಿಂದಾಗಿ ವಿಕೆಟ್ ಕೀಪರ್ ಉಸ್ಮಾನ್ ಖಾನ್ ಗಾಯಗೊಂಡಿದ್ದು ಮಾತ್ರ ವಿಪರ್ಯಾಸ.
ಸ್ಯಾಮ್ ಬಿಲ್ಲಿಂಗ್ ವಿಕೆಟ್ ಕಬಳಿಸಿ ಉಬೈದ್ ಖಾನ್ ಮೈಮರೆತು ಸಂಭ್ರಮಿಸಿದ್ದರು. ಅತ್ತ ಕಡೆಯಿಂದ ವಿಕೆಟ್ ಕೀಪರ್ ಉಸ್ಮಾನ್ ಖಾನ್ ಅಭಿನಂಧಿಸಲು ಓಡಿ ಬಂದಿದ್ದರು. ಈ ವೇಳೆ ನೋಡದೇ ಉಬೈದ್ ಖಾನ್ ಹೈ-ಫೈ ನೀಡಿದ್ದಾರೆ. ಅಲ್ಲದೆ ಅವರ ಕೈ ನೇರವಾಗಿ ಉಸ್ಮಾನ್ ಖಾನ್ ಅವರ ಮುಖಕ್ಕೆ ಬಡಿದಿದೆ.
ಕೈ ಬೀಸಿದ ರಭಸಕ್ಕೆ ಉಸ್ಮಾನ್ ಖಾನ್ ಕುಸಿದು ಬಿದ್ದರು. ಇದರಿಂದ ಕೆಲ ಕಾಲ ಪಂದ್ಯ ಸ್ಥಗಿತವಾಗಿತ್ತು. ಇದೀಗ ಈ ಎಡವಟ್ಟಿನ ವಿಡಿಯೋ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮುಲ್ತಾನ್ ಸುಲ್ತಾನ್ಸ್ ನೀಡಿದ 228 ರನ್ಗಳ ಗುರಿ ಬೆನ್ನತ್ತಿದ ಲಾಹೋರ್ ಖಲಂದರ್ಸ್ ತಂಡವು 20 ಓವರ್ಗಳಲ್ಲಿ 195 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮುಲ್ತಾನ್ ಸುಲ್ತಾನ್ಸ್ ತಂಡವು 33 ರನ್ಗಳ ಜಯ ಸಾಧಿಸಿದೆ.