VIDEO: ನಾನೇ ಕೆಎಲ್ ರಾಹುಲ್… LSGಗೆ ಕನ್ನಡಿಗನ ತಿರುಗೇಟು
IPL 2025 KL Rahul vs LSG: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 40ನೇ ಪಂದ್ಯದ ಮೂಲಕ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅದು ಆಕರ್ಷಕ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ಎಂಬುದು ವಿಶೇಷ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೂಲಕ ಕೆಎಲ್ ರಾಹುಲ್ (KL Rahul) ಒಂದೊಂದೇ ಫ್ರಾಂಚೈಸಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ನ 24ನೇ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಆರ್ಸಿಬಿ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಹುಲ್ ಇದು ನನ್ನ ಅಡ್ಡ ಎಂಬ ರೀತಿಯಲ್ಲಿ ವೃತ್ತ ಎಳೆದು ಸಂಭ್ರಮಿಸಿದ್ದರು. ಇದೀಗ ತನ್ನ ಮಾಜಿ ತಂಡದ ವಿರುದ್ಧ ಕೂಡ ಕೆಎಲ್ ರಾಹುಲ್ ಕೋಲ್ಡ್ ಸೆಲೆಬ್ರೇಷನ್ ತೋರಿಸಿದ್ದಾರೆ.
ಲಕ್ನೋನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 159 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಜವಾಬ್ದಾರಿಯುತವಾಗಿ ಇನಿಂಗ್ಸ್ ಕಟ್ಟಿದ ರಾಹುಲ್ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಹೀಗೆ ಅರ್ಧಶತಕ ಪೂರೈಸಿದ ಬಳಿಕ ಕೆಎಲ್ ರಾಹುಲ್ ತನ್ನ ಜೆರ್ಸಿ ಮೇಲಿನ ಹೆಸರು ತೋರಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಲಕ್ನೋ ಸೂಪರ್ ಜೈಂಟ್ಸ್ಗೆ ನಾನೇ ಕೆಎಲ್ ರಾಹುಲ್ ಎಂಬ ಸಂದೇಶ ಸಾರಿದ್ದಾರೆ. ಇದೀಗ ಕನ್ನಡಿಗನ ಈ ಕೋಲ್ಡ್ ಸೆಲೆಬ್ರೇಷನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ 57 ರನ್ ಬಾರಿಸಿ ಅಜೇಯರಾಗಿ ಉಳಿದ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 17.5 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ಅಂದಹಾಗೆ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ಪರ ಮೂರು ವರ್ಷ ಆಡಿದ್ದರು. ಆದರೆ ಕಳೆದ ಸೀಸನ್ನಲ್ಲಿ ಎಲ್ಎಸ್ಜಿ ತಂಡ ಸೋತಾಗ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಮನ ನೊಂದಿದ್ದ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದರು.
ಅದರಂತೆ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುತ್ತಿರುವ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧವೇ ಅರ್ಧಶತಕ ಬಾರಿಸಿ ನಾನೇ ಕೆಎಲ್ ರಾಹುಲ್ ಎಂದು ತಿರುಗೇಟು ನೀಡಿದ್ದಾರೆ.