ಬೆಳಗಾವಿ: ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಬೆಳಗಾವಿಯ ಬೀರಪ್ಪ ಡೋಣಿ, ಕುರಿ ಮೇಯಿಸುವ ಕುರಿಗಾಹಿಯ ಪುತ್ರ, ಯುಪಿಎಸ್ಸಿ ಪರೀಕ್ಷೆಯಲ್ಲಿ 551ನೇ ರ್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಕುರಿ ಕಾಯುತ್ತಾ ಯುಪಿಎಸ್ಸಿಗೆ ತಯಾರಿ ಮಾಡಿದ ಬೀರಪ್ಪನ ಈ ಸಾಧನೆಗೆ ಮುಖ್ಯಮಂತ್ರಿಗಳು ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ. ಅವರು ಐಪಿಎಸ್ ಅಧಿಕಾರಿಯಾಗುವ ಆಸೆಯನ್ನು ಹೊಂದಿದ್ದಾರೆ.
ಬೆಳಗಾವಿ, ಏಪ್ರಿಲ್ 23: ಕಾಡು-ಮೇಡು ಅಲೆದು ಕುರಿ ಮೇಯಿಸುವ ಕುರಿಗಾಹಿಯ ಪುತ್ರ ಯುಪಿಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ 551 ರ‍್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಎಮಗೆ ಗ್ರಾಮದ ಸಿದ್ದಪ್ಪ ಹಾಗೂ ಬಾಳವ್ವ ಡೋಣಿ ದಂಪತಿಗಳ ತೃತಿಯ ಸುಪುತ್ರ ಬೀರಪ್ಪ ಸಿದ್ದಪ್ಪ ಡೋಣಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಬೀರಪ್ಪ ಸಿದ್ದಪ್ಪ ಡೋಣಿ ಕುರಿ ಕಾಯುತ್ತಿರುವಾಗಲೇ ಯುಪಿಎಸ್ಸಿ ಫಲಿತಾಂಶ ಬಂದಿದ್ದು, ತಾನು ಪಾಸಾದ ಸುದ್ದಿ ತಿಳಿದು ಕುಣಿದು ಕುಪ್ಪಳಿಸಿದ್ದಾರೆ. ಯುವಕ ಬೀರಪ್ಪ ಕುರಿ ಕಾಯುತ್ತಾ ಯುಪಿಎಸ್ಸಿಗೆ ತಯಾರಿ ನಡೆಸಿದ್ದರು. ಬೀರಪ್ಪ ಅವರ ಸಾಧನೆಗೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಫುಲ್ ಖುಷ್ ಆಗಿದ್ದಾರೆ. ಯುವಕ ಬೀರಪ್ಪ ಸದ್ಯ ಬೆಳಗಾವಿ ತಾಲೂಕಿನ ನಾನಾವಾಡಿಯಲ್ಲಿದ್ದು, ಗದ್ದೆಯೊಂದರಲ್ಲಿ ಕುರಿ ಮೇಯಿಸುತ್ತಿದ್ದಾರೆ. ಬೀರಪ್ಪ ಅವರ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಕುಟುಂಬಸ್ಥರು ಬೀರಪ್ಪ ಅವರಿಗೆ ಆರತಿ ಎತ್ತಿ ಹಾರ ಹಾಕಿ ಕೈಗೆ ಕುರಿ ಮರಿ ಕೊಟ್ಟು ಸ್ಮಾನಿಸಿದರು. ಬೀರಪ್ಪ ಅವರು ಐಪಿಎಸ್ ಆಫೀಸರ್ ಆಗಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.