ಗುಹಾಹಾಟಿ: ಸರ್ಕಾರದ ಹಣದಲ್ಲಿ ಧಾರ್ಮಿಕ ಗ್ರಂಥ ಕುರಾನ್ನ್ನು ಬೋಧಿಸಲು ಸಾಧ್ಯವಿಲ್ಲ ಎಂದು ಅಸ್ಸಾಂನ ಶಿಕ್ಷಣ ಸಚಿವ ಹಿಮಾಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.
ಸರ್ಕಾರದ ವತಿಯಿಂದ ನಡೆಯುತ್ತಿದ್ದ ಮದ್ರಸಾಗಳನ್ನು ಮುಚ್ಚುವ ಮಸೂದೆಯೊಂದನ್ನು ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಅಸ್ಸಾಂ ಸರ್ಕಾರ ಮಂಡಿಸಲಿದೆ. ಸ್ವಾತಂತ್ರ್ಯಾ ಪೂರ್ವದಲ್ಲಿ ಮುಸ್ಲಿಂ ಲೀಗ್ ಆರಂಭಿಸಿದ್ದ ಈ ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ.
ಪ್ರಸ್ತುತ ರಾಜ್ಯದ 683 ಸರ್ಕಾರಿ ಮದ್ರಸಾಗಳ ನಿರ್ವಹಣೆಗೆ ಪ್ರತಿ ವರ್ಷ 260 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಅಸ್ಸಾಂನ ಶಿಕ್ಷಣ ಸಚಿವ ಹಿಮಾಂತಾ ಬಿಸ್ವಾ ಸರ್ಮಾ ತಿಳಿಸಿದ್ದಾರೆ. ಸರ್ಕಾರಿ ಮದ್ರಸಾಗಳನ್ನು ಸಾರ್ವಜನಿಕ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು, ಇಲ್ಲವೇ ಮುಚ್ಚಲಾಗುವುದು.
ಸಂಸ್ಕೃತ ಶಾಲೆಗಳನ್ನು ಸಹ ಮುಚ್ಚಲಾಗುವುದು
ಸರ್ಕಾರದಿಂದ ನಡೆಸಲಾಗುತ್ತಿದ್ದ ಸಂಸ್ಕೃತ ಶಾಲೆಗಳನ್ನು ಸಹ ಮುಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ. 1995ರಲ್ಲಿ ಜಾರಿಗೆ ಬಂದಿದ್ದ ಅಸ್ಸಾಂ ಮದ್ರಸಾಸ್ ಎಜುಕೇಶನ್ ಕಾಯ್ದೆಯನ್ನು ರದ್ದುಗೊಳಿಸಿ ನೂತನ ಕಾಯ್ದೆ ಜಾರಿಗೆ ತರಲು ಸರ್ಬಾನಂದ್ ಸೊನೊವಲ್ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ.
ಮದ್ರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಪಾಲಕರಿಗೆ ತಮ್ಮ ಮಕ್ಕಳು ಇತರ ಶಾಲೆಗಳಂತೆ ಸಾಮಾನ್ಯ ವಿಷಯಗಳನ್ನು ಅಧ್ಯಯನ ಮಾಡುತ್ತಿಲ್ಲ ಎಂಬ ವಿಷಯ ಅರಿವಿರಲಿಲ್ಲ. ಇತ್ತೀಚಿನ ಸರ್ವೆಯೊಂದರಲ್ಲಿ ಈ ಆಘಾತಕಾರಿ ವಿಷಯ ಬಹಿರಂಗವಾಗಿತ್ತು. ಈ ಸರ್ವೆ ಆಧರಿಸಿ ನೂತನ ಮಸೂದೆ ಮಂಡಿಸಲು ಅಸ್ಸಾಂ ಸರ್ಕಾರ ಸಿದ್ಧತೆ ನಡೆಸಿದೆ.
ಅಸ್ಸಾಂ ಹೊರತಾಗಿ ಭಾರತೀಯ ಕಲೆ-ಸಂಸ್ಕೃತಿ ಪರಿಪೂರ್ಣವಾಗುವುದಿಲ್ಲ: ಅಮಿತ್ ಶಾ