ಗುವಹಾಟಿ: ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡುವಾಗ ಲೈಂಗಿಕ ವರ್ಗೀಕೃತ ವೀರ್ಯ ಬಳಸಿ ವೈಜ್ಞಾನಿಕ ವಿಧಾನದಲ್ಲಿ ಗರ್ಭಧಾರಣೆ ಮಾಡಲಾಗುವುದು. ಆ ಮೂಲಕ, ಮುಂದಿನ 10-20 ವರ್ಷಗಳ ಬಳಿಕ ಕೇವಲ ಹಸುಗಳು ಮಾತ್ರ ಹುಟ್ಟುವಂತೆ ಹಾಗೂ ಹೋರಿಗಳು ಹುಟ್ಟದಂತೆ ಮಾಡಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಲೈಂಗಿಕ ವರ್ಗೀಕೃತ ವೀರ್ಯ ಬಳಸಿಕೊಂಡು ಕೃತಕ ಗರ್ಭಧಾರಣೆ ಮಾಡಬಹುದು. ಇದರಿಂದ ಮುಂದಿನ ವರ್ಷಗಳಲ್ಲಿ ಹೆಣ್ಣು ಕರು (ಹಸುಗಳು) ಮಾತ್ರ ಜನಿಸುತ್ತವೆ. ಈ ಬಗ್ಗೆ ಪಶುಸಂಗೋಪನಾ ಇಲಾಖೆಯು ಕೂಡ ಮಾಹಿತಿ ನೀಡಿದೆ ಎಂದು ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ವರ್ಗೀಕೃತ ವೀರ್ಯ ಬಳಸುವ ವಿಧಾನವು ಮುಂದೆ ಜನಿಸುವ ಕರುವಿನ ಲಿಂಗ ಯಾವುದು ಇರಬೇಕು ಎಂದು ಮೊದಲೇ ನಿರ್ಧರಿಸುವಂತೆ ಮಾಡುತ್ತದೆ.
ಪಿಟಿಐ ವರದಿಯ ಮಾಹಿತಿಯಂತೆ, ಹಿಮಂತ ಬಿಸ್ವ ಶರ್ಮಾ ಈ ಯೋಜನೆ ಬಗ್ಗೆ ತಿಳಿಸಲು ಹಿಂದೂ ಪುರಾಣವನ್ನು ಕೂಡ ಉಲ್ಲೇಖಿಸಿದ್ದಾರೆ. ಅದರಂತೆ ಪೌರಾಣಿಕವಾಗಿ ಹೋರಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳು ಇದ್ದವು. ಪುರಾಣಗಳಲ್ಲಿ ಕಾಮಧೇನುವಿನಂತಹ ಹಸುಗಳ ಬಗ್ಗೆ ಮಾತ್ರ ಉಲ್ಲೇಖವಿದೆ. ಅಂದರೆ, ಹಸುಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ಏನೋ ಇದ್ದಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹಿಮಂತ ಬಿಸ್ವ ಶರ್ಮಾ ಚಹಾ ಗಾರ್ಡನ್ನಲ್ಲಿ ಗೋಶಾಲೆ ನಿರ್ಮಿಸುವ ಬಗ್ಗೆಯೂ ಮಾತನಾಡಿದ್ದಾರೆ. ಅದರಿಂದ ಹಸುಗಳ ರಕ್ಷಣೆ ಮಾಡಬಹುದು. ಜೊತೆಗೆ, ದನದ ಸೆಗಣಿಯನ್ನು ಚಹಾ ಗಾರ್ಡನ್ಗೆ ಗೊಬ್ಬರವಾಗಿಯೂ ಬಳಕೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಧಾನಸಭೆಯಲ್ಲಿ ‘ಜಾನುವಾರು ಸಂರಕ್ಷಣಾ ಕಾಯ್ದೆ 2021’ಯ ಮಸೂದೆ ಮಂಡಿಸಿದ್ದರು. ಇದರ ಪ್ರಕಾರ ಹಿಂದೂ, ಜೈನ, ಸಿಖ್ ಮತ್ತು ಇತರ ಗೋಮಾಂಸ ತಿನ್ನದ ಸಮುದಾಯಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ, ಯಾವುದೇ ದೇವಾಲಯ ಅಥವಾ ಸತ್ರದ (ವೈಷ್ಣವ ಮಠಗಳು) 5 ಕಿ.ಮೀ ವ್ಯಾಪ್ತಿಯಲ್ಲಿ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ ಮತ್ತು ಖರೀದಿ ನಿಷೇಧಿಸಲಾಗುತ್ತದೆ.
ಇದು ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ, 2021 ರ ಒಂದು ವಿಶಿಷ್ಟ ಅಂಶವಾಗಿದೆ. ಇದು ಜಾನುವಾರುಗಳ “ಹತ್ಯೆ, ಬಳಕೆ, ಅಕ್ರಮ ಸಾಗಣೆ” ಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. 1950 ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, “ಹತ್ಯೆ, ಬಳಕೆ ಮತ್ತು ದನಗಳ ಸಾಗಣೆಯನ್ನು ನಿಯಂತ್ರಿಸಲು” ಸಾಕಷ್ಟು ಕಾನೂನು ನಿಬಂಧನೆಗಳ ಕೊರತೆಯಿದೆ ಎಂದು ಶರ್ಮಾ ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: Explainer: ಅಸ್ಸಾಂನಲ್ಲಿ ಗೋಮಾಂಸ ಸೇವಿಸದ ಸಮುದಾಯದವರ ಪ್ರದೇಶದಲ್ಲಿ ಗೋಮಾಂಸ ನಿಷೇಧ; ಏನಿದು ಜಾನುವಾರು ಸಂರಕ್ಷಣಾ ಮಸೂದೆ?
ಗೋಶಾಲೆಯಲ್ಲಿಯೇ ಕೊವಿಡ್ ಐಸೋಲೇಶನ್ ಕೇಂದ್ರ ಸ್ಥಾಪನೆ; ಗೋಮೂತ್ರ, ಹಾಲು, ತುಪ್ಪದ ಔಷಧಗಳಿಂದಲೇ ಚಿಕಿತ್ಸೆ
Published On - 4:26 pm, Fri, 16 July 21